

ಪ್ರಭಾಸ್ ಅಭಿನಯದಲ್ಲಿ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ‘ಸಲಾರ್’ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಈಗಾಗಲೇ ಎರಡನೇ ಹಂತದ ಶೂಟಿಂಗ್ ಸಹ ಶುರುವಾಗಿದೆ. ಹೀಗಿರುವಾಗಲೇ ಬಾಲಿವುಡ್ ನಟಿ ಕತ್ರಿನಾ, ‘ಸಲಾರ್’ ಚಿತ್ರದ ಭಾಗವಾಗಲಿದ್ದಾರಂತೆ. ಅಂದರೆ, ಚಿತ್ರದ ಐಟಂ ಹಾಡಿಗೆ ಅವರು ಹೆಜ್ಜೆ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಕತ್ರಿನಾ ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಐಟಂ ಹಾಡುಗಳಿಗೆ ಸೊಂಟ ಬಳುಕಿಸಿದ್ದಾರೆ. ಆದರೆ, ದಕ್ಷಿಣ ಭಾರತದ ಸಿನಿಮಾಗಳಲ್ಲಿನ ಐಟಂ ಹಾಡಿನಲ್ಲಿ ಮಾತ್ರ ಅವರು ಕಾಣಿಸಿಕೊಂಡಿಲ್ಲ. ಇದೀಗ ‘ಸಲಾರ್’ ಸಿನಿಮಾ ಅದಕ್ಕೆ ವೇದಿಕೆ ಕಲ್ಪಿಸಿದೆ ಎಂಬ ಮಾತು ಕೇಳಿಬಂದಿದೆ. ಕತ್ರಿನಾ ಕಡೆಯಿಂದಲೂ ಹಸಿರು ನಿಶಾನೆ ಸಿಕ್ಕಿದ್ದು, ಈ ಬಗ್ಗೆ ತಂಡದವರೇ ಅಧಿಕೃತ ಘೋಷಣೆ ಮಾಡಬೇಕಿದೆ.
‘ಸಲಾರ್’ ಚಿತ್ರದ ಮೂಲಕ ಐಟಂ ಹಾಡಿನಲ್ಲಿ ಕತ್ರಿನಾ ಕಾಣಿಸಿಕೊಂಡಿದ್ದೇ ಆದಲ್ಲಿ, ಬರೋಬ್ಬರಿ 15 ವರ್ಷಗಳ ಬಳಿಕ ಟಾಲಿವುಡ್ ಪ್ರವೇಶ ಮಾಡಿದಂತಾಗುತ್ತದೆ. ಈ ಹಿಂದೆ 2005ರಲ್ಲಿ ನಂದಮೂರಿ ಬಾಲಕೃಷ್ಣ ನಟನೆಯ ‘ಅಲ್ಲರಿ ಪಿಡುಗು’ ಚಿತ್ರದಲ್ಲಿ ಕತ್ರಿನಾ ನಟಿಸಿದ್ದರು. ಅದಾದ ಬಳಿಕ ಟಾಲಿವುಡ್ನತ್ತ ಕತ್ರಿನಾ ಮುಖ ಮಾಡಿರಲಿಲ್ಲ. ಇತ್ತ ಅಕ್ಷಯ್ ಕುಮಾರ್ ಅಭಿನಯದ ‘ಸೂರ್ಯವಂಶಿ’ ಮತ್ತು ಇಶಾಂತ್ ಕಟ್ಟರ್ ಅಭಿನಯದ ‘ಫೋನ್ ಭೂತ್’ ಚಿತ್ರದಲ್ಲಿ ಕತ್ರಿನಾ ನಟಿಸಿದ್ದು, ಈ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಇದಲ್ಲದೆ ಸಲ್ಮಾನ್ ಅಭಿನಯದ ‘ಟೈಗರ್ 3’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. -ಏಜೆನ್ಸೀಸ್