ಅತ್ತ ರಾಜಕೀಯ ಪಿತೂರಿ! ಇತ್ತ ಆಯೋಜನೆಯಲ್ಲಿ ಎಡವಟ್ಟು; ವಿಜಯ್​ vs ಡಿಎಂಕೆ, ಇಲ್ಲಿಯವರೆಗೆ ಏನೆಲ್ಲ ಆಯಿತು? | Karur Stampede

ವಿಜಯವಾಣಿ (10)
Published on

Karur stampede: ಸೆಪ್ಟೆಂಬರ್​ 27ರ ಶನಿವಾರ ಸಂಜೆ ತಮಿಳುನಾಡಿನ ಕರೂರಿನಲ್ಲಿ ತಮ್ಮ ಪಕ್ಷದ ಪ್ರಚಾರ ರ್ಯಾಲಿಯ ವೇಳೆ ಕಾಲ್ತುಳಿತ ಸಂಭವಿಸಿ 41 ಮಂದಿ ದುರಂತ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ನಟ ಹಾಗೂ ತಮಿಳನ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ, ನಟ ವಿಜಯ್​ ವಿಡಿಯೋ ಸಂದೇಶದ ಮೂಲಕ ಕೆಲವು ಗೊಂದಲಗಳಿಗೆ ಸ್ಪಷ್ಟನೆ ನೀಡಿದರು.

ಸರ್ಕಾರದ ಜಿದ್ದಿನ ಬಗ್ಗೆ ವಿಜಯ್​ ಬೇಸರ

ಕರೂರು ಕಾಲ್ತುಳಿತ ಘಟನೆ ನಡೆದ ಎರಡು ದಿನಗಳ ಬಳಿಕ ಅಂದರೆ, ಮಂಗಳವಾರ (ಸೆ.30) ಸಂಜೆ ಮೊದಲ ವಿಡಿಯೋ ಸಂದೇಶವನ್ನು ಹಂಚಿಕೊಂಡಿರುವ ನಟ ವಿಜಯ್, ದುರಂತದ ಬಗ್ಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. "ನನ್ನ ಜೀವನದಲ್ಲಿ ಇಂತಹ ನೋವಿನ ಪರಿಸ್ಥಿತಿಯನ್ನು ನಾನು ಎಂದಿಗೂ ಎದುರಿಸಿಲ್ಲ. ನನ್ನ ದೇಹ ಮತ್ತು ಮನಸ್ಸು ಚಿಂತೆಯಿಂದ ತುಂಬಿ ಹೋಗಿದೆ. ನನ್ನ ಹೃದಯವು ಕೂಡ ನೋವಿನಲ್ಲಿ ಮುಳುಗಿ ಹೋಗಿದೆ" ಎಂದು ವಿಜಯ್​ ಹೇಳಿದ್ದಾರೆ.

ಕರೂರಿನ ಜನರು ಸತ್ಯವನ್ನು ಹೇಳಿದಾಗ, ದೇವರೇ ನನ್ನ ಬಳಿಗೆ ಬಂದು ಅದನ್ನು ಬಹಿರಂಗಪಡಿಸಿದಂತೆ ಅನಿಸಿತು. ಶೀಘ್ರದಲ್ಲೇ, ಎಲ್ಲಾ ಸತ್ಯಗಳು ಬಹಿರಂಗಗೊಳ್ಳುತ್ತವೆ. ನಮಗೆ ಪೊಲೀಸರು ನೀಡಿದ ಸ್ಥಳದಿಂದಲೇ ನಾವು ಮಾತನಾಡಿದ್ದೇವೆ. ನಾವು ಯಾವುದೇ ತಪ್ಪು ಮಾಡಿಲ್ಲ. ಆದರೂ ಪಕ್ಷದ ನಾಯಕರು, ಸ್ನೇಹಿತರು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರನ್ನು ಎಫ್‌ಐಆರ್‌ಗಳಲ್ಲಿ ಹೆಸರಿಸಲಾಗುತ್ತಿದೆ ಎಂದು ವಿಜಯ್​ ಆರೋಪಿಸಿದರು.

ಇದೇ ವೇಳೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ಗೆ ಮನವಿ ಮಾಡಿದ ವಿಜಯ್​, ಮುಖ್ಯಮಂತ್ರಿ ಸರ್, ನೀವು ಸೇಡು ತೀರಿಸಿಕೊಳ್ಳುವ ಉದ್ದೇಶ ಹೊಂದಿದ್ದರೆ, ನನಗೆ ಏನು ಬೇಕಾದರೂ ಮಾಡಿ. ಆದರೆ, ನಮ್ಮ ಬೆಂಬಲಿಗರನ್ನು ಮುಟ್ಟಬೇಡಿ. ನಾನು ಮನೆಯಲ್ಲಿ ಅಥವಾ ನನ್ನ ಕಚೇರಿಯಲ್ಲಿ ಇರುತ್ತೇನೆ. ನೀವು ನನಗೆ ಏನು ಬೇಕಾದರೂ ಮಾಡಿ ಎಂದರು.

ತನಿಖೆ ಇನ್ನಷ್ಟು ಚುರುಕು

ಪ್ರಸ್ತುತ, ತಮಿಳುನಾಡಿನಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿರುವ ಕರೂರಿನ ಕಾಲ್ತುಳಿತ ಪ್ರಕರಣದ ತನಿಖೆಯನ್ನು ಸ್ಟಾಲಿನ್ ಸರ್ಕಾರ ಇನ್ನಷ್ಟು ತೀವ್ರಗೊಳಿಸಿದೆ. ಘಟನೆಯಲ್ಲಿ ಪಿತೂರಿ ಇದೆ ಎಂಬ ಆರೋಪಗಳಿಗೆ ಪ್ರತಿಯಾಗಿ ಸರ್ಕಾರ ವೀಡಿಯೊವನ್ನು ಬಿಡುಗಡೆಗೊಳಿಸಿದೆ. ದುರಂತಕ್ಕೆ ಸಂಬಂಧಿಸಿದ ವೀಡಿಯೊದಲ್ಲಿ, ಟಿವಿಕೆ ಕಾರ್ಯಕರ್ತರು ಕಾಲ್ತುಳಿತದ ಸಮಯದಲ್ಲಿ ಓಡುತ್ತಿರುವುದು ಕಂಡುಬರುತ್ತದೆ. ವಿಜಯ್ ಅವರ ವಾಹನದ ಬಳಿ ಲೈಟ್ಸ್​ಗಳಲ್ಲಿದ ಕಾರಣ ಇಡೀ ಪ್ರದೇಶವು ಜನಸಂದಣಿಯಿಂದ ಕೂಡಿತ್ತು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ.

ಕಾಲ್ತುಳಿತದ ಘಟನೆಯ ಕುರಿತು ವಿಜಯ್ ವೀಡಿಯೊ ಬಿಡುಗಡೆ ಮಾಡಿದ ಬೆನ್ನಲ್ಲೇ ಸರ್ಕಾರದ ಪ್ರತಿವಾದವು ಮುನ್ನಲೆಗೆ ಬಂದಿದೆ. 10 ಪ್ರದೇಶಗಳಿಗೆ ಅನುಮತಿ ನೀಡುವಂತೆ ಪೊಲೀಸರನ್ನು ಕೇಳಿದ್ದೇವೆ ಎಂದು ವಿಜಯ್ ವೀಡಿಯೊದಲ್ಲಿ ಹೇಳಿದ್ದಾರೆ. ಆದರೆ, ಕರೂರ್ ರ್ಯಾಲಿಯಲ್ಲಿ ಜನಸಂದಣಿ ದ್ವಿಗುಣಗೊಂಡಿತ್ತು. ಇದು ಕಾಲ್ತುಳಿತಕ್ಕೆ ಕಾರಣವಾಯಿತು ಮತ್ತು ಟಿವಿಕೆ ಜನಸ್ತೋಮವನ್ನು ಅಂದಾಜು ಮಾಡುವಲ್ಲಿ ತಪ್ಪು ಮಾಡಿದೆ ಎಂದು ಡಿಎಂಕೆ ಆರೋಪಿಸಿದೆ. 25,000ಕ್ಕೂ ಅಧಿಕ ಜನರು ಭಾಗವಹಿಸಿದ್ದ ಈ ರ್ಯಾಲಿಯನ್ನು ಆಯೋಜಿಸುವಲ್ಲಿ ಟಿವಿಕೆ ಸಂಪೂರ್ಣವಾಗಿ ಎಡವಟ್ಟು ಮಾಡಿದೆ ಎಂದು ಸ್ಟಾಲಿನ್ ಸರ್ಕಾರ ಗಂಭೀರ ಆರೋಪ ಹೊರಿಸಿದೆ.

ಕಾಲ್ತುಳಿತ ದುರಂತದಲ್ಲಿ 41 ಸಾವು

ದುರಂತದಲ್ಲಿ ಇಲ್ಲಿಯವರೆಗೆ 41 ಅಮಾಯಕರು ಪ್ರಾಣ ಕಳೆದುಕೊಂಡಿದ್ದು, 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದುರಂತದಲ್ಲಿ ಮೃತಪಟ್ಟವರಿಗೆ ತಲಾ 20 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡುವುದಾಗಿ ಟಿವಿಕೆ ಹೇಳಿದರೆ, ತಮಿಳುನಾಡು ಸರ್ಕಾರ 10 ಲಕ್ಷ ರೂ. ಘೋಷಿಸಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net