

ಅಹಮದಾಬಾದ್: ಪ್ರತಿಷ್ಠಿತ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡ ಹ್ಯಾಟ್ರಿಕ್ ಜಯಭೇರಿ ಕಂಡಿದೆ. ನಾಯಕ ಮಯಾಂಕ್ ಅಗರ್ವಾಲ್ (139* ರನ್, 127 ರನ್, 17 ಬೌಂಡರಿ, 3 ಸಿಕ್ಸರ್) ಏಕಾಂಗಿ ಸಾಹಸದ ಬ್ಯಾಟಿಂಗ್ ನಿರ್ವಹಣೆ ಹಾಗೂ ಪದಾರ್ಪಣಾ ಪಂದ್ಯದಲ್ಲಿ ಎಡಗೈ ವೇಗಿ ಅಭಿಲಾಷ್ ಶೆಟ್ಟಿ (44ಕ್ಕೆ 5) ಸಂಘಟಿಸಿದ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಕರ್ನಾಟಕ ತಂಡ ಪಂಜಾಬ್ ಎದುರು 1 ವಿಕೆಟ್‌ನಿಂದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಸಿ ಗುಂಪಿನ ಅಂಕಪಟ್ಟಿಯಲ್ಲಿ ಕರ್ನಾಟಕ (12 ಅಂಕ) ಅಗ್ರಸ್ಥಾನಕ್ಕೇರಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ತನ್ನ 3ನೇ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್‌ಗೆ ಇಳಿದ ಪಂಜಾಬ್ ಆರಂಭಿಕ ಅನ್ಮೋಲ್‌ಪ್ರೀತ್ ಸಿಂಗ್ (51 ರನ್, 60 ಎಸೆತ, 5 ಬೌಂಡರಿ) ಅರ್ಧಶತಕದ ನಡುವೆಯೂ ಅಭಿಲಾಷ್ ಶೆಟ್ಟಿ ದಾಳಿಗೆ ತತ್ತರಿಸಿ 49.2 ಓವರ್‌ಗಳಲ್ಲಿ 247 ರನ್‌ಗಳಿಗೆ ಆಲೌಟ್ ಆಯಿತು. ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಕರ್ನಾಟಕ ತಂಡ ಉತ್ತಮ ಆರಂಭದ ಹೊರತಾಗಿಯೂ ಅಭಿಷೇಕ್ ಶರ್ಮ (56ಕ್ಕೆ 4) ದಾಳಿಗೆ ದಿಢೀರ್ ಕುಸಿತ ಕಂಡಿತು. ಆಗ ಮುರಿಯದ ಕೊನೇ ವಿಕೆಟ್‌ಗೆ ವಿ.ಕೌಶಿಕ್ (7*) ಜತೆಯಾಗಿ 48 ರನ್ ಕಸಿದ ಮಯಾಂಕ್ 47.3 ಓವರ್‌ಗಳಲ್ಲಿ 9 ವಿಕೆಟ್‌ಗೆ 251 ರನ್‌ಗಳಿಸಿ ಕರ್ನಾಟಕಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಪಂಜಾಬ್: 49.2 ಓವರ್‌ಗಳಲ್ಲಿ 247 (ಅಭಿಷೇಕ್ 17, ಪ್ರಭ್‌ಸಿಮ್ರನ್ 26, ಅನ್ಮೋಲ್‌ಪ್ರೀತ್ 51, ನೇಹಲ್ 37, ಅನ್ಮೋಲ್ 42, ಸನ್ವೀರ್ 35, ಅರ್ಷದೀಪ್ 1, ರಘು 22*,ಅಭಿಲಾಷ್ 44ಕ್ಕೆ 5, ಕೌಶಿಕ್ 43ಕ್ಕೆ 2). ಕರ್ನಾಟಕ: 47.3 ಓವರ್‌ಗಳಲ್ಲಿ 9 ವಿಕೆಟ್‌ಗೆ 251 (ನಿಕಿನ್ ಜೋಸ್ 17, ಮಯಾಂಕ್ 139*, ಅನೀಶ್ 7, ಸ್ಮರಣ್ 5,ಕೆಎಲ್ ಶ್ರೀಜಿತ್ 9, ಶ್ರೇಯಸ್ ಗೋಪಾಲ್ 29, ದುಬೆ 11, ಅಭಿನವ್ 20, ಕೌಶಿಕ್ 7*, ಅಭಿಷೇಕ್ 56ಕ್ಕೆ 4, ಸನ್ವೀರ್ 33ಕ್ಕೆ 2).
ಮಯಾಂಕ್ ಏಕಾಂಗಿ ಹೋರಾಟ
ಚೇಸಿಂಗ್‌ನಲ್ಲಿ ರಾಜ್ಯ ತಂಡಕ್ಕೆ ನಿಕಿನ್ ಜೋಸ್ (17) ಹಾಗೂ ಮಯಾಂಕ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಇವರಿಬ್ಬರು 69 ಎಸೆತಗಳಲ್ಲಿ 50 ರನ್ ಪೇರಿಸಿದರು. ನಂತರ ಾರ್ಮ್‌ನಲ್ಲಿದ್ದ ಅನೀಶ್ ಕೆವಿ (7), ಸ್ಮರಣ್ (5) ಹಾಗೂ ಶ್ರೀಜಿತ್ (9) ನಿರಾಸೆ ಮೂಡಿಸಿದರು. ಆಗ 33 ವರ್ಷದ ಮಯಾಂಕ್ ಜತೆಯಾದ ಉಪನಾಯಕ ಶ್ರೇಯಸ್ ಗೋಪಾಲ್ (29) ಚೇಸಿಂಗ್‌ಗೆ ಬಲ ತುಂಬಿದರು. ಇವರಿಬ್ಬರು 5ನೇ ವಿಕೆಟ್‌ಗೆ 68 ಎಸೆತಗಳಲ್ಲಿ 67 ರನ್ ಕಲೆಹಾಕಿದರು. ಬಳಿಕ ಪ್ರವೀಣ್ ದುಬೆ (11), ಅಭಿನವ್ ಮನೋಹರ್ (20) ಹೆಚ್ಚು ಹೊತ್ತು ನಿಲ್ಲಲಿಲ್ಲ. 203 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡ ಕರ್ನಾಟಕ ಸೋಲಿನ ಭೀತಿ ಎದುರಿಸಿತು. ಆಗ ಮಯಾಂಕ್ ನಾಯಕನಾಟದ ಮೂಲಕ ವಿ.ಕೌಶಿಕ್ ಜತೆಯಾಗಿ ಜವಾಬ್ದಾರಿಯುತ ಬ್ಯಾಟಿಂಗ್‌ನೊಂದಿಗೆ ದಡ ಸೇರಿಸಿದರು. ಅಂತಿಮ ವಿಕೆಟ್‌ಗೆ ಈ ಜೋಡಿ ಕಲೆಹಾಕಿದ 48 ರನ್‌ಗಳಲ್ಲಿ ಮಯಾಂಕ ಏಕಾಂಗಿಯಾಗಿ 37 ರನ್ ಬಾರಿಸಿದರು. ಕೌಶಿಕ್ ಉತ್ತಮ ಬೆಂಬಲ ಒದಗಿಸಿದರು. 1 ರನ್ ಅವಶ್ಯವಿದ್ದಾಗ ಬೌಂಡರಿ ಗಳಿಸಿದ ಮಯಾಂಕ್ ಗೆಲುವನ್ನು ಸಾರಿದರು.
15: ಮಯಾಂಕ್ ಅಗರ್ವಾಲ್ ಲಿಸ್ಟ್ ಎ ಏಕದಿನ ಕ್ರಿಕೆಟ್‌ನಲ್ಲಿ ಸಿಡಿಸಿದ 15ನೇ ಶತಕ ಇದಾಗಿದೆ.
115: ಮಂಗಳೂರಿನ ಎಡಗೈ ವೇಗಿ ಅಭಿಲಾಷ್ ಶೆಟ್ಟಿ ಹಾಲಿ ಋತುವಿನಲ್ಲಿ ರಣಜಿ ಟ್ರೋಫಿ ಬಳಿಕ ರಾಷ್ಟ್ರೀಯ ಏಕದಿನಕ್ಕೂ ಪದಾರ್ಪಣೆ ಮಾಡಿದರು. ರಾಜ್ಯದ ಪರ ಕಣಕ್ಕಿಳಿದ 115ನೇ ಆಟಗಾರ ಎನಿಸಿದರು. ಗಾಯಾಳು ವಿಧ್ಯಾದರ್ ಪಾಟೀಲ್ ಬದಲಿಗೆ ಅಭಿಲಾಷ್ ಸ್ಥಾನ ಪಡೆದರು.
ಕರ್ನಾಟಕಕ್ಕೆ ಮುಂದಿನ ಪಂದ್ಯ
ಎದುರಾಳಿ: ಅರುಣಾಚಲ ಪ್ರದೇಶ
ಯಾವಾಗ: ಶನಿವಾರ
ಆರಂಭ: ಬೆಳಗ್ಗೆ 9