ಕಮಲ್​ ಹಾಸನ್​ಗೆ ಭಾರೀ ಮುಖಭಂಗ; ಜೂನ್​.10 ರವರೆಗೂ ಕರುನಾಡಿನಲಿಲ್ಲ 'ಥಗ್​ ಲೈಫ್' ರಿಲೀಸ್​ | Kamal Haasan

ವಿಜಯವಾಣಿ (14)
Published on

ಬೆಂಗಳೂರು: ಇಂದು (ಜೂ.03) ತಮಿಳು ನಟ ಕಮಲ್ ಹಾಸನ್ (Kamal Haasan) ತಮ್ಮ ಸಿನಿಮಾ ‘ಥಗ್​ ಲೈಫ್’​ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಗೊಳಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ನಟನನ್ನು ಹಿಗ್ಗಾಮುಗ್ಗಾ ಥರಾಟೆಗೆ ತೆಗೆದುಕೊಂಡಿತು. ವಿಚಾರಣೆ ಬಳಿಕ ಆದೇಶ ಪ್ರಕಟಿಸಿದ ಕೋರ್ಟ್​, ವಿಚಾರಣೆಯನ್ನು ಜೂ.10ಕ್ಕೆ ಮುಂದೂಡಿದೆ. ಅಲ್ಲಿಯವರೆಗೂ ಕರ್ನಾಟದಲ್ಲಿ ಚಿತ್ರ ತೆರೆ ಕಾಣುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕಮಲ್ ಹಾಸನ್​ ‘ಕನ್ನಡ ತಮಿಳಿನಿಂದ ಹುಟ್ಟಿದ್ದು’ ಎಂಬ ಹೇಳಿಕೆಯ ವಿಡಿಯೋ ವೀಕ್ಷಣೆ ಮಾಡಿದ ನ್ಯಾ. ನಾಗಪ್ರಸನ್ನ ಅವರ ಪೀಠವು, “ಈ ಹಿಂದೆ 1950ರಲ್ಲಿ ಜಿ. ರಾಜಗೋಪಾಲಚಾರಿ ಇದೇ ರೀತಿ ಹೇಳಿಕೆ ಕೊಟ್ಟಿದ್ದರು. ಆ ನಂತರ ಕ್ಷಮೆ ಕೋರಿದ್ದರು. ನೀವು ಇಲ್ಲಿಯವರೆಗೂ ಕ್ಷಮೆಯಾಚಿಸಿಲ್ಲ. ಧಕ್ಕೆ ತಂದು ನಿಮ್ಮ ಚಿತ್ರದ ರಿಲೀಸ್​ ಬಯಸುತ್ತೀದ್ದೀರಾ?” ಎಂದು ಕಮಲ್​ ಪರ ವಕೀಲರಿಗೆ ಪ್ರಶ್ನಿಸಿತು.

ಕ್ಷಮೆ ಕೇಳದ ಕಮಲ್​ಗೆ ಕೋರ್ಟ್​ ಪಾಠ

“ವಾಣಿಜ್ಯ ಉದ್ದೇಶದಲ್ಲಿ ಸಿನಿಮಾ ಮಾಡಿದ್ದೀರಾ, ನಿಮ್ಮ ತಪ್ಪಿಗೆ ಪೊಲೀಸರು ಭದ್ರತೆ ನೀಡಬೇಕಾ? ಇದರಲ್ಲಿ ನಿಮ್ಮ ನಿಲುವು ಏನು? ತಿಳಿಸಿ” ಎಂದು ನ್ಯಾಯಾಧೀಶರು ಕೇಳಿದ್ದಾರೆ. ಸದ್ಯ ವಿಚಾರಣೆಯನ್ನು ಮಧ್ಯಾಹ್ನ 2:30ಕ್ಕೆ ಮುಂದೂಡಲಾಯಿತು. ಅಂತೆಯೇ ವಿಚಾರಣೆಯನ್ನು ಪುನಾರಂಭ ಮಾಡಿದ ಕೋರ್ಟ್​, "ಕಮಲ್ ಹಾಸನ್​ ಆಗಿರಲಿ ಅಥವಾ ಯಾರೇ ಆಗಿರಲಿ, ಜನರ ಭಾವನೆಗೆ ನೋವುಂಟು ಮಾಡಬಾರದು. ಅವರಿಗೆ ಕ್ಷಮೆ ಕೇಳಲು ಆತ್ಮಪ್ರತಿಷ್ಠೆ ಅಡ್ಡಿಯಾಗುತ್ತಿದೆ" ಎಂದು ಹೇಳಿತು.

ಕಮಲ್​ ಪರ ವಕೀಲರ ವಾದ

"ಕಮಲ್ ಹಾಸನ್ ಅವರಿಗೆ ಕನ್ನಡದ ಮೇಲೆ ಪ್ರೀತಿಯಿದೆ. ಈಗಾಗಲೇ ಅವರನ್ನು ಅದನ್ನು ಪತ್ರದ ಮೂಲಕ ತಿಳಿಸಿದ್ದಾರೆ. ಕನ್ನಡದ ಬಗ್ಗೆ ನಟ ಎಲ್ಲಿಯೂ ಅಸಂಬದ್ಧ ಹೇಳಿಕೆ ನೀಡಿಲ್ಲ. ಈ ವಿಚಾರಣೆಯನ್ನು ಒಂದು ವಾರ ಮುಂದೂಡಿ" ಎಂದು ಕೋರ್ಟ್​ಗೆ ನಟನ ಪರ ವಕೀಲರಾದ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿದರು. ವಾದ ಆಲಿಸಿದ ನ್ಯಾ. ನಾಗಪ್ರಸನ್ನ ಅವರ ಪೀಠವು, ಇದೀಗ ವಿಚಾರಣೆಯನ್ನು ಜೂ.10ಕ್ಕೆ ಮುಂದೂಡಿದೆ. ಈ ಮೂಲಕ ಕರ್ನಾಟಕದಲ್ಲಿ ಜೂನ್​.5ಕ್ಕೆ ಕಮಲ್ ಅಭಿನಯದ​ "ಥಗ್​ ಲೈಫ್" ಸಿನಿಮಾ ರಿಲೀಸ್ ಆಗುವುದಿಲ್ಲ. ಜೂ.10ರ ವಿಚಾರಣೆಯವರೆಗೂ ಕಾಯಬೇಕು ಎಂಬ ಖಡಕ್​ ಸೂಚನೆಯನ್ನು ರವಾನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net