'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಗೆ ಕ್ರಿಕೆಟಿಗರಿಂದ ಮೆಚ್ಚುಗೆ

kashmir web
Published on

ನವದೆಹಲಿ: ದೇಶದೆಲ್ಲೆಡೆ ಭಾರಿ ಸಂಚಲನ ಮೂಡಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ 90ರ ದಶಕದಲ್ಲಿ ಕಾಶ್ಮೀರಿ ಪಂಡಿತ ಮೇಲೆ ನಡೆದಿರುವ ದೌರ್ಜನ್ಯ, ಹಿಂಸೆಯನ್ನು ಬಿಚ್ಚಿಟ್ಟಿದೆ. ಕಳೆದ 32 ವರ್ಷಗಳಿಂದ ಮುಚ್ಚಿಡಲಾಗಿದ್ದ ಈ ಸತ್ಯವನ್ನು ಸಿನಿಮಾ, ಜಗತ್ತಿನ ಎದುರು ತೆರೆದಿಟ್ಟಿದೆ. ಈಗಾಗಲೆ ಎಲ್ಲರ ಹೃದಯ ಗೆದ್ದಿರುವ ಸಿನಿಮಾಗೆ ಸ್ಟಾರ್ ಕ್ರಿಕೆಟಿಗರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳನ್ನೂ ಸಲ್ಲಿಸಿದ್ದಾರೆ.

ಸ್ವತಃ ಕಾಶ್ಮೀರಿ ಪಂಡಿತರೂ ಆಗಿರುವ ಟೀಮ್ ಇಂಡಿಯಾ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಮಾಜಿ ಎಡಗೈ ಬ್ಯಾಟರ್ ಸುರೇಶ್ ರೈನಾ ‘ದಿ ಕಾಶ್ಮೀರಿ ಫೈಲ್ಸ್’ ಸಿನಿಮಾ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿರುವ ಮೊದಲ ಕ್ರಿಕೆಟಿಗರಾಗಿದ್ದಾರೆ. ಹಿಂದಿ ಭಾಷೆಯ ಸಿನಿಮಾದ ಬಗ್ಗೆ ವಿಶೇಷ ಪೋಸ್ಟ್ ಹಾಕಿರುವ ರೈನಾ, ಸಿನಿಮಾ ಸ್ಕ್ರೀನಿಂಗ್ ಬಳಿಕ ಮಹಿಳೆಯೊಬ್ಬರು ಭಾವುಕರಾಗಿರುವ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ಎಲ್ಲರೂ ಸಿನಿಮಾವನ್ನು ವೀಕ್ಷಿಸಬೇಕು ಮತ್ತು ನ್ಯಾಯದ ಪರ ಧ್ವನಿ ಎತ್ತಬೇಕು ಎಂದೂ ರೈನಾ ಮನವಿ ಮಾಡಿಕೊಂಡಿದ್ದಾರೆ.

ಟೀಮ್ ಇಂಡಿಯಾದ ಮಾಜಿ ವೇಗಿ ಹಾಗೂ ಕನ್ನಡಿಗ ವೆಂಕಟೇಶ್ ಪ್ರಸಾದ್ ಕೂಡ ಸಿನಿಮಾ ಬಗ್ಗೆ ಮಾತನಾಡಿದ್ದು, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಎಲ್ಲರ ಕಣ್ಣು ತೆರೆಸಿದೆ ಎಂದು ಟ್ವೀಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net