

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಪ್ರಸ್ತುತ ದಿನಮಾನಗಳಲ್ಲಿ ಸರ್ಕಾರಿ ಕಾಲೇಜು ಎಂದರೆ ಹಿಂದೇಟು ಹಾಕುತ್ತಿರುವ ಕಾಲಘಟ್ಟದಲ್ಲಿ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕಾವೇರಿ ಮಲ್ಲಾಪುರೆ ದ್ವಿತೀಯ ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ‌್ಯಾಂಕ್ ಬರುವ ಮೂಲಕ ಸರ್ಕಾರಿ ಕಾಲೇಜು ಮಹತ್ವ ಹೆಚ್ಚಿಸಿದ್ದಾಳೆ.
ಕಾವೇರಿ ಮಲ್ಲಾಪುರೆ 600ಕ್ಕೆ 594ಕ್ಕೆ ಅಂಕ ಗಳಿಸಿದ್ದಾಳೆ. ಕನ್ನಡ-99, ಇಂಗ್ಲಿಷ್-97, ಇತಿಹಾಸ-99, ಅರ್ಥಶಾಸ್ತ್ರ-100, ಸಮಾಜಶಾಸ್ತ್ರ-100, ರಾಜಶಾಸ್ತ್ರ-99 ಅಂಕ ಪಡೆದುಕೊಂಡು ಸಾಧನೆ ಮಾಡಿದ್ದಾಳೆ.
ಕೂಲಿ ಕೆಲಸವೇ ಆಸರೆ: ಚಿಕ್ಕ ವಯಸ್ಸಿನಲ್ಲಿಯೇ ತಂದೆ ಕಳೆದುಕೊಂಡಿರುವ ಕಾವೇರಿ ಕುಟುಂಬಕ್ಕೆ ಸ್ವಂತ ಜಮೀನು ಇಲ್ಲ. ತಾಯಿ, ಸಹೋದರರ ಕೂಲಿಯೇ ಕುಟುಂಬಕ್ಕೆ ಆಸರೆ. ಕಡು ಬಡತನದಲ್ಲಿ ಬೆಳೆದು, ಶಾಲೆಗೆ ಬಿಡುವು, ರಜೆ ಇದ್ದಾಗ ತಾಯಿಯೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಳು ಕಾವೇರಿ. ಮೂಲತಃ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಪವಾಡಿ, ಮಹಾದೇವಿ ದಂಪತಿ ಪುತ್ರಿಯಾಗಿರುವ ಇವರು ಎಸ್‌ಎಸ್‌ಎಲ್‌ಸಿವರೆಗೆ ಗ್ರಾಮದಲ್ಲಿ ಓದಿದ್ದಾಳೆ. ಪಿಯುಸಿ ಓದಿಗಾಗಿ ಮಜಲಟ್ಟಿಗೆ ಸೇರಿಕೊಂಡಾಗ ಮೊದಲ ವರ್ಷ ಹಾಸ್ಟೆಲ್ ದೊರೆಯಲಿಲ್ಲ. ಆಗ ಮುತ್ತುರಾಜ ಕಾಂಬಳೆ ಎಂಬುವವರು ತಮ್ಮ ಶ್ರೇಯಸ್ ಎಂಬ ಪಿಜಿಯಲ್ಲಿ ಉಚಿತ ವಸತಿ ಸಹಿತ ಊಟದ ವ್ಯವಸ್ಥೆ ಕಲ್ಪಿಸಿದರು. ಎರಡನೇ ವರ್ಷದಲ್ಲಿ ಮಜಲಟ್ಟಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಹಾಸ್ಟೆಲ್‌ನಲ್ಲಿದ್ದುಕೊಂಡು ಅಭ್ಯಾಸ ಮಾಡಿ ಇದೀಗ ರಾಜ್ಯಕ್ಕೆ ನಾಲ್ಕನೇ ರ‌್ಯಾಂಕ್ ಪಡೆದುಕೊಂಡಿದ್ದಾಳೆ. ಈ ಮೂಲಕ ಸರ್ಕಾರಿ ಶಾಲೆ, ವಸತಿ ನಿಲಯಗಳ ವಿದ್ಯಾರ್ಥಿಗಳು ಯಾವುದಕ್ಕೂ ಕಡಿಮೆ ಇಲ್ಲ ಎಂದು ಸಾಧಿಸಿ ತೋರಿಸಿದ್ದಾಳೆ.
ಕಡು ಬಡತನದಲ್ಲಿ ಹುಟ್ಟಿ ಬೆಳೆದಿದ್ದರೂ ನನ್ನ ಕಲಿಕೆಗೆ ಬಡತನ ಯಾವತ್ತು ಅಡ್ಡಿಯಾಗಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ತಂದೆ ಕಳೆದುಕೊಂಡಿದ್ದ ನಮ್ಮನ್ನು ತಾಯಿ ಕೂಲಿ ಕೆಲಸ ಮಾಡಿ ಬೆಳೆಸಿದ್ದಾಳೆ. ಶಾಲೆ ಶಿಕ್ಷಕರ, ಪಾಲಕರ ಸಹಾಯ, ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಮುಂದೆ ಬಿಎ ಪದವಿ ಓದಿ ಕೆಎಎಸ್, ಐಎಎಸ್ ಸೇರಿ ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಿ ಸರ್ಕಾರಿ ನೌಕರಿ ಹಿಡಿಯಬೇಕು ಎಂಬ ಗುರಿ ಹಾಕಿಕೊಂಡಿದ್ದೇನೆ. ಕಾವೇರಿ ಮಲ್ಲಾಪುರೆ, ರ‌್ಯಾಂಕ್ ವಿದ್ಯಾರ್ಥಿನಿ