ಕವಿತಾ ಹಿರೇಮಠರಿಗೆ ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರ

19 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧರ್ಮ, ಸಂಸ್ಕೃತಿ, ಸಾಹಿತ್ಯ, ಕಲೆ ಮತ್ತಿತರ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ ಮಹಿಳೆಯರಿಗೆ ಉತ್ತರ ಪ್ರದೇಶದ ವಾರಾಣಸಿಯ ಕಾಶಿ ಜಗದ್ಗುರು ಪೀಠ ನೀಡುವ ಶ್ರೀಮತಿ ಮಾಲತಿ ಮಹಾರುದ್ರಪ್ಪ ಖೇಣಿ ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರಕ್ಕೆ ಧಾರವಾಡದ ಕವಿತಾ ಗುರುಸಿದ್ಧಯ್ಯ ಹಿರೇಮಠ ಆಯ್ಕೆಯಾಗಿದ್ದಾರೆ.
ಧಾರವಾಡ ತಾಲೂಕು ಮಾರಡಗಿ ಗ್ರಾಮದ ಕವಿತಾ ಅವರು ಕಾಶಿ ಜ್ಞಾನ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಸಿದ್ಧಾಂತ ಶಿಖಾಮಣಿಯ ಆಧ್ಯಾತ್ಮಿಕ ಆಶೀರ್ವಚನ ಕೇಳಿ ಪ್ರಭಾವಿತರಾಗಿ ಅವರ ಮಾರ್ಗದರ್ಶನದಲ್ಲೇ ಸಂಸ್ಕೃತ ಅಧ್ಯಯನ ರೂಢಿಸಿಕೊಂಡರು. ವಿಶ್ವದ 19 ಭಾಷೆಗಳಲ್ಲಿ ಲಭ್ಯವಿರುವ ವೀರಶೈವ ಧರ್ಮಗ್ರಂಥ ಶ್ರೀ ಸಿದ್ಧಾಂತ ಶಿಖಾಮಣಿ ಪಾರಾಯಣದಲ್ಲಿ ಪರಿಪಕ್ವತೆ ಸಾಧಿಸಿ 3 ದಶಕಗಳ ಕಾಲ ಜನರಿಗೆ ಸಿದ್ಧಾಂತ ಶಿಖಾಮಣಿಯ ಸಾರ ತಲುಪಿಸಿದ ಕೀತಿರ್ಗೆ ಭಾಜನರಾಗಿದ್ದಾರೆ.
ಮಹಾರಾಷ್ಟ್ರದ ಖ್ಯಾತ ಉದ್ಯಮಿ ಬಾಬಾಸಾಹೇಬ ಕಲ್ಯಾಣಿ ಅವರ ಧರ್ಮಪತ್ನಿ ಸುನಿತಾ ಕಲ್ಯಾಣಿ ಅವರು ತಮ್ಮ ಮಾತೋಶ್ರೀ ದಿ. ಮಾಲತಿ ಮಹಾರುದ್ರಪ್ಪ ಖೇಣಿ ಹೆಸರಿನ ಪುಸ್ಕಾರವನ್ನು ಅತ್ಯುನ್ನತ ಸಾಧನೆ ಮಾಡಿದ ಮಹಿಳೆಗೆ ನೀಡಲು ಸಂಕಲ್ಪಿಸಿ ಕಾಶಿ ಜಗದ್ಗುರು ಪೀಠದಲ್ಲಿ ದತ್ತಿನಿಧಿ ಸ್ಥಾಪಿಸಿದ್ದಾರೆ. ಪುರಸ್ಕಾರವು 1 ಲಕ್ಷ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ.
ಜು. 22ರಂದು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಕಾಶಿ ಪೀಠದ ಉಭಯ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಪುರಸ್ಕಾರ ಪ್ರದಾನ ಸಮಾರಂಭ ಜರುಗಲಿದೆ ಎಂದು ಕಾಶಿ ಜಗದ್ಗುರು ಪೀಠದ ವ್ಯವಸ್ಥಾಪಕ ಶಿವಾನಂದ ಹಿರೇಮಠ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net