ಜುಲೈ 13ರಂದು ಶಿರೂರು ಮಠದಲ್ಲಿ ಕಟ್ಟಿಗೆ ಮುಹೂರ್ತ...

Shirooru Mata
Published on

ಉಡುಪಿ ಭಾವಿ ಪರ್ಯಾಯಕ್ಕೆ ಸಿದ್ಧತೆ

ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಅಷ್ಟ ಮಠಗಳಲ್ಲಿ ಒಂದಾದ ಶ್ರೀ ವಾಮನ ತೀರ್ಥ ಪರಂಪರೆಯ ಶಿರೂರು ಮಠವು ಉಡುಪಿ ಶ್ರೀಕೃಷ್ಣ ಮಠದ ಮುಂದಿನ ಪರ್ಯಾಯಕ್ಕಾಗಿ ಸಿದ್ಧತೆಯಲ್ಲಿ ತೊಡಗಿದೆ. ಈಗಾಗಲೇ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ ನೆರವೇರಿಸಿರುವ ಭಾವಿ ಪರ್ಯಾಯ ಶಿರೂರು ಮಠವು ಜುಲೈ 13ರಂದು ಕಟ್ಟಿಗೆ ಮುಹೂರ್ತ ಆಯೋಜಿಸಿದೆ.

ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಇದಾಗಿದ್ದು, ಸರ್ವಜ್ಞ ಪೀಠಾರೋಹಣದ ಹಾಗೂ ಶ್ರೀಕೃಷ್ಣನ ಪೂಜಾ ದೀಕ್ಷೆ ಸ್ವೀಕರಿಸುವ ಪೂರ್ವಭಾವಿ ಆಚರಣೆಗಳಲ್ಲಿ ಕಟ್ಟಿಗೆ ಮುಹೂರ್ತ (ಸಿಂಹ ಲಗ್ನ) ಪ್ರಮುಖವಾಗಿದೆ.

ದೇವತಾ ಪ್ರಾರ್ಥನೆ

ಜು.13ರಂದು ಬೆಳಗ್ಗೆ 8 ಗಂಟೆಗೆ ಶಿರೂರು ಮಠದ ಶ್ರೀಗಳು ದೇವತಾ ಪ್ರಾರ್ಥನೆ ನೆರವೇರಿಸಲಿದ್ದಾರೆ. ಬಳಿಕ ರಥಬೀದಿಯಲ್ಲಿರುವ ಚಂದ್ರೇಶ್ವರ, ಅನಂತೇಶ್ವರ ದೇಗುಲದಲ್ಲಿ ಹಾಗೂ ಉಡುಪಿ ಶ್ರೀಕೃಷ್ಣ-ಮುಖ್ಯಪ್ರಾಣ ದೇವರ ದರ್ಶನ ಮಾಡಲಿದ್ದಾರೆ. ನಂತರ ಶಿರೂರು ಮಠದಲ್ಲಿ ಬೆಳಗ್ಗೆ 9:15ಕ್ಕೆ ಕಟ್ಟಿಗೆ ಮುಹೂರ್ತ, 9:30ಕ್ಕೆ ಪರ್ಯಾಯ ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ, 9:45ಕ್ಕೆ ಶ್ರೀಗಳು ಅನುಗ್ರಹ ಮಂತ್ರಾಕ್ಷತೆ ನೀಡಲಿದ್ದಾರೆ.

ದೇವರಿಗೆ ನೈವೇದ್ಯ ತಯಾರಿಕೆಗಾಗಿ ಕಟ್ಟಿಗೆ ಸಂಗ್ರಹಿಸುವ ಭಕ್ತಿ ಅಭಿಯಾನ ಇದಾಗಿದ್ದು, ಈ ಪವಿತ್ರ ಸೇವೆಯಲ್ಲಿ ಪಾಲ್ಗೊಳ್ಳಲು ಭಕ್ತರಿಗೂ ಅವಕಾಶವಿದೆ. ಆಸಕ್ತರು ಶಿರೂರು ಮಠ ಸಂಪರ್ಕಿಸಬಹುದು ಎಂದು ಮಠದ ದಿವಾನ ಉದಯಕುಮಾರ್​ ಸರಳತ್ತಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net