ನಿಮ್ಮ ಹಣ ಬೇಕಾಗಿಲ್ಲ! ಅಕ್ಕನನ್ನು ವಾಪಾಸ್​ ಕೊಡಿ; ಮುಗಿಲು ಮುಟ್ಟಿದ ತಂಗಿಯ ಆಕ್ರಂದನ | Karur Stampede

ವಿಜಯವಾಣಿ - 2025-09-28T172256.549
Published on

Karur Stampede: ನಿನ್ನೆ (ಸೆ.27) ಸಂಜೆ ತಮಿಳುನಾಡಿನ ಕರೂರಿನಲ್ಲಿ ನಟ ದಳಪತಿ ವಿಜಯ್ ಅವರು ರಾಜಕೀಯ ರ್‍ಯಾಲಿ ನಡೆಸುವ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತ ದುರಂತದಲ್ಲಿ 40 ಮಂದಿ ದಾರುಣ ಅಂತ್ಯ ಕಂಡಿದ್ದು, 50ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ. ಈ ಮಧ್ಯೆ, ಮೃತ ವಿಜಯ್ ಅಭಿಮಾನಿಯ ಸಂಬಂಧಿಕರೊಬ್ಬರ ಆಕ್ರಂದನ ಮುಗಿಲು ಮುಟ್ಟಿದ್ದು, ಸರ್ಕಾರದ ಪರಿಹಾರ ಹಣ ಬೇಡ ಎಂದು ತಿರಸ್ಕರಿಸಿದ್ದಾರೆ.

ದಳಪತಿ ವಿಜಯ್​ ಅವರ ಕಟ್ಟಾಭಿಮಾನಿ ಬೃಂದಾ, ಕರೂರಿಗೆ ತಮ್ಮ ನೆಚ್ಚಿನ ನಟ ಬರುತ್ತಾರೆ ಎಂದು ಅತೀವ ಸಂತಸದಲ್ಲಿದ್ದರು. ಇದಕ್ಕಾಗಿ, ಮುಂಚಿತವಾಗಲೇ ತಯಾರಾಗಿದ್ದ ಅವರು, ಕರೂರಿಗೆ ಆಗಮಿಸಿದ್ದರು. ತಮ್ಮ 2 ವರ್ಷದ ಮಗುವನ್ನು ಹೊತ್ತುಕೊಂಡು ಹೋಗಲು ಆಗುವುದಿಲ್ಲ ಎಂಬ ಕಾರಣಕ್ಕೆ ತಂಗಿಯೊಂದಿಗೆ ಮಗನನ್ನು ಬಿಟ್ಟು ಹೋಗಿದ್ದ ಬೃಂದಾ, ಮನೆಗೆ ಹಿಂತಿರುಗಿದ್ದು ಶವವಾಗಿ. ಕಾಲ್ತುಳಿತಕ್ಕೆ ಸಿಲುಕಿದ ವಿಜಯ್ ಅಭಿಮಾನಿ, ನಟನ ಕಣ್ತುಂಬಿಕೊಳ್ಳಲು ಹೋಗಿ ಮೃತಪಟ್ಟ ಸುದ್ದಿ ತಿಳಿದು ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಬೃಂದಾ ಸಹೋದರಿ, "ಕಾಲ್ತುಳಿತ ದುರಂತದ ಸುದ್ದಿ ಹರಿದಾಡುತ್ತಿದ್ದಂತೆ ನಾನು ನನ್ನ ಅಕ್ಕನಿಗೆ ಫೋನ್ ಮಾಡಿದೆ. ಎಷ್ಟು ಬಾರಿ ಪ್ರಯತ್ನಿಸಿದರೂ ಆಕೆ ಕರೆ ಸ್ವೀಕರಿಸಲಿಲ್ಲ. ರಾತ್ರಿ 10 ಗಂಟೆಗೆ ಫೋನ್​ ಸ್ವಿಚ್​ ಆಫ್​ ಆಯಿತು. ಆದರೆ, ಇಂದು ಬೆಳಗ್ಗೆ ಅವಳು ಮೃತಪಟ್ಟಿದ್ದಾಳೆ ಎಂಬುದು ದೃಢವಾಯಿತು. ನಮಗೆ ಅವರು ನೀಡುವ ಪರಿಹಾರ ಹಣ ಬೇಕಿಲ್ಲ. ಒಂದು ಸಾರ್ವಜನಿಕ ಸಭೆಯನ್ನು ಸರಿಯಾಗಿ ಯೋಜನೆ ಮಾಡಲು ಸಾಧ್ಯವಿಲ್ಲ ಎಂದಮೇಲೆ ಇದೆಲ್ಲ ಏಕೆ ಬೇಕು? ನಮಗೆ ಹಣ ಬೇಡ, ನನ್ನ ಅಕ್ಕನನ್ನು ವಾಪಾಸ್​ ಕೊಡಿ. ಆಗುತ್ತಾ ಅವರಿಂದ?" ಎಂದು ಕಣ್ಣೀರಿಟ್ಟಿದ್ದಾರೆ.

ದುರಂತದಲ್ಲಿ ಮೃತಪಟ್ಟವರಿಗೆ ತಲಾ 20 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡುವುದಾಗಿ ಟಿವಿಕೆ ಭರವಸೆ ನೀಡಿದೆ. ಇಂದು ಆನ್‌ಲೈನ್‌ನಲ್ಲಿ ನಾಯಕರ ತುರ್ತು ಸಭೆ ನಡೆದ ನಂತರ ಈ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಧಿಕೃತ ವರದಿಯ ಪ್ರಕಾರ, ಈವರೆಗೆ 40 ಜನರು ದುರಂತದಲ್ಲಿ ಸಾವಿಗೀಡಾಗಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net