ಕರೂರ್ ಕಾಲ್ತುಳಿತ ಪ್ರಕರಣ; ಸಂತ್ರಸ್ತ ಕುಟುಂಬಗಳಿಗೆ ವಿಡಿಯೋ ಕರೆ ಮೂಲಕ ಸಹಾಯದ ಭರವಸೆ ನೀಡಿದ 'ವಿಜಯ್'|TVK

Karur tragedy
Published on

TVK: ಟಿವಿಕೆ ಪಕ್ಷದ ಪ್ರಚಾರದ ಸಮಯದಲ್ಲಿ ತಮಿಳುನಾಡಿನ ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನ ಸಾವನ್ನಪ್ಪಿದ್ದ ಹಿನ್ನಲೆ, ನಟ-ರಾಜಕಾರಣಿ ವಿಜಯ್ ಅವರು ಸಂತ್ರಸ್ತ ಕುಟುಂಬಗಳಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದು, ಸಹಾಯದ ಭರವಸೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇನ್ನೂ ವಿಜಯ್ ತಂಡದ ಮೂಲಕ ವಿಡಿಯೋ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಸುಮಾರು ಐದು ನಿಮಿಷಗಳ ಕಾಲ 4–5 ಜನರೊಂದಿಗೆ ಈ ವಿಡಿಯೋ ಕರೆಯಲ್ಲಿ ಮಾತನಾಡಿದ್ದು, ವಿಜಯ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮತ್ತು ಶೀಘ್ರದಲ್ಲೇ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡುವುದಾಗಿ ಕುಟುಂಬಗಳಿಗೆ ಭರವಸೆ ನೀಡಿದ್ದಾರೆ.

ಮೂಲಗಳ ಪ್ರಕಾರ, ಟಿವಿಕೆಯ ಪ್ರಚಾರ ಮತ್ತು ನೀತಿ ಪ್ರಧಾನ ಕಾರ್ಯದರ್ಶಿ ಡಾ. ಕೆ.ಜಿ. ಅರುಣ್‌ರಾಜ್, ಚೆನ್ನೈನ ತಂಡದೊಂದಿಗೆ ಸೋಮವಾರ ಗಾಂಧಿಗ್ರಾಮ, ಪಶುಪತಿಪಾಳಯಂ ಮತ್ತು ಹತ್ತಿರದ ಪ್ರದೇಶಗಳಲ್ಲಿ ಮೃತ ಕುಟುಂಬಗಳನ್ನು ಭೇಟಿ ಮಾಡಿದರು ಮತ್ತು ಇಂದು ಸಹ ಈ ಭೇಟಿಯನ್ನು ಮುಂದುವರೆಸಿದ್ದಾರೆ ಎಂದು ಹೇಳಲಾಗಿದೆ. ಈ ತಂಡವು ಇಲ್ಲಿಯವರೆಗೆ ಸುಮಾರು ಐದು ಕುಟುಂಬಗಳನ್ನು ಭೇಟಿ ಮಾಡಿದೆ ಎಂದು ಹೇಳಲಾಗಿದೆ.

ಮಿತಿ ಮೀರಿದ ಜನಸಂದಣಿ

ಕೇವಲ 2,000-3,000 ಜನರಿಗೆ ಮಾತ್ರ ಸೇರಬಹುದಾದ ಮೈದಾನದಲ್ಲಿ 30,000 ಕ್ಕೂ ಹೆಚ್ಚು ಜನರು ಜಮಾಯಿಸಿದ್ದರು, ಮಧ್ಯಾಹ್ನ ವಿಜಯ್ ಆಗಮಿಸುವ ನಿರೀಕ್ಷೆಯಿದ್ದರಿಂದ ಬೆಳಿಗ್ಗೆ 9 ಗಂಟೆಯಿಂದಲೇ ಜನಸಮೂಹವೇ ಅಲ್ಲಿ ನೆರೆದಿತ್ತು, ಆದರೆ ನಟ ಅಲ್ಲಿಗೆ ಬಂದಿದ್ದು ಸಂಜೆ 7 ಗಂಟೆಗೆ ಆ ಹೊತ್ತಿಗಾಗಲೇ ಕಾರ್ಯಕ್ರಮದ ಸ್ಥಳವು ತುಂಬಿ ತುಳುಕುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಅಲ್ಲಿ ಸೇರಿದ್ದ ಬೆಂಬಲಿಗರನ್ನು ಸ್ವಾಗತಿಸಲು ವಿಜಯ್​​ ತಮ್ಮ ಬಸ್ ಹತ್ತಿದಾಗ ಕಾಲ್ತುಳಿತ ಪ್ರಾರಂಭವಾಯಿತು, ನಂತರದ ನೂಕುನುಗ್ಗಲಿನಲ್ಲಿ, ಮಹಿಳೆಯರು ಮತ್ತು ಮಕ್ಕಳು ತುಳಿದು ಸಾವನ್ನಪ್ಪಿದರು ಮತ್ತು ಅನೇಕರು ಉಸಿರಾಟದ ಸಮಸ್ಯೆಯಿಂದ ಮೂರ್ಛೆ ಹೋದರು, ಹಲವಾರು ಜನ ಅಭಿಮಾನಿಗಳು ಚರಂಡಿಗಳಲ್ಲಿ ಬಿದ್ದು ಜೀವ ಬಿಟ್ಟರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net