

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾ.25ರಿಂದ ಏ.6ರವರೆಗೆ ನಡೆಸಿದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಇಂದು (ಮೇ 09) ಪ್ರಕಟವಾಗಿದೆ. ಒಟ್ಟಾರೆ ಶೇ. 73.40 ಮಕ್ಕಳು ತೇರ್ಗಡೆಯಾಗಿದ್ದಾರೆ. ಈ ಹಿಂದಿನಂತೆ ಈ ವರ್ಷವೂ ಕೂಡಾ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಗಲಕೋಟೆಯ ವಿದ್ಯಾರ್ಥಿನಿ ಅಂಕಿತಾ 625ಕ್ಕೆ 625 ಅಂಕವನ್ನು ಪಡೆದ ಏಕೈಕ ವಿದ್ಯಾರ್ಥಿನಿ ಎನಿಸಿಕೊಂಡಿದ್ದಾಳೆ.
ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಮಂಡಳಿಯ ಅಧಿಕಾರಿಗಳು ಇಂದು ಬೆಳಗ್ಗೆ 10.30ಕ್ಕೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದರು. ಮಂಡಳಿಯ ವೆಬ್‌ಸೈಟ್ http://karresults.nic.inನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಈ ಬಾರಿ ಶೇ. 94 ಫಲಿತಾಂಶದೊಂದಿಗೆ ಉಡುಪಿ ಪ್ರಥಮ ಸ್ಥಾನದಲ್ಲಿದ್ದರೆ, ಶೇ. 50.59 ಫಲಿತಾಂಶದೊಂದಿಗೆ ಯಾದಗಿರಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಉಡುಪಿಯ ನಂತರ ಶೇ. 92.12 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದ್ದರೆ, ಶೇ. 88.67 ಫಲಿತಾಂಶದೊಂದಿಗೆ ಶಿವಮೊಗ್ಗ ಮೂರನೇ ಸ್ಥಾನದಲ್ಲಿದೆ. ಶೇ. 81.11 ಫಲಿತಾಂಶದೊಂದಿಗೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ ಬಾರಿ 87.87ರಷ್ಟು ಫಲಿತಾಂಶ ಬಂದಿತ್ತು. ಇನ್ನು ಬಾಲಕರು ಶೇ. 65.90 ಫಲಿತಾಂಶದೊಂದಿಗೆ ತೀವ್ರ ಕುಸಿತ ಕಂಡಿದ್ದಾರೆ. ಕಳೆದ ಬಾರಿ 80.08 ರಷ್ಟು ಫಲಿತಾಂಶ ಬಂದಿತ್ತು.
ಈ ಬಾರಿ ಒಟ್ಟಾರೆ ಶೇ. 73.40 ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ. 83.89 ಫಲಿತಾಂಶಕ್ಕೆ ಹೋಲಿಕೆ ಮಾಡಿದರೆ, ಈ ಬಾರಿ ಶೇ. 10 ಫಲಿತಾಂಶ ಕುಸಿತವಾಗಿದೆ. ಎಲ್ಲರ ನಿರೀಕ್ಷೆಯಂತೆ ಈ ಬಾರಿಯೂ ಗ್ರಾಮೀಣ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. 78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಹಾಗೂ 2288 ಶಾಲೆಗಳಲ್ಲಿ ಶೇ.100 ಫಲಿತಾಂಶ ಬಂದಿದೆ.
ಬಾಗಲಕೋಟೆಯ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿರುವ ಅಂಕಿತಾ ಬಸಪ್ಪ ಎನ್ನುವ ವಿದ್ಯಾರ್ಥಿನಿ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ರಾಜ್ಯದಲ್ಲಿ 625ಕ್ಕೆ 625 ಅಂಕ ಪಡೆದ ಏಕೈಕ ವಿದ್ಯಾರ್ಥಿನಿಯಾಗಿದ್ದಾಳೆ.
ಇಲ್ಲಿದೆ ಟಾಪರ್ಸ್ ಪಟ್ಟಿ
* ಅಂಕಿತಾ ಬಸಪ್ಪ (ಬಾಗಲಕೋಟೆ): 625ಕ್ಕೆ 625 ಅಂಕಗಳು
* ಮೇದಾ ಪಿ ಶೆಟ್ಟಿ (ಬೆಂಗಳೂರು): 625ಕ್ಕೆ 624 ಅಂಕಗಳು
* ಹರ್ಷಿತಾ ಡಿಎಂ (ಮಧುಗಿರಿ): 625ಕ್ಕೆ 624 ಅಂಕಗಳು
* ಚಿನ್ಮಯ್ (ದಕ್ಷಿಣ ಕನ್ನಡ): 625ಕ್ಕೆ 624 ಅಂಕಗಳು
* ಸಿದ್ದಾಂತ್ (ಚಿಕ್ಕೋಡಿ): 625ಕ್ಕೆ 624 ಅಂಕಗಳು
* ಶ್ರೀರಾಮ್ (ಶಿರಸಿ): 625ಕ್ಕೆ 624 ಅಂಕಗಳು
* ದರ್ಶನ್ (ಶಿರಸಿ): 625ಕ್ಕೆ 624 ಅಂಕಗಳು
* ಚಿನ್ಮಯ್ (ಶಿರಸಿ): 625ಕ್ಕೆ 624 ಅಂಕಗಳು
ಇನ್ನೂ ಬೆಂಗಳೂರಿನ ರಾಜಾಜಿನಗರದ ವಿವಿಎಸ್ ಸರ್ದಾರ್ ಪಟೇಲ್ ಶಾಲೆಯ ಇಬ್ಬರು ವಿದ್ಯಾರ್ಥಿಗಳಾದ ಅಂಕಿತಾ ಹಾಗೂ ಸೌರವ್ ಕೌಶಿಕ್ಗೆ ತಲಾ 623 ಅಂಕಗಳು ಬಂದಿವೆ.
ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಮೇ 16 ಕೊನೇ ದಿನವಾಗಿದ್ದು, ಶುಲ್ಕ ಪಾವತಿಗೆ ಮೇ 17 ಅಂತಿಮ ದಿನವಾಗಿದೆ. ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಮೇ 22ರವರೆಗೆ ಅವಕಾಶ ನೀಡಲಾಗಿದೆ.
ಮಂಡಳಿಯು ಈಗಾಗಲೇ ಪರೀಕ್ಷೆ-1, 2, 3 ನ ಹೊಸ ಮಾದರಿಯನ್ನು ಪರಿಚಯಿಸಿರುವುರಿಂದ ಮೊದಲನೆಯ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿ ಉತ್ತೀರ್ಣರಾಗದಿದ್ದರೆ, ವಿದ್ಯಾರ್ಥಿಯ ಫಲಿತಾಂಶವನ್ನು NC Not Completed (ಪೂರ್ಣಗೊಳಿಸಲಾಗಿಲ್ಲ) ಎಂದು ತೋರಿಸಲಾಗುತ್ತದೆ. ನಂತರ ಮೂರೂ ಪರೀಕ್ಷೆಗಳ ಪೈಕಿ ಗಳಿಸಿದ ಗರಿಷ್ಠ ಅಂಕಗಳ ಆಧಾರದ ಮೇಲೆ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗುವುದು.