ಕರ್ನಾಟಕದಲ್ಲಿ ಮತ್ತೆರಡು ಕರೊನಾ ಪ್ರಕರಣ, ರಾಜ್ಯದಲ್ಲಿ ಸೋಂಕುಪೀಡಿತರ ಸಂಖ್ಯೆ 10ಕ್ಕೆ ಏರಿಕೆ

Suspected Coronavirus 15 march 20
Published on

ಬೆಂಗಳೂರು/ನವದೆಹಲಿ: ಕರ್ನಾಟಕದಲ್ಲಿ ಮತ್ತೆರಡು ಹೊಸ ಕರೊನಾ ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದಲ್ಲಿನ ಕರೊನಾ ವೈರಸ್ Covid19 ಸೋಂಕು ಪೀಡಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಇದೇ ವೇಳೆ, ಜಾಗತಿಕ ಮಟ್ಟದಲ್ಲಿ ಕರೊನಾ ಪೀಡಿತರ ಸಂಖ್ಯೆ 7,000ದ ಗಡಿದಾಟಿದೆ.

ಕರ್ನಾಟಕದಲ್ಲಿ 60 ವರ್ಷದ ವ್ಯಕ್ತಿಯೊಬ್ಬರಿಗೆ ಮತ್ತು ಬ್ರಿಟನ್​ನಿಂದ ಹಿಂದಿರುಗಿದ 20 ವರ್ಷದ ಯುವತಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಮವಾರ ಸಂಜೆ ಎರಡು ಹೊಸ ಪ್ರಕರಣಗಳು ದೃಢಪಟ್ಟಿರುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿತ್ತು. ಹೀಗಾಗಿ ಸೋಂಕು ಪೀಡಿತರ ಸಂಖ್ಯೆ 6 ಇದ್ದದ್ದು ಎಂಟಕ್ಕೆ ಏರಿಕೆಯಾಗಿತ್ತು. ಮಂಗಳವಾರ ಬೆಳಗ್ಗೆ ಮತ್ತೆ ಎರಡು ಹೊಸ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಸೋಂಕುಪೀಡಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಈ ಪೈಕಿ 60 ವರ್ಷದ ವ್ಯಕ್ತಿ ಕಲಬುರಗಿಯ ಮೃತ ಸೋಂಕುಪೀಡಿತ ವ್ಯಕ್ತಿ ಜತೆಗೆ ಸಂಪರ್ಕ ಹೊಂದಿದವರಾಗಿದ್ದರು. 20 ವರ್ಷದ ಯುವತಿ ಬ್ರಿಟನ್​ಗೆ ತೆರಳಿ ಬಂದ ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ. ಇಬ್ಬರನ್ನೂ ಐಸೋಲೇಷನ್ ವಾರ್ಡ್​ನಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಮಾಹಿತಿ ಪ್ರಕಾರ, ಜಾಗತಿಕ ಮಟ್ಟದಲ್ಲಿ 7,071 ಜನ ಕರೊನಾ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದಾರೆ. 1,79,814 ಜನರಿಗೆ ಸೋಂಕು ತಗುಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net