

ಬೆಂಗಳೂರು: ಕೋವಿಡ್-19 (ಕರೊನಾ ವೈರಸ್) ತಡೆಗಟ್ಟುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಭಕ್ತರು / ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲು ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಗೆ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡುವ ಸಾಧ್ಯತೆ ಇರುವುದರಿಂದ ಭಕ್ತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಧಿಸೂಚಿತ ದೇವಾಲಯಗಳು, ಸಂಸ್ಥೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಪೂರ್ವತಯಾರಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ಮುಂಜಾಗ್ರತಾ ಕ್ರಮಗಳೇನು?
2. ದೇವಾಲಯಗಳಿಗೆ ಹೆಚ್ಚುವರಿ ಸಿಬ್ಬಂದಿ (ಸೆಕ್ಯೂರಿಟಿ ಗಾರ್ಡ್) ಅವಶ್ಯಕತೆ ಇದ್ದಲ್ಲಿ ದೇವಾಲಯದ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ತಾತ್ಕಾಲಿಕವಾಗಿ ಎರಡು ತಿಂಗಳ ಅವಧಿಗೆ ನೇಮಿಸಿಕೊಳ್ಳುವುದು ಹಾಗೂ ಹೆಚ್ಚುವರಿ ಸೆಕ್ಯೂರಿಟಿ ಗಾರ್ಡ್ಗಳ ವ್ಯವಸ್ಥೆಗೆ ತಗುಲುವ ವೆಚ್ಚವನ್ನು ಆಯಾ ದೇವಾಲಯದ ನಿಧಿಯಿಂದ ಭರಿಸುವುದು.
3. ದೇವಾಲಯದ ಅಧಿಕಾರಿ/ ನೌಕರರು ಕಡ್ಡಾಯವಾಗಿ ಮಾಸ್ಕ್ಗಳನ್ನು ಧರಿಸುವುದು ಹಾಗೂ ಅರ್ಚಕರು/ ಆಗಮಿಕರು/ ಪರಿಚಾರಕರು ಇತ್ಯಾದಿ ಒಳಾಂಗಣ ಸಿಬ್ಬಂದಿಗಳು ದೇವಾಲಯದ ಒಳಾಂಗಣವನ್ನು ಹೊರತುಪಡಿಸಿ ಉಳಿದ ಕಡೆ ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸುವುದು.
ಇದನ್ನೂ ಓದಿ: ನಾಳೆ ಲಾಕ್ಡೌನ್ ಇರಲ್ಲ!
4. ದೇವಾಲಯದ ಪ್ರವೇಶ ದ್ವಾರಗಳಲ್ಲಿ ಕಡ್ಡಾಯವಾಗಿ ಇನ್ಫ್ರಾರೆಡ್ ಥರ್ಮೋಮೀಟರ್ನಿಂದ ಭಕ್ತರ ದೇಹದ ಉಷ್ಣತೆಯನ್ನು ಪರೀಕ್ಷಿಸುವುದು ಹಾಗೂ ಕೈಗಳಿಗೆ ಸ್ಯಾನಿಟೈಸರ್ ಹಾಕುವುದು. ಇದನ್ನು ಖರೀದಿಸಲು ಇದಕ್ಕೆ ತಗುಲುವ ವೆಚ್ಚವನ್ನು ಆಯಾ ದೇವಾಲಯದ ನಿಧಿಯಿಂದ ಭರಿಸುವುದು. ಭಕ್ತರ ದೇಹದ ಉಷ್ಣತೆ ಹೆಚ್ಚಾಗಿರುವುದು ಕಂಡುಬಂದಲ್ಲಿ ಅಂಥವರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡುವಂತಿಲ್ಲ.
5. ಬಾಯಿ ಮತ್ತು ಮೂಗನ್ನು ಮುಚ್ಚುವಂತೆ ಮಾಸ್ಕ್ಗಳನ್ನು ಅಥವಾ ಕರವಸ್ತ್ರಗಳನ್ನು ಧರಿಸಿದವರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ಕಲ್ಪಿಸುವುದು. ಈ ಬಗ್ಗೆ ಸೂಚನಾ ಫಲಕಗಳ ಮೂಲಕ ಭಕ್ತರ ಗಮನಕ್ಕೆ ತರುವುದು.
6. ದೇವಾಲಯಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಸಾಮಾಜಿಕ ಅಂತರ (1 ಮೀ.) ಕಾಪಾಡುವ ನಿಟ್ಟಿನಲ್ಲಿ ದೇವಾಲಯದಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. (ಉದಾಃ ಭಕ್ತರ ಸರತಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮಾರ್ಕ್ಗಳನ್ನು ಗುರುತಿಸುವುದು. ಆಯಾ ದೇವಾಲಯಗಳಲ್ಲಿ ಅಗತ್ಯಕ್ಕೆ ತಕ್ಕಂತೆ ತಾತ್ಕಾಲಿಕ ಸರತಿ ಸಾಲುಗಳನ್ನು ನಿರ್ಮಿಸುವುದು).
7. ದೇವಾಲಯದ ಶೌಚಾಲಯಗಳನ್ನು ಆಗಾಗ ಸ್ವಚ್ಛಗೊಳಿಸುವುದು ಮತ್ತು ಕೋವಿಡ್ ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.
ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಇತರ ಅಗತ್ಯ ಕ್ರಮಗಳನ್ನು ದೇವಾಲಯದ ಅಧಿಕಾರಿಗಳು ಕೈಗೊಳ್ಳಬೇಕೆಂದು ರಾಜ್ಯ ಧಾರ್ಮಿಕ ದತ್ತಿ ಇಲಾಖೆ ತಿಳಿಸಿದೆ.