

ಬೆಂಗಳೂರು: ಜನರಲ್ಲಿ ತಿಳಿವಳಿಕೆ ಮೂಡಿಸುವ ಸಲುವಾಗಿ ರಸ್ತೆ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದಂಡ ಪ್ರಮಾಣ ಇಳಿಸಲಾಗಿತ್ತು. ಬಜೆಟ್ ಅಧಿವೇಶನದ ಬಳಿಕ ದಂಡ ಶುಲ್ಕ ಹೆಚ್ಚಿಸಲು ಚಿಂತಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ದಂಡ ಪ್ರಯೋಗ ಹೆಚ್ಚಾದಂತೆ ನಿಯಮ ಉಲ್ಲಂಘನೆ ಪ್ರಕರಣಗಳು ಇಳಿಕೆಯಾಗುತ್ತಿವೆ. ಆ ಹಿನ್ನೆಲೆಯಲ್ಲಿ ಕಾಯ್ದೆ ಪ್ರಕಾರ ದಂಡ ವಿಧಿಸುವುದಕ್ಕೆ ಚಿಂತನೆ ನಡೆದಿದೆ ಎಂದು ತಿಳಿಸಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಾಹನಗಳ ನೋಂದಣಿ ತೆರಿಗೆ ಸಂಗ್ರಹದ ಗುರಿ 7,000 ಕೋಟಿ ರೂ.ಗಳಿತ್ತು. ಅದರೆ, ನೋಂದಣಿ ಕುಸಿತದಿಂದ 1,200 ಕೋಟಿ ರೂ ಕೊರತೆಯಾಗಬಹುದು. ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಕಡಿಮೆಯಾಗಿದ್ದ ವಾಹನಗಳ ನೋಂದಣಿ ಜನವರಿಯಿಂದ ಮತ್ತೆ ಚೇತರಿಸಿಕೊಂಡಿದೆ.
ಗುರುವಾರದ ಕರ್ನಾಟಕ ಬಂದ್ಗೆ ಸಾರಿಗೆ ಸಿಬ್ಬಂದಿ ಹಾಗೂ ಕಾರ್ಮಿಕರು ಬೆಂಬಲಿಸಿದ್ದಾರೆ. ಆದರೆ, ಸಾರಿಗೆ ಸಂಚಾರ ಸೇವೆ ನಿಲ್ಲಿಸುವುದಿಲ್ಲ. ಆದಾಗ್ಯೂ ಪರಿಸ್ಥಿತಿ ಅವಲೋಕಿಸಿ ಆಯಾ ಅಧಿಕಾರಿಗಳು ಸೂಕ್ತ ತೀರ್ಮಾನ ಕೈಗೊಳ್ಳುವರು ಎಂದು ಸಾರಿಗೆ ಸಚಿವ ಸವದಿ ಹೇಳಿದರು.