

ಬೆಂಗಳೂರು: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಪ್ರಭುತ್ವ ಸಾಧಿಸಿದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ದಾಖಲಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಎಂಟರಘಟ್ಟದ ಹಂತಕ್ಕೆ ಮತ್ತಷ್ಟು ಸನಿಹವಾಯಿತು. ಆರಂಭಿಕ ಬ್ಯಾಟ್ಸ್ಮನ್ ದೇವದತ್ ಪಡಿಕಲ್ (126ರನ್, 138 ಎಸೆತ, 13 ಬೌಂಡರಿ, 2 ಸಿಕ್ಸರ್) ಭರ್ಜರಿ ಶತಕ ಹಾಗೂ ಮಿಥುನ್ (52ಕ್ಕೆ 5) ಮಾರಕ ದಾಳಿ ನೆರವಿನಿಂದ ಕರ್ನಾಟಕ ತಂಡ 9 ವಿಕೆಟ್ಗಳಿಂದ ಕೇರಳ ತಂಡವನ್ನು ಸೋಲಿಸಿತು. ಇದುವರೆಗೂ ಆಡಿರುವ 4 ಪಂದ್ಯಗಳಲ್ಲಿ ಸತತ 3ನೇ ಜಯದಾಖಲಿಸಿದ ಆತಿಥೇಯ ಕರ್ನಾಟಕ ತಂಡ 12 ಅಂಕಗಳೊಂದಿಗೆ ಎಲೈಟ್ ಸಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಕೇರಳ ತಂಡ 8 ವಿಕೆಟ್ಗೆ 277 ರನ್ ಪೇರಿಸಿತು. ಪ್ರತಿಯಾಗಿ ಕರ್ನಾಟಕ ತಂಡ, ದೇವದತ್ ಪಡಿಕಲ್ ಶತಕದಾಟ, ಸಿದ್ಧಾರ್ಥ್ ಕೆವಿ (86*ರನ್, 84 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ಸಮರ್ಥ್.ಆರ್ (62 ರನ್, 51 ಎಸೆತ, 10ಬೌಂಡರಿ) ಒಳಗೊಂಡ ಬ್ಯಾಟಿಂಗ್ ಪಡೆಯ ಸಮರ್ಥ ನಿರ್ವಹಣೆ ಫಲವಾಗಿ 45.3 ಓವರ್ಗಳಲ್ಲಿ 279 ರನ್ಗಳಿಸಿ ಗೆಲುವಿನ ನಗೆ ಬೀರಿತು.
ಕೇರಳ : 8 ವಿಕೆಟ್ಗೆ 277 (ವತ್ಸಲ್ 95, ಸಚಿನ್ ಬೇಬಿ 54, ಮೊಹಮದ್ ಅಜರುದ್ದೀನ್ 59*, ಮಿಥುನ್ 52ಕ್ಕೆ 5, ಪ್ರಸಿದ್ಧ್ ಕೃಷ್ಣ 65ಕ್ಕೆ 2), ಕರ್ನಾಟಕ: 45.3 ಓವರ್ಗಳಲ್ಲಿ 1 ವಿಕೆಟ್ಗೆ 279 (ಸಮರ್ಥ್.ಆರ್ 62, ದೇವದತ್ ಪಡಿಕಲ್ 126*, ಸಿದ್ಧಾರ್ಥ್ ಕೆವಿ 86*).