

ಮದ್ದೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ ಹೆಮ್ಮರವಾಗಿ ಬೆಳೆದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರವಿಕುಮಾರ ಚಾಮಲಾಪುರ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಭವ್ಯ ಪರಂಪರೆಯನ್ನು ಪ್ರತಿ ಮನೆ ಮನೆಗೆ ತಲುಪಿಸುವ ನಿಟ್ಟಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿರಂತರವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಡಾ.ಬಿ.ಕೃಷ್ಣ, ಮದ್ದೂರು ತಾಲೂಕಿಗೂ ಕನ್ನಡ ಸಾಹಿತ್ಯ ಪರಿಷತ್‌ಗೂ ಅವಿನಾಭಾವ ಸಂಬಂಧವಿದೆ. ಬಹುತೇಕ ಕಸಾಪ ಜಿಲ್ಲಾಧ್ಯಕ್ಷರು ತಾಲೂಕಿನವರೇ ಆಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಸಾಪ ನೂತನ ತಾಲೂಕು ಅಧ್ಯಕ್ಷರಾಗಿ ವಿ.ಸಿ.ಉಮಾಶಂಕರ್ ಹಾಗೂ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯೋಜಕ ಯೋಗೇಶ್, ಜಾನಪದ ಕಲಾವಿದ ವಿ.ಇ, ಲೋಕೇಶ್, ಪ್ರಗತಿಪರ ಸಂಘಟನೆಯ ಮಾರ್ಗದರ್ಶಕ ನ.ಲಿ.ಕೃಷ್ಣ ಮಾತನಾಡಿದರು.
ತಾಲೂಕು ಅಧ್ಯಕ್ಷ ವಿ.ಸಿ.ಉಮಾಶಂಕರ್, ಸಮಾಜ ಸೇವಕರಾದ ಬಿ.ವಿ.ಶಂಕರಗೌಡ, ಪ್ರಣಾಮ್ ಸತೀಶ್, ತಾಪಂ ಮಾಜಿ ಸದಸ್ಯ ಚಿಕ್ಕಮರಿಯಪ್ಪ, ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಎಂ.ಕ್ರಾಂತಿಸಿಂಹ, ಪೂರ್ಣಪ್ರಜ್ಞಾ ಶಾಲೆ ಕಾರ್ಯದರ್ಶಿ ಅನಂತೇಗೌಡ ಇತರರು ಇದ್ದರು.