

ಮೈಸೂರು: ನೆರೆ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲಿಯೂ 70 ವರ್ಷ ತುಂಬಿದ ನಿವೃತ್ತ ನೌಕರರಿಗೆ ಶೇ.10ರಷ್ಟು ಪಿಂಚಣಿ ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ವಿಶ್ರಾಂತ ಉದ್ಯೋಗಗಳ ಸಂಘದಿಂದ ಸರ್ಕಾರವನ್ನು ಒತ್ತಾಯಿಸಲಾಯಿತು.
ನಗರದ ಶ್ರೀರಾಂಪುರ ಎರಡನೇ ಹಂತದಲ್ಲಿ ಶನಿವಾರ ಸಂಘದಿಂದ ಆಯೋಜಿಸಿದ್ದ ವಲಯಮಟ್ಟದ ಸಂಘಟನಾ ಸಭೆಯಲ್ಲಿ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಯಿತು. ನೆರೆಯ ರಾಜ್ಯಗಳಲ್ಲಿ 65 ವರ್ಷಕ್ಕೆ ಕಾಲಿಟ್ಟ ದಿನದಿಂದಲೇ ಶೇ.5ರಷ್ಟು ಹೆಚ್ಚುವರಿ ಪಿಂಚಣಿಯನ್ನು ನೀಡಲಾಗುತ್ತಿದೆ. ಅದೇ ಮಾದರಿ ಕರ್ನಾಟಕದಲ್ಲಿಯೂ ನಿವೃತ್ತ ನೌಕರರು 70 ವರ್ಷಕ್ಕೆ ಕಾಲಿಟ್ಟ ದಿನದಿಂದಲೇ ಶೇ.10ರಷ್ಟು ಪಿಂಚಣಿ ಏರಿಕೆ ಮಾಡುಬೇಕು ಎಂದು ಸರ್ಕಾರವನ್ನು ಆಗ್ರಹಿಸಲಾಯಿತು.
2022 ಜುಲೈನಿಂದ 2024 ಜುಲೈ ಅವಧಿಯಲ್ಲಿ ನಿವೃತ್ತರಾದ ಸರ್ಕಾರಿ ನೌಕರರಿಗೆ ಡಿಸಿಆರ್‌ಜಿ ಮತ್ತು ಪಿಟ್ ಮೆಂಟ್‌ನಲ್ಲಿ ಎರಡು ವರ್ಷ ಹಿಂದೆಯೇ ನೀಡಬೇಕಿದ್ದರೂ, 2024ರ ಜುಲೈನಲ್ಲಿ ಕೊಟ್ಟಿರುವುದು ನಿಯಮ ವಿರುದ್ಧವಾಗಿದೆ. ಕಮ್ಯುಟೇಷನ್ 15 ವರ್ಷದ ಬದಲು ಹತ್ತು ವರ್ಷ ಎಂಟು ತಿಂಗಳಿಗೆ ಕಟಾವು ಮಾಡುವುದನ್ನು ನಿಲ್ಲಿಸಬೇಕೆಂದು ಪಂಜಾಬ್ ಹೈಕೋರ್ಟ್‌ನಲ್ಲಿ ತಡೆ ನೀಡಲಾಗಿದೆ. ಅದನ್ನು ಕರ್ನಾಟಕಕ್ಕೂ ಅನ್ವಯಗೊಳಿಸಬೇಕು ಎಂದು ಕೋರಲಾಯಿತು.
ಸರ್ಕಾರಿ ನಿವೃತ್ತ ನೌಕರರ ಪಿಂಚಣಿದಾರರ ಕುಟುಂಬಕ್ಕೆ ನೀಡುವ ಪಿಂಚಣಿಯನ್ನು ಶೇ.30ಕ್ಕೆ ನಿಗದಿ ಪಡಿಸಲಾಗಿದ್ದು, ಇದನ್ನು ಶೇ.50ಕ್ಕೆ ಏರಿಕೆ ಮಾಡಬೇಕು. ರೈಲ್ವೆ ಪ್ರಯಾಣದಲ್ಲಿ ಹಿಂದೆ ಶೇ.40ರಿಂದ 50ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಕೋವಿಡ್ ಬಳಿಕ ಅದನ್ನು ನಿಲ್ಲಿಸಲಾಗಿದೆ. ಇದರಿಂದ ವಯಸ್ಸಾದವರಿಗೆ ಅನಾನುಕೂಲವಾಗಿದ್ದು, ತಕ್ಷಣವೇ ಹಿಂದಿನಂತೆ ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಲಾಯಿತು.
ನಿವೃತ್ತ ನೌಕರರಿಗೆ ಪಿಂಚಣಿಗೆ ವಿಧಿಸುತ್ತಿರುವ ಆದಾಯ ತೆರಿಗೆ ಹೊರೆ ದುಬಾರಿಯಾಗಿದೆ. ಪಿಂಚಣಿ ವೇತನವಾಗಿರದೆ ಸಂಧ್ಯಾಕಾಲದ ಆಪತ್ ನಿಧಿಯಾಗಿದೆ. ಏನು ಕೆಲಸ ಮಾಡದೆ ನೀಡುವ ಎಕ್ಸ್‌ಗ್ರೇಶಿಯಾ ನಿಧಿ. ಹಾಗಾಗಿ, ಆದಾಯ ತೆರಿಗೆಯಲ್ಲಿ ಪಿಂಚಣಿ ಎಂದು ನಮೂದಿಸಿ ಆದಾಯ ತೆರಿಗೆಯಿಂದ ವಿನಾಯಿತಿ ನೀಡಬೇಕು. ನಿವೃತ್ತ ನೌಕರರಿಗೆ ಆಯುಷ್ಮಾನ್ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಲಾಯಿತು.
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಲ್. ಭೈರಪ್ಪ ಅವರು ವಿಷಯವನ್ನು ಸಭೆಗೆ ಮಂಡಿಸಿದಾಗ ಬೇಡಿಕೆ ಈಡೇರಿಸಬೇಕೆಂದು ಪದಾಧಿಕಾರಿಗಳು, ಸದಸ್ಯರು ಸರ್ವಾನುಮತದಿಂದ ಸಮ್ಮತಿ ನೀಡಿದರು. ಮೈಸೂರು ಜಿಲ್ಲಾಧ್ಯಕ್ಷ ಬಿ.ಆರ್.ಉಮಾಕಾಂತ್, ಉಪಾಧ್ಯಕ್ಷ ಶ್ರೀನಿವಾಸ್, ಕೇಂದ್ರ ಸಂಘದ ಉಪಾಧ್ಯಕ್ಷರಾದ ಕೆ.ಟಿ.ವೀರಪ್ಪ, ಚಿಕ್ಕಲಿಂಗಸ್ವಾಮಿ, ಮುಖಂಡರಾದ ಎಲ್.ರೇವಣ್ಣಗೌಡ, ಧನಂಜಯ, ಗೋವಿಂದಸ್ವಾಮಿ, ಶಾರದಮ್ಮ, ಶಾಂತಮತಿ, ಸಣ್ಣಲಿಂಗಪ್ಪ, ಗೋವಿಂದೇಗೌಡ, ನಿವೃತ್ತ ನೌಕರರ ವೇದಿಕೆ ಸಂಚಾಲಕ ಮಾದಪ್ಪ, ಮೈಸೂರು ವಿಭಾಗದ 9 ಜಿಲ್ಲೆಯ ಆಡಳಿತ ಮಂಡಳಿ ಪದಾಧಿಕಾರಿಗಳು, ಮೈಸೂರು ಜಿಲ್ಲೆಯ ಆರು ತಾಲೂಕಿನ ಆಡಳಿತ ಮಂಡಳಿಯವರು ಆಗಮಿಸಿದ್ದರು.