ಮಾಜಿ ಅಥ್ಲೀಟ್​ ಬಿಂದುರಾಣಿಗೆ ಕೋಚ್‌ ಪತ್ನಿಯಿಂದ ಹಲ್ಲೆ ಯತ್ನ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​

Bindurani
Published on

ಬೆಂಗಳೂರು: ಕರ್ನಾಟಕ ಅಥ್ಲೆಟಿಕ್ಸ್‌ ಕೋಚ್ ಬಿಂದು ರಾಣಿ ಮೇಲೆ ಮತ್ತೋರ್ವ ಕೋಚ್ ಯತೀಶ್ ಅವರ ಪತ್ನಿ ಶ್ವೇತಾ ಎಂಬಾಕೆ ಸೋಮವಾರ ಕಂಠೀರವ ಕ್ರೀಡಾಂಗಣದಲ್ಲಿ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದೆ.

ಹಣ ಸಂಪಾದಿಸಲು, ನಕರ ದಾಖಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ಕೆಲವು ವಿಚಾರಗಳಿಗೆ ಸಂಬಂಧಪಟ್ಟಂತೆ ಬಿಂದುರಾಣಿ ಅವರಿಗೆ ಪ್ರಶ್ನೆ ಕೇಳುವ ಮೂಲಕ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಲ್ಲದೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಳ್ಳು ಮಾಹಿತಿ ಹಂಚಿಕೊಂಡಿದ್ದಾರೆ ಎಂಬ ಆರೋಪ ಮಾಡಲಾಗಿದೆ.

ವಿಡಿಯೋದಲ್ಲಿ ಏನಿದೆ?: ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯತೀಶ್ ಅವರ ಪತ್ನಿ ಶ್ವೇತಾ, ಬಿಂದು ರಾಣಿ ಮೇಲೆ ಕಳ್ಳತನದ ಆರೋಪ ಜತೆಗೆ ಹಣ ಸಂಪಾದನೆಗೆ ನಕಲಿ ಪ್ರಮಾಣ ಪತ್ರ, ಪದಕ ಗೆದ್ದಿರುವ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. 2017ರಲ್ಲಿ ಲಕ್ಷಾಂತರ ರೂ. ಮೌಲ್ಯದ ಕೀಡಾ ಸಾಮಗ್ರಿಗಳನ್ನು ಕಳವು ಮಾಡಿರುವ ಅರೋಪದ ಜತೆಗೆ ತನ್ನ ಗಂಡನಿಗೆ ಬೆದರಿಕೆ ಹಾಕಿದ್ದಾರೆ ಎಂದು ಶ್ವೇತಾ ಆರೋಪಿಸಿದ್ದಾರೆ. ನಿನ್ನ ಸಾಧನೆಗೆ ನಿಜವಾದ ಪದಕ ಚಪ್ಪಲಿ ಎಂದು ಚಪ್ಪಲಿ ತೋರಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ದೂರಲಾಗಿದೆ.

ಖೇಲ್​ ರತ್ನ ಅಲ್ಲ, ಖೇಲ್‌ ರತ್ನ ಪುರಸ್ಕಾರ!: ಪ್ರಕರಣ ಕುರಿತು ಮಾತನಾಡಿರುವ ಬಿಂದು ರಾಣಿ, ಟೆಡ್ ಎಕ್ಷ್​ ಶೋನಲ್ಲಿ ಭಾಗವಹಿಸಿದ ಬಗ್ಗೆ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದೆ. ನನಗೆ ಖೇಲ್ ರತ್ನ ಅವಾರ್ಡ್ ಸಿಕ್ಕಿದೆ ಎಂದು ಸುಳ್ಳು ಮಾಹಿತಿ ಹಾಕಿರುವ ಎಂದು ಆರೋಪಿಸುತ್ತಿದ್ದಾರೆ. ಆದರೆ ಅದು 'ಖೇಲ್‌ ರತ್ನ ಪುರಸ್ಕಾರ' ಪಶಸ್ತಿ' ಆಗಿದೆ. 2017ರಲ್ಲಿ ಆಗಿರುವ ಘಟನೆಯ ಬಗ್ಗೆ ಇಲ್ಲಿಯವರೆಗೆ ಯಾಕೆ ಮಾತನಾಡಲಿಲ್ಲ. ಈ ಘಟನೆಯಿಂದ ಸಾರ್ವಜನಿಕವಾಗಿ ಮಹಿಳೆಗೆ ರಕ್ಷಣೆ ಇಲ್ಲದಂತಾಗಿದೆ ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ?

ಟೆಡ್ ಎಕ್ಸ್ ಎಂಬ ಟಾಕ್ ಷೋ ಕಾರ್ಯಕ್ರಮದಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದು, ಜೂನ್ 30ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಅಥ್ಲೀಟ್ ಬಿಂದು ರಾಣಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಬಳಿಕ ಬಿಂದು ರಾಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಗ್ಗೆ ಆಯೋಜಕರು ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ, ಬಿಂದು ರಾಣಿ 200 ಅಧಿಕ ಪದಕ ಜಯಿಸಿದ್ದು, ಖೇಲ್ ರತ್ನ ಜತೆಗೆ ಹಲವು ಅಂತಾರಾಷ್ಟ್ರೀಯ ಪುರಸ್ಕಾರ ಗೆದ್ದಿದ್ದಾರೆ ಎಂಬ ಮಾಹಿತಿ ಇತ್ತು ಎನ್ನಲಾಗಿದೆ. ಅದೇ ಪೋಸ್ಟ್ ಅನ್ನು ಬಿಂದು ರಾಣಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಮರು ಹಂಚಿಕೊಂಡಿದ್ದಾರೆ. ಇದನ್ನು ಗಮನಿಸಿದ ಕೋಚ್ ಯತೀಶ್, ಕಂಠೀರವ ಕ್ರೀಡಾಂಗಣ ಕೋಚ್‌ಗಳ ವಾಟ್ಸ್‌ ಆ್ಯಪ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡುವುದರ ಜತೆಗೆ ಬಿಂದು ರಾಣಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಇದಾದ ಬಳಿಕ ಬಿಂದು ರಾಣಿ ಅವರ ಪತಿ, ರಾತ್ರಿ 10 ಗಂಟೆಗೆ ಯತೀಶ್‌ಗೆ ಕರೆ ಮಾಡಿ ಬೆದರಿಕೆ ಹಾಕುವುದರ ಜತೆಗೆ ಗೆದ್ದ ಪದಕಗಳ ಬಗ್ಗೆ ಕೇಳಲು ನೀವ್ಯಾರು ಎಂದು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. ಯತೀಶ್​ ಪತ್ನಿ ಶ್ವೇತಾ ಕೂಡ ಪ್ರತಿದಿನ ಕ್ರೀಡಾಂಗಣಕ್ಕೆ ಅಭ್ಯಾಸಕ್ಕೆ ತೆರಳುತ್ತಿದ್ದು, ಪತಿಗೆ ಬೆದರಿಕೆ ಹಾಕಿದ್ದನ್ನು ತಿಳಿದು ಹಲ್ಲೆಗೆ ಯತ್ನಿಸಿ, ಸುಳ್ಳು ಮಾಹಿತಿ ಹಾಕಿರುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net