

ಅತ್ತ ಅಯೋಧ್ಯೆಯಲ್ಲಿ ಶ್ರೀರಾಮಜನ್ಮಭೂಮಿ ಶಿಲಾನ್ಯಾಸದ ಸಂಭ್ರಮ...ಇತ್ತ ಕಾಶ್ಮಿರದಲ್ಲಿ ಆರ್ಟಿಕಲ್ 370 ರದ್ದುಗೊಂಡ ಮೊದಲ ವಾರ್ಷಿಕೋತ್ಸವದ ಸಂಭ್ರಮ.
ಕಳೆದ ವರ್ಷ ಅಂದರೆ 2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್ 370ನ್ನು ರದ್ದುಗೊಳಿಸಿತ್ತು. ಇಂದಿಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾಶ್ಮೀರದ ಕುಪ್ವಾರಾ, ಗುಜ್ಜರ್, ಬಕರ್ವಾಲ್ ಸೇರಿ ಮತ್ತಿತರ ಕಾಶ್ಮೀರಿಯರು ಭರ್ಜರಿ ಸಂಭ್ರಮ ಆಚರಿಸಿದ್ದಾರೆ.
ಆರ್ಟಿಕಲ್ 370 ರದ್ದುಗೊಂಡಿರುವ ಕ್ಷಣದ ಸ್ಮರಣೆಗಾಗಿ ಕಾಶ್ಮೀರಿಗಳು ಸೋಮವಾರದಿಂದಲೇ ಬ್ಯಾಂಗಸ್ ಆವಮ್ ಮೇಳವನ್ನು ಪ್ರಾರಂಭಿಸಿದ್ದಾರೆ. ಹಳ್ಳಿಗಾಡಿನ ಆಟಗಳಾದ ಕುದುರೆ ಓಟ, ಕುರಿ ಹಿಂಡಿನ ಓಟದಂಥ ಸ್ಪರ್ಧೆಗಳನ್ನು ನಡೆಸಿದ್ದಾರೆ. ಇದನ್ನೂ ಓದಿ: ಕರೊನಾ ಕರಾಳ ಛಾಯೆ: ಲಾಕ್ಡೌನ್ ನಿಂದ ತುತ್ತು ಕಳೆದುಕೊಂಡ ಶಿಕ್ಷಕನಿಗೆ ಕೈ ಹಿಡಿದದ್ದು ಮಿರ್ಚಿ ಬಜ್ಜಿ
ಕಾಶ್ಮಿರದ ಬುಡಕಟ್ಟು ಸಮುದಾಯದ ಹಿರಿಯ ಮುಖಂಡ ಮನವಿಯ ಮೇರೆಗೆ ಸ್ಥಳೀಯ ರಾಷ್ಟ್ರೀಯ ರೈಫಲ್ಸ್ ಘಟಕದಿಂದ ವೈದ್ಯಕೀಯ ಮತ್ತು ಪಶುವೈದ್ಯಕೀಯ ಶಿಬಿರಗಳನ್ನೂ ಆಯೋಜಿಸಲಾಗಿತ್ತು. ಇದರಲ್ಲಿ 49 ಮಕ್ಕಳು ಸೇರಿ ಒಟ್ಟು 670 ರೋಗಿಗಳು ತಪಾಸಣೆಗೆ ಒಳಗಾಗಿ, ಚಿಕಿತ್ಸೆ ಪಡೆದಿದ್ದಾರೆ. ಹಾಗೇ 135 ಜಾನುವಾರುಗಳಿಗೂ ಅಗತ್ಯ ತಪಾಸಣೆ ಮಾಡಲಾಗಿದೆ.
ಇನ್ನು ಮಂಗಳವಾರ ಗುಜ್ಜರ್ ಸಮುದಾಯದಿಂದ ಜಾನಪದ ಹಾಡು, ನೃತ್ಯ ಕಾರ್ಯಕ್ರಮಗಳು ನಡೆದಿವೆ. ಮಕ್ಕಳಿಂದ ದೇಶಭಕ್ತಿ ಗೀತೆ, ನೃತ್ಯ, ಕರಾಟೆ ಪ್ರದರ್ಶನಗಳನ್ನೂ ಆಯೋಜಿಸಲಾಗಿತ್ತು.
ಒಟ್ಟಾರೆ ಮೇಳದೊಂದಿಗೆ ಆರ್ಟಿಕಲ್ 370 ರದ್ದುಗೊಂಡ ಸ್ಮರಣಾರ್ಥ ಅನೇಕ ಕಾರ್ಯಕ್ರಮಗಳನ್ನೂ ಅಲ್ಲಿನ ಬುಡಕಟ್ಟು ಜನಾಂಗದ ಜನರು ಹಮ್ಮಿಕೊಂಡು ಸಂಭ್ರಮ ಆಚರಿಸಿದ್ದಾರೆ. (ಏಜೆನ್ಸೀಸ್)