

ಮೈಸೂರು: ತವರಿನಲ್ಲಿ ಮೊದಲ ಪಂದ್ಯ ಜಯಿಸಿದ ಬಳಿಕ ಎರಡನೇ ಪಂದ್ಯದಲ್ಲಿ ಆಘಾತಕಾರಿ ಸೋಲುಂಡಿರುವ ಆತಿಥೇಯ ಕರ್ನಾಟಕ ತಂಡ ಗುರುವಾರ ಆರಂಭವಾಗಲಿರುವ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಟೂರ್ನಿಯ 3ನೇ ಸುತ್ತಿನಲ್ಲಿ ಗೆಲುವಿನ ಹಳಿಗೆ ಮರಳುವ ನಿರೀಕ್ಷೆಯಲ್ಲಿದೆ. ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಪ್ರವಾಸಿ ಗೋವಾ ತಂಡದ ಸವಾಲನ್ನು ಮಯಾಂಕ್ ಅಗರ್ವಾಲ್ ಪಡೆ ಎದುರಿಸಲಿದೆ.
ಆಡಿರುವ 2 ಪಂದ್ಯಗಳಲ್ಲಿ ತಲಾ 1 ಗೆಲುವು- ಸೋಲಿನೊಂದಿಗೆ ಕರ್ನಾಟಕ ತಂಡ 6 ಅಂಕ ಗಳಿಸಿ ಸಿ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ಗೋವಾ ತಂಡ 2 ಪಂದ್ಯದಲ್ಲಿ ತಲಾ 1 ಸೋಲು-ಡ್ರಾದೊಂದಿಗೆ 2 ಅಂಕ ಕಲೆಹಾಕಿ 5ನೇ ಸ್ಥಾನದಲ್ಲಿದೆ. ಮೊದಲ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಖಾತೆ ತೆರೆಯದ ಮಯಾಂಕ್ ಅಗರ್ವಾಲ್ ಭರ್ಜರಿ ಶತಕದೊಂದಿಗೆ ಾರ್ಮ್‌ಗೆ ಮರಳಿದ್ದಾರೆ. ಆದರೆ ಸೋಲಿನ ಆಘಾತದಿಂದ ಕಂಬ್ಯಾಕ್ ಮಾಡಬೇಕಿದೆ. ಅನಾರೋಗ್ಯಕ್ಕೆ ತುತ್ತಾಗಿದ್ದ ಆರ್. ಸಮರ್ಥ್ ಚೇತರಿಸಿಕೊಂಡಿದ್ದು ಕಣಕ್ಕಿಳಿಯುವ ನಿರೀಕ್ಷೆ ಇದೆ. ಆದರೆ ಗಾಯಾಳು ವೇಗಿ ಪ್ರಸಿದ್ಧ ಕೃಷ್ಣ ಆಡುವುದು ಅನುಮಾನ ಎನಿಸಿದೆ. ವಿದ್ವತ್ ಕಾವೇರಪ್ಪ ಗೈರಿನಲ್ಲಿ ಪ್ರಸಿದ್ಧ ಕೃಷ್ಣ ಹೊರಗುಳಿದರೆ ರಾಜ್ಯಕ್ಕೆ ಹಿನ್ನಡೆ ಎದುರಾಗಲಿದೆ.
ದೇವದತ್ ಪಡಿಕ್ಕಲ್, ಮನೀಷ್ ಪಾಂಡೆ ಜತೆಗೆ ಮೊದಲ ಬಾರಿಗೆ ರಣಜಿ ಆಡುತ್ತಿರುವ ವಿಕೆಟ್ ಕೀಪರ್-ಬ್ಯಾಟರ್ ಸುಜಯ್ ಸಾತೇರಿ, ಸ್ಪಿನ್ನರ್ ರೋಹಿತ್ ಕುಮಾರ್ ಗಮನ ಸೆಳೆದಿದ್ದಾರೆ. ವಾಸುಕಿ ಕೌಶಿಕ್ ಉತ್ತಮ ಲಯದಲ್ಲಿದ್ದಾರೆ.ಇನ್ನು ಗೋವಾ ಮೊದಲ ಪಂದ್ಯದಲ್ಲಿ ತ್ರಿಪುರಾ ಎದುರು 237 ರನ್‌ಗಳ ಸೋಲು ಅನುಭವಿಸಿದರೆ, ಚಂಢೀಗಡ ಎದುರು ಡ್ರಾ ಸಾಧಿಸಿದೆ. ಕರ್ನಾಟಕದಿಂದ ವಲಸೆ ಹೋಗಿರುವ ಕೆ.ಸಿದ್ಧಾರ್ಥ್, ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಪ್ರಮುಖ ಆಕರ್ಷಣೆ ಎನಿಸಿದ್ದಾರೆ.
ಆರಂಭ: 9.30
ನೇರಪ್ರಸಾರ: ಜಿಯೋ ಸಿನಿಮಾ
ಮುಖಾಮುಖಿ-18
ಕರ್ನಾಟಕ-13,
ಗೋವಾ-1
ಡ್ರಾ-4