ಕರ್ನಾಟಕ ಚಿತ್ರಕಲಾ ಪರಿಷತ್ತಿನಿಂದ ಜ. 5ಕ್ಕೆ 22ನೇ ಚಿತ್ರ ಸಂತೆ ಆಯೋಜನೆ

Sudhee_28_Chitra_Santhe_PM_@_CKP (1)
Published on

ಬೆಂಗಳೂರು: ಕಲಾವಿದರ ಕಲಾಕೃತಿಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಸುವ ನಿಟ್ಟಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ಪ್ರತಿ ವರ್ಷದಂತೆ ಈ ಬಾರಿಯೂ ಜ.5ರಂದು ಕುಮಾರಕೃಪಾ ರಸ್ತೆಯಲ್ಲಿ ‘‘22ನೇ ಚಿತ್ರಸಂತೆ’ ಹಮ್ಮಿಕೊಂಡಿದೆ.

ಹಲವು ವಿಶೇಷತೆಗಳಿಂದ ಕೂಡಿರುವ ಈ ಬಾರಿಯ ಚಿತ್ರಸಂತೆಯನ್ನು ‘ಹೆಣ್ಣು ಮಗುವಿಗೆ’ ಅರ್ಪಿಸಲಾಗುತ್ತಿದ್ದು, ಹೆಣ್ಣು ಭ್ರೂಣಹತ್ಯೆ, ಅತ್ಯಾಚಾರ, ಕಿರುಕುಳ ಸೇರಿ ಹೆಣ್ಣು ಮಕ್ಕಳ ಮೇಲಾಗುತ್ತಿರುವ ಶೋಷಣೆಗಳಿಂದ ಅವರನ್ನು ರಕ್ಷಿಸಿ, ಹೆಣ್ಣು ಸಂತತಿಯನ್ನು ಉಳಿಸುವ ಉದ್ದೇಶದೊಂದಿಗೆ ಜನರಲ್ಲಿ ಕಲೆಯ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳ ಸಾಕ್ಷರತೆ ಒತ್ತು ನೀಡಿದವರು, ಬಾಲ್ಯ ವಿವಾಹ, ಸತಿ ಪದ್ಧತಿ ವಿರುದ್ಧ ಹೋರಾಡುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ದುಡಿದ ಮಹನೀಯರ ಚಿತ್ರಗಳನ್ನು ಒಳಗೊಂಡಂತೆ ಸಂವಿಧಾನದ ಪೀಠಿಕೆಯನ್ನು ಸಹ ಪ್ರದರ್ಶಿಸಲಾಗುವುದು. ಇದಕ್ಕೆ ಪೂರಕವಾಗಿ ಕಲಾವಿದರೂ ಸಹ ಹೊಸ ಹೊಸ ಪ್ರಯೋಗಗಳೊಂದಿಗೆ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ ಎಂದು ಹೇಳಿದರು.

1,420 ಕಲಾವಿದರಿಗೆ ಅವಕಾಶ:

ಈ ಬಾರಿ ದೇಶದ ವಿವಿಧ ಭಾಗಗಳಿಂದ 3,177 ಕಲಾವಿದರು ಅರ್ಜಿಗಳನ್ನು ಸಲ್ಲಿಸಿದ್ದರು. ಅವುಗಳಲ್ಲಿ 189 ಹಿರಿಯ ಹಿರಿಯ ಕಲಾವಿದರು, 152 ವಿಶೇಷ ಚೇತನ ಕಲಾವಿದರು, 292 ಹವ್ಯಾಸಿ ಕಲಾವಿದರು, 769 ವೃತ್ತಿ ನಿರತ ಕಲಾವಿದರು ಹಾಗೂ 18 ಕಲಾ ಸಂಸ್ಥೆಗಳ ಕಲಾವಿದರು ಸೇರಿ 1,420 ಕಲಾವಿದರ ಕಲಾಕೃತಿಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಕಳೆದ ವರ್ಷದಂತೆ ಈ ಬಾರಿ 4- 5 ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆ ಹೊಂದಿದ್ದು, ಚಿತ್ರಸಂತೆಯಲ್ಲಿ 100 ರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಲಾಕೃತಿಗಳು ಪ್ರದರ್ಶನಗೊಳ್ಳಲಿದ್ದು,ಒಂದೇ ದಿನದಲ್ಲಿ ಕೋಟ್ಯಂತರ ರೂ. ವಹಿವಾಟು ನಡೆಯಲಿದೆ ಎಂದು ತಿಳಿಸಿದರು.

ಆನ್‌ಲೈನ್‌ನಲ್ಲಿ ಪ್ರದರ್ಶನ:

ಪ್ರದರ್ಶನಕ್ಕೆ ಅರ್ಜಿ ಸಲ್ಲಿಸಿದವರಲ್ಲಿ ಯಾರಿಗೆ ಭಾಗವಹಿಸಲು ಅವಕಾಶ ಸಿಕ್ಕಿಲ್ಲವೋ ಅಂತವರಿಗೆ ಆನ್‌ಲೈನ್‌ನಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದ್ದು, ಜ.5 ರಿಂದ ೆ.5ರವರೆಗೆ ಆನ್‌ಲೈನ್ (ವೆಬ್‌ಸೈಟ್: ಡಿಡಿಡಿ.್ಚಜಿಠ್ಟಿಚ್ಞಠಿಛಿ.ಜ್ಞಿ) ನಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಸರ್ಕಾರದಿಂದ 50 ಲಕ್ಷ :

ಚಿತ್ರಸಂತೆಗಾಗಿ ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯ ಸರ್ಕಾರ 50 ಲಕ್ಷ ರೂ. ಅನುದಾನ ನೀಡುತ್ತಿದೆ. ಇದಲ್ಲದೆ ದಾನಿಗಳು, ಕಲಾಸಕ್ತರು ಸೇರಿ ವಿವಿಧ ಮೂಲಗಳಿಂದಲೂ ನೆರವು ಬರುತ್ತದೆ.

ಚಿತ್ರಸಂತೆಯಲ್ಲಿ ಕಲಾವಿದರಿಗೆ ಪ್ರದರ್ಶನಕ್ಕೆ ಉಚಿತ ವ್ಯವಸ್ಥೆ ಮಾಡಲಾಗುವುದು. ಜತೆಗೆ ಅವರಿಗೆ ಊಟ, ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಸಾರಿಗೆ ವ್ಯವಸ್ಥೆ:

ಚಿತ್ರಸಂತೆಯ ಚಟುವಟಿಕೆಗಳು ಬೆಳಗ್ಗೆ 6 ರಿಂದಲೇ ಆರಂಭವಾದರೂ ಬೆಳಗ್ಗೆ 9 ಗಂಟೆಗೆ ಪೂರ್ಣ ಪ್ರಮಾಣದಲ್ಲಿ ತೆರೆದುಕೊಳ್ಳಲಿದೆ. ಚಿತ್ರಕಲಾ ಪರಿಷತ್ತಿನ ಆವರಣ, ಕುಮಾರಕೃಪಾ ರಸ್ತೆ, ಕ್ರೆಸೆಂಟ್ ರಸ್ತೆ, ಗಾಂಧಿಭವನ ರಸ್ತೆಗಳಲ್ಲಿ ಚಿತ್ರಗಳ ಪ್ರದರ್ಶನವಿರಲಿದೆ. ಪಾರ್ಕಿಂಗ್‌ಗೆ ಸುತ್ತಮುತ್ತ ಪ್ರದೇಶದಲ್ಲಿ ಅವಕಾಶ ಕಲ್ಪಿಸಲಾಗುವುದು. ಚಿತ್ರಸಂತೆಗೆ ಆಗಮಿಸುವ ಕಲಾವಿದರು, ಕಲಾಸಕ್ತರ ಅನುಕೂಲಕ್ಕಾಗಿ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಮಂತ್ರಿ ಮಾಲ್ ಮೆಟ್ರೋ ನಿಲ್ದಾಣಗಳಿಂದ ಶಿವಾನಂದ ಮಾರ್ಗವಾಗಿ ವಿಧಾನ ಸೌಧದವರೆಗೆ ಬೆಳಗ್ಗೆ 8 ರಿಂದ ರಾತ್ರಿ 9ರವರೆಗೆ ಫೀಡರ್ ಬಸ್ ಸೇವೆ ಒದಗಿಸಲಾಗುವುದು ಎಂದು ಹೇಳಿದರು.

ಜ.4ರಂದು ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ

ಚಿತ್ರಸಂತೆ ಅಂಗವಾಗಿ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಬಾರಿ ಚಿತ್ರಕಲಾ ಪರಿಷತ್ತಿನ ಮಾಜಿ ಅಧ್ಯಕ್ಷೆ ಕೆ. ಎಸ್. ನಾಗರತ್ನಮ್ಮ ಅವರ ಹೆಸರಿನಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ಪ್ರಶಸ್ತಿಗೆ ಕಲಾವಿದ ಎ. ರಾಮಕೃಷ್ಣಪ್ಪ ಭಾಜನರಾಗಿದ್ದಾರೆ. ಡಿ. ದೇವರಾಜ ಅರಸು ಪ್ರಶಸ್ತಿಗೆ ಡಾ. ಎಂ. ಎಸ್. ಮೂರ್ತಿ, ವೈ. ಸುಬ್ರಮಣ್ಯರಾಜು ಪ್ರಶಸ್ತಿಗೆ ಜಿ. ಎಲ್. ಭಟ್, ಎಚ್.ಕೆ. ಕೇಜ್ರಿವಾಲ್ ಪ್ರಶಸ್ತಿಗೆ ಸೂರ್ಯಪ್ರಕಾಶ್ ಗೌಡ ಮತ್ತು ಎಂ. ಆರ್ಯಮೂರ್ತಿ ಪ್ರಶಸ್ತಿಗೆ ಸಿ.ಎಸ್. ನಿರ್ಮಲ ಕುಮಾರಿ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಗಳು ತಲಾ 50 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿವೆ. ಜ. 4ರಂದು ಬೆಳಗ್ಗೆ 11.30ಕ್ಕೆ ಪರಿಷತ್ತಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕಾನೂನು ಸಂಸದೀಯ ಸಚಿವ ಎಚ್. ಕೆ. ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಚಿತ್ರಸಂತೆಗೆ ಚಾಲನೆ:

ಪರಿಷತ್ತಿನ ಆವರಣದಲ್ಲಿ ಜ. 5ರಂದು ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ 22ನೇ ಚಿತ್ರಸಂತೆಗೆ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಲಾ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಸಚಿವ ಡಾ.ಎಂ.ಸಿ. ಸುಧಾಕರ್, ಸಂಸದ ಪಿ.ಸಿ. ಮೋಹನ್, ಶಾಸಕರಾದ ಎಸ್. ಟಿ. ಸೋಮಶೇಖರ್, ರಿಜ್ವಾನ್ ಅರ್ಷದ್ ಮೊದಲಾದವರು ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net