ಪಂಚಲಿಂಗೇಶ್ವರಸ್ವಾಮಿ ದೇವಸ್ಥಾನಕ್ಕೆ ಕಾಯಕಲ್ಪ: ಮುಖಂಡರೊಂದಿಗೆ ಶಾಸಕ ರವಿಕುಮಾರ್ ಗಣಿಗ ಚರ್ಚೆ

Kayakalpa to Panchalingeswaraswamy Temple Mandya
Published on

ಮಂಡ್ಯ: ತಾಲೂಕಿನ ಐತಿಹಾಸಿಕ ಸ್ಥಳ ಕೆರಗೋಡು ಗ್ರಾಮದ ಪಂಚಲಿಂಗೇಶ್ವರಸ್ವಾಮಿ ದೇವಸ್ಥಾನಕ್ಕೆ ಅಭಿವೃದ್ಧಿ ಮಾಡಲು 3 ಕೋಟಿ ರೂ ವಿಶೇಷ ಅನುದಾನ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ರವಿಕುಮಾರ್ ಗಣಿಗ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಅಂತೆಯೇ ಪೂಜೆ ಸಲ್ಲಿಸುವ ವೇಳೆ ದೇವರ ಬಲಭಾಗದಿಂದ ಹೂವು ನೀಡಿರುವುದು ಶುಭ ಸೂಚನೆ ಸಿಕ್ಕಂತಾಗಿದೆ.

ಸುಮಾರು 900 ವರ್ಷದ ಇತಿಹಾಸವಿರುವ ಪಂಚಲಿಂಗೇಶ್ವರಸ್ವಾಮಿ ದೇವಸ್ಥಾನವನ್ನು ಎರಡನೇ ತಲಕಾಡು ಎಂತಲೂ ಕರೆಯುತ್ತಾರೆ. ಅಂದರೆ ತಲಕಾಡಿನ ಪಂಚಲಿಂಗದ ನಂತರ ಕೆರಗೋಡು ಗ್ರಾಮದಲ್ಲಿ ಪಂಚಲಿಂಗೇಶ್ವರಸ್ವಾಮಿಯನ್ನು ಕಾಣಬಹುದು. ಅರಣ್ಯ ಪ್ರದೇಶವಾಗಿದ್ದ ಈ ಸ್ಥಳದಲ್ಲಿ ಲಿಂಗ ಉದ್ಭವಿಸಿದ ಇತಿಹಾಸವಿದೆ. ರಾಜರ ಮನೆಯಲ್ಲಿದ್ದ ಹಸುಗಳು ಈ ಭಾಗದಲ್ಲಿ ಮೇಯಲು ಬರುತ್ತಿದ್ದವು. ಈ ಪೈಕಿ ಒಂದು ಹಸು ಮಾತ್ರ ಗಿಡದ ಒಳಗೆ ಹೋಗಿ ಬರುತ್ತಿತ್ತು. ಮಾತ್ರವಲ್ಲದೆ ಸಂಜೆ ಮನೆಯಲ್ಲಿ ಹಾಲು ಕೊಡುತ್ತಿರಲಿಲ್ಲ. ಇದರಿಂದ ಕುತೂಹಲಗೊಂಡಿದ್ದ ಮಾಲೀಕ, ಒಂದು ದಿನ ಹಸುವಿನ ಹಿಂದೆಯೇ ಹೋಗಿ ನೋಡಿದಾಗ ಉದ್ಭವ ಲಿಂಗ ಕಾಣಿಸಿತು. ತದನಂತರ ಮತ್ತೆ ನಾಲ್ಕು ಲಿಂಗ ಪ್ರತಿಷ್ಠಾಪಿಸಿ ಪೂಜೆ, ಪುನಸ್ಕಾರ ಆರಂಭವಾದವು ಎನ್ನುವ ಐತಿಹ್ಯವಿದೆ.

ಚೋಳರ ಕಾಲದ ಮಾದರಿಯಲ್ಲಿ ನಿರ್ಮಾಣವಾಗಿರುವ ಪಂಚಲಿಂಗೇಶ್ವರಸ್ವಾಮಿ ದೇವಸ್ಥಾನ ಅಭಿವೃದ್ಧಿಯಿಂದ ವಂಚಿತವಾಗಿತ್ತು. ಮಳೆ ಬಂದಾಗ ಸೋರುತ್ತಿದ್ದು, ಕೆಲ ಗೋಡೆ ಶಿಥಿಲವಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ರವಿಕುಮಾರ್ ಗಣಿಗ ದೇವಸ್ಥಾನದ ಅಭಿವೃದ್ಧಿಗೆ ಯೋಜನೆ ರೂಪಿಸಿದರು. ಅದರಂತೆ ಮುಖ್ಯಮಂತ್ರಿ ಅವರ ವಿಶೇಷ ಅನುದಾನದಲ್ಲಿ ಮೂರು ಕೋಟಿ ರೂಗಳನ್ನು ಅಭಿವೃದ್ಧಿಗೆಂದು ಬಿಡುಗಡೆ ಮಾಡಿಸಿದ್ದಾರೆ. ಎರಡು ಕೋಟಿ ರೂ ಮುಜರಾಯಿ ಹಾಗೂ ಒಂದು ಕೋಟಿ ರೂ ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆಯಾಗಲಿದೆ.

ಸೂರ್ಯ ರಶ್ಮಿ ಸ್ಪರ್ಶಿಸುವ ದೇವಾಲಯ: ದೇವಸ್ಥಾನ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗುತ್ತಿದೆ. ಕಾರಣ, ಈ ದೇವಾಲಯದ ವಿಶೇಷ ಸೂರ್ಯರಶ್ಮಿ ಸ್ಪರ್ಶ. ಪ್ರತಿ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಸೂರ್ಯನ ಕಿರಣಗಳು ಪಂಚಲಿಂಗೇಶ್ವರಸ್ವಾಮಿಗೆ ಸ್ಪರ್ಶಿಸುತ್ತದೆ. ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಅಚ್ಚುಕಟ್ಟಾಗಿ ಮಾಡುವ ನಿಟ್ಟಿನಲ್ಲಿ ಇಂಜಿನಿಯರ್‌ಗಳು ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಅಂತೆಯೇ ಇನ್ನೊಂದು ತಿಂಗಳಲ್ಲಿ ಕಾಮಗಾರಿಗೆ ಚಾಲನೆ ಸಿಗುವ ಸಾಧ್ಯತೆ ಇದೆ.

ಸಭೆಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಶಾಂತ್‌ಬಾಬು, ಶ್ರೀಕಾಂತ್, ಆನಂದ್, ಮರಿಲಿಂಗನದೊಡ್ಡಿ ರಾಜೇಶ್, ವಸಂತರಾಜು ಇತರರಿದ್ದರು.

Kayakalpa to Panchalingeswaraswamy Temple Mandya

ಕೆರೆ ಅಭಿವೃದ್ಧಿಗೆ 4 ಕೋಟಿ ರೂ

ದೇವಸ್ಥಾನದ ಎದುರಿನಲ್ಲಿರುವ ಕೆರೆ ಅಭಿವೃದ್ಧಿಗೂ ಯೋಜನೆ ಸಿದ್ಧವಾಗುತ್ತಿದೆ. ಕಾವೇರಿ ನೀರಾವರಿ ನಿಗಮದಿಂದ 4 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ನಡೆಯಲಿದೆ. ವಾಯು ವಿಹಾರ, ಗಿಡ ನೆಡುವುದು ಸೇರಿದಂತೆ ಹಲವು ಕಾಮಗಾರಿ ಅನುಷ್ಠಾನಗೊಳ್ಳಲಿದೆ. ಪಂಚಲಿಂಗೇಶ್ವರಸ್ವಾಮಿ ದೇವಸ್ಥಾನದ ಕ್ಷೇತ್ರ ಪುರಾಣ ಪ್ರಸಿದ್ಧವಾಗಿರುವುದರಿಂದ ಪ್ರವಾಸಿ ಸ್ಥಳವನ್ನಾಗಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಕಳೆದ ಎರಡು ವರ್ಷದಿಂದ ಶಾಸಕ ರವಿಕುಮಾರ್ ಗಣಿಗ ನೇತೃತ್ವದಲ್ಲಿ ವಿಜೃಂಭಣೆಯಿಂದ ಪಂಚಲಿಂಗೋತ್ಸವ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net