ಹಾಗೆಯೇ, ಸರೋಜಿನಿ ನಾಯ್ಡು ಅವರ ಪತಿ, ವೈದ್ಯರಾಗಿದ್ದ ಗೋವಿಂದರಾಜುಲು ನಾಯ್ಡು ಪಾತ್ರದಲ್ಲಿ ಹಿಂದಿ ಧಾರಾವಾಹಿಗಳ, ಬಾಲಿವುಡ್ ಸಿನಿಮಾಗಳ ನಟ ಹಿತೇನ್ ತೇಜ್ವಾನಿ ನಟಿಸಲಿದ್ದಾರೆ. ಇನ್ನು, 28 ವರ್ಷಗಳ ಬಳಿಕ ನಟಿ ಶಾಂತಿಪ್ರಿಯ ಮತ್ತೆ ಬಣ್ಣ ಹಚ್ಚಲಿರುವುದು ವಿಶೇಷ. ಇದನ್ನು, ಕುರಿತು ಮಾತಾಡಿದ ನಟಿ, ‘28 ವರ್ಷಗಳ ನಂತರ ನಟನೆಗೆ ವಾಪಸ್ಸಾಗಿದ್ದೇನೆ. ಇಂಥದ್ದೊಂದು ಅವಕಾಶಕ್ಕೆ ಧನ್ಯವಾದಗಳು. ಇಲ್ಲಿ ಸರೋಜಿನಿ ನಾಯ್ಡು ಅವರ ಪಾತ್ರ ನಿರ್ವಹಿಸುತ್ತಿದ್ದು, ಶಕ್ತಿಮೀರಿ ಜೀವ ತುಂಬುವುದಕ್ಕೆ ಪ್ರಯತ್ನಿಸುತ್ತೇನೆ’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಾಗೆಯೇ, ಸರೋಜಿನಿ ನಾಯ್ಡು ಅವರ ಯೌವನದ ಪಾತ್ರದಲ್ಲಿ ಮಿಂಚಲಿರುವ ನಟಿ ಸೋನಲ್ ಮಾಂತೆರೋ ಅವರು, 'ಈ ಕಥೆ ಕೇಳಿದಾಗ ಬಹಳ ಖುಷಿ ಆಯಿತು. ಸರೋಜಿನಿ ನಾಯ್ಡು ಅವರ ಚಿಕ್ಕವಯಸ್ಸಿನ ಪಾತ್ರವನ್ನು ನಾನು ಮಾಡುತ್ತಿದ್ದೇನೆ. ಅವರ ಕಾಲೇಜಿನ ದಿನಗಳು ಮತ್ತು ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕಿಂತ ಮುಂಚಿನ ದಿನಗಳ ಪಾತ್ರ ಮಾಡುತ್ತಿದ್ದೇನೆ', ಎಂದು ಸೋನಲ್ ಖುಷಿಯಿಂದ ಹೇಳಿಕೊಂಡಿದ್ದಾರೆ.