ಕಸ್ತೂರಿ ರಂಗನ್ ವರದಿ ಒಪ್ಪಲು ಸಾಧ್ಯವಿಲ್ಲ

3mnd1.
Published on

ಮುಂಡಗೋಡ: ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೆ ಒಪ್ಪಲು ಸಾಧ್ಯವಿಲ್ಲ. ಈ ವರದಿ ಮಲೆನಾಡು ಜೀವನ ಶೈಲಿಯ ಮೇಲೆ ದುಷ್ಪರಿಣಾಮ ಬಿರುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೇರಳದ ಮುಖ್ಯಮಂತ್ರಿ ಸಹ ವರದಿ ತಿರಸ್ಕರಿಸಿದ್ದಾರೆ. ಮಲೆನಾಡು ಜಿಲ್ಲೆಗಳಲ್ಲಿಯೇ ಹೆಚ್ಚು ಅರಣ್ಯ ಹೊಂದಿದ ಜಿಲ್ಲೆ ಉತ್ತರ ಕನ್ನಡ. ಶೇ.80ರಷ್ಟು ಪ್ರದೇಶದಲ್ಲಿ ಮನೆ ಕಟ್ಟಬಾರದು, ಸೊಪ್ಪು ಕಡಿಯಬಾರದು, ಮಣ್ಣು ಮುಟ್ಟಬಾರದು ಎಂದು ವರದಿ ನೀಡಿದೆ. ಇದರಲ್ಲಿ ಗಾಡ್ಗೀಳ್ ವರದಿ ಮುಗಿದ ಅಧ್ಯಯನವಾಗಿದೆ. ಕಸ್ತೂರಿ ರಂಗನ್ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಲೆನಾಡು ಭಾಗದ ಶಾಸಕರೆಲ್ಲ ತಿರಸ್ಕರಿಸಿದ್ದೇವೆ. ಮಲೆನಾಡಿನ ಎಲ್ಲ ಶಾಸಕರನ್ನೂ ಕರೆದು ಅಭಿಪ್ರಾಯ ಸಂಗ್ರಹಿಸಿ ಮಲೆನಾಡಿನ ಜನಜೀವನದ ಮೇಲೆ ತೊಂದರೆ ಆಗದ ರೀತಿಯಲ್ಲಿ ಪರಿಸರ ಸಂರಕ್ಷಣೆ ಮಾಡುವುದಾದರೆ ನಮ್ಮದೇನೂ ಆಕ್ಷೇಪವಿಲ್ಲ ಎಂದರು.

ವರದಿಯಿಂದ ಪರಿಸರ ರಕ್ಷಣೆ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ನಮಗಿಲ್ಲ. ಒಂದು ಅಪಘಾತದ ಕಾರಣಕ್ಕಾಗಿ ಮಲೆನಾಡಿನ ಜನಜೀವನವನ್ನೇ ವ್ಯರ್ಥಮಾಡುವಂತಹ ದುಸ್ಥಿತಿಗೆ ನಮ್ಮನ್ನು ಕರೆದುಕೊಂಡು ಹೊಗುವಂತಹ ಕಸ್ತೂರಿ ರಂಗನ್ ವರದಿಯನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಮತ್ತು ಅರಣ್ಯ ಸಚಿವರು ಮಲೆನಾಡಿನ ಶಾಸಕರ ಸಭೆ ಕರೆದು ಅಂತಿಮ ರೂಪವನ್ನು ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

ಮಾಜಿ ಶಾಸಕ ವಿ.ಎಸ್. ಪಾಟೀಲ, ರವಿಗೌಡ ಪಾಟೀಲ, ಫಣಿರಾಜ ಹದಳಗಿ, ಗುಡ್ಡಪ್ಪ ಕಾತೂರ, ನಾಗಭೂಷಣ ಹಾವಣಗಿ, ಕೆಂಜೋಡಿ ಗಲಬಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net