

ಪ್ರಶಾಂತ ಭಾಗ್ವತ, ಉಡುಪಿ
ಕಾವಿ ಕಲೆ ಉಳಿಸಲು ಹಾಗೂ ಬೆಳೆಸಲು 22 ವರ್ಷದಿಂದ ಅವಿರತವಾಗಿ ಶ್ರಮಿಸುತ್ತಿರುವ ಉಡುಪಿಯ ಕಲಾವಿದ ಡಾ. ಜನಾರ್ದನ್ ರಾವ್ ಹಾವಂಜೆ, ಕಾವಿ ಕೆಲಿಡೋಸ್ಕೋಪ್ ಶೀರ್ಷಿಕೆಯಡಿ ವಿಭಿನ್ನ ಹಾಗೂ ಪ್ರಯೋಗಾತ್ಮಕ ಏಕವ್ಯಕ್ತಿ ಕಲಾ ಪ್ರದರ್ಶನ ಆಯೋಜಿಸಿದ್ದಾರೆ.
ಕಾವಿ ಆರ್ಟ್ ಫೌಂಡೇಷನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜನೆಯಲ್ಲಿ ಕರ್ನಾಟಕ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನವೆಂಬರ್ ತಿಂಗಳಪೂರ್ತಿ ಪ್ರದರ್ಶನ ನಡೆಯಲಿದೆ. ಬೆಂಗಳೂರಿನ ಕುಮಾರಕೃಪಾ ರಸ್ತೆ ಮಾರ್ಗದಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ ನ.9ರಿಂದ 17ರ ವರೆಗೆ ಹಾಗೂ ಜಯನಗರದಲ್ಲಿರುವ ಯುವಕ ಸಂಘದ ಆರ್ಟ್ ಮ್ಯಾರ್ಟಸ್ ಗ್ಯಾಲರಿಯಲ್ಲಿ ನ.19ರಿಂದ ಡಿ.1ರವರೆಗೆ ಸುಮಾರು 60ರಷ್ಟು ಕಾವಿ ಭಿತ್ತಿಚಿತ್ರ ಕಲಾಕೃತಿಗಳು ಪ್ರದರ್ಶನಗೊಳ್ಳಲಿದೆ.
ಕಾವಿ ಕಲೆಯು ಕರ್ನಾಟಕದ ಕರಾವಳಿ ಭಾಗದ ಪ್ರಾದೇಶಿಕ ಕಲಾ ಪ್ರಕಾರವಾಗಿದೆ. ಮಹಾರಾಷ್ತ್ರದಿಂದ ಕಾಸರಗೋಡು ತನಕ ಹಬ್ಬಿದ್ದ ಈ ಕಲೆ 1950ರ ಬಳಿಕ ವಿನಾಶದ ಅಂಚಿಗೆ ಬಂದಿತ್ತು. ಕಟ್ಟಡಗಳ ಗೋಡೆಯ ಮೇಲೆ ಸುಣ್ಣ ಮತ್ತು ಕೆಮ್ಮಣ್ಣು ಬಳಸಿ ಗೀರಿ ರಚಿಸಲಾಗುತ್ತಿದ್ದ ಈ ಪಾರಂಪರಿಕ ಕಲೆ ಕ್ರಿ.ಶ. 13-14ನೇ ಶತಮಾನದ್ದಾಗಿದೆ. ದೇವಾಲಯ, ಚರ್ಚ್, ಮಸೀದಿ, ಜಿನಾಲಯ, ಮನೆ-ಮಠಗಳಲ್ಲಿ ರಚನೆಯಾಗುತ್ತಿದ್ದ ಈ ಕಲೆ ಸಾಂಪ್ರದಾಯಿಕ ಹಾಗೂ ಜನಪದೀಯ ವೈವಿಧ್ಯಮಯ ಸೊಗಡಿನಿಂದ ಕೂಡಿದೆ.
ಜಗತ್ತಿಗೆ ಪ್ರಾದೇಶಿಕ ವಿಶೇಷತೆ ತೆರೆದಿಡುವ ಈ ಸಂದರ್ಭದಲ್ಲಿ ಕಾವಿ ಕಲೆಯ ವಿಶೇಷತೆಯನ್ನು ಸಮಕಾಲೀನ ಮಾಧ್ಯಮಗಳ ಮೂಲಕ ಎತ್ತಿ ಹಿಡಿಯುವ ಪ್ರಯೋಗಾತ್ಮಕ ಪ್ರದರ್ಶನವಿದು. ಪ್ರಮುಖವಾಗಿ ಕರ್ನಾಟಕಕ್ಕೆ ಜಿಯೋಗ್ರಾಫಿಕಲ್ ಇಂಡಿಕೇಷನ್ (ಜಿಐ ಟ್ಯಾಗ್) ಗಳಿಸುವ ಮಹತ್ವಪೂರ್ಣ ಪ್ರಯತ್ನವೂ ಕೂಡ ಆಗಿದೆ. ಈ ಕಲೆಯ ಮೂಲ ಕರ್ನಾಟಕದ ಕರಾವಳಿ ಭಾಗವಾದರೂ ಸಹ ಭಾರತೀಯ ಪುರಾತನ ಕಲೆಯೊಂದನ್ನು ಕಾಪಿಡುವ ಪ್ರಯತ್ನ ನನ್ನದು. | ಡಾ.ಜನಾರ್ದನ್ ರಾವ್ ಹಾವಂಜೆ. ಕಾವಿ ಕಲಾವಿದ
ಭಾರತೀಯ ವೈವಿಧ್ಯತೆ ಸಾರುವ ಅಳಿವಿನಂಚಿನ ಕಾವಿ' ಕಲೆಯು ದೇಸೀಯ 'ಗೀರು ಕಲೆ'ಯಾಗಿದೆ. ಆ ಕಲೆಗೆ ಪುನರುಜ್ಜೀವನ ನೀಡಿದ ಖ್ಯಾತಿ ಕರಾವಳಿಯ ಕಲಾವಿದ ಉಡುಪಿ ತಾಲೂಕಿನ ಹಾವಂಜೆ ಗ್ರಾಮದ ಡಾ. ಜನಾರ್ದನ ರಾವ್ ಅವರಿಗೆ ಸಲ್ಲುತ್ತದೆ. ಈ ಕಲೆಯ ಉಳಿವಿಗಾಗಿ ಭಾರತದಾದ್ಯಂತ ಹಲವಾರು ಸಮೂಹ ಕಲಾ ಪ್ರದರ್ಶನ, 30ಕ್ಕೂ ಅಧಿಕ ಕಲಾ ಶಿಬಿರ, 7 ಏಕವ್ಯಕ್ತಿ ಹಾಗೂ 3 ದ್ವಿವ್ಯಕ್ತಿ ಕಲಾ ಪ್ರದರ್ಶನ ನೀಡಿದ್ದಾರೆ. ರಷ್ಯಾ, ಆಸ್ಟ್ರೇಲಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಕಲಾಪ್ರದರ್ಶನಗಳಲ್ಲಿಯೂ ಭಾಗವಹಿಸಿದ್ದಾರೆ. ಕಾವಿ ಕಲೆಯ ಸಂಶೋಧನಾ ಅಧ್ಯಯನಕ್ಕೆ ಮಣಿಪಾಲ ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಲಭಿಸಿದೆ. ಜಯಂಟ್ಸ್ ಬೆಂಗಳೂರು ವತಿಯಿಂದ ಲಲಿತಕಲಾ ರತ್ನ ಪ್ರಶಸ್ತಿ, ತೆಲಂಗಾಣದ ಕ್ರಾಫ್ಟ್ ಕೌನ್ಸಿಲ್ನ ರಾಷ್ಟ್ರೀಯ ಪುರಸ್ಕಾರ, ಮೂಡುಬಿದ್ರೆಯ ಜೈನಮಠದಿಂದ ಚಿತ್ರಾದೇವಿ ಪುರಸ್ಕಾರ, ಮೈಸೂರು ಕಲಾಪ್ರದರ್ಶನದ ಮೆರಿಟ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಉಡುಪಿಯಲ್ಲಿ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಮೂಲಕ ಕಲಾತ್ಮಕ ಕಾರ್ಯಕ್ರಮ ಸಂಘಟಿಸುತ್ತಿದ್ದಾರೆ.
20ಕ್ಕೂ ಅಧಿಕ ಸಂಶೋಧನಾ ಲೇಖನ, 100ಕ್ಕೂ ಅಧಿಕ ಕಲೆಯ ವಿಮರ್ಶೆ ಬರೆದಿದ್ದಾರೆ. ಕರಾವಳಿಯ ಅಗಲಿದ ಕಲಾವಿದರ ಕುರಿತು 'ಮೊಡೆಪು' ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಇವರ ಕಾವಿ ಕಲಾಕೃತಿಗಳು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ತೆಲಂಗಾಣದ ಸಿಸಿಟಿ, ಉಡುಪಿಯ ಜಿಲ್ಲಾಧಿಕಾರಿ ಕಚೇರಿ, ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ ಮ್ಯೂಸಿಯಂ, ಮುದ್ದಣ ಮ್ಯೂಸಿಯಂ, ಜಿಲ್ಲಾ ಡಿಜಿಟಲ್ ಲೈಬ್ರರಿ ಹಾಗೂ ಹಲವಾರು ಖಾಸಗಿ ಸಂಗ್ರಹಕಾರರಲ್ಲಿದೆ. ಕಾವಿಕಲೆಯೊಂದಿಗೆ ಮಿಶ್ರ ಮಾಧ್ಯಮದ ಕಲಾಕೃತಿಯನ್ನೂ ರಚಿಸುತ್ತಿರುವ ಇವರ ಪ್ಲಾಸ್ಟಿಕ್ ಅರಿವು ಜಾಗೃತಿಯ ಮೀನಿನ ಶಿಲ್ಪವು 20ಕ್ಕೂ ಅಧಿಕ ರಾಷ್ಟ್ರ್ರಗಳಲ್ಲಿ ಅನಾವರಣಗೊಂಡಿದೆ. ಪ್ರಸ್ತುತ ಹಾವಂಜೆಯಲ್ಲಿ ಕೃಷಿ ಜೀವನದೊಂದಿಗೆ ಕಾವಿ ಕಲೆ ನೆಲೆಗಳ ಸಂರಕ್ಷಣಾ ಕಾರ್ಯ ಹಾಗೂ ಶಾಲಾ-ಕಾಲೇಜುಗಳಲ್ಲಿ ಕಾವಿ ಕಲಾ ಕಾರ್ಯಾಗಾರ ನಡೆಸುತ್ತ ದೇಸೀಯ ಕಲೆಯ ಪುನರುಜ್ಜೀವನ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.