ಕಾವೇರಿಗಾಗಿ ಕರ್ನಾಟಕ ಬಂದ್​: ಇಂದು ಏನಿರುತ್ತೆ? ಏನಿರಲ್ಲ? ರಸ್ತೆಗಿಳಿಯುವ ಮುನ್ನ ಎಚ್ಚರ!

Karnataka Bundh (1)
Published on

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ಇಂದು ಇಡೀ ಕರ್ನಾಟಕ ಸ್ತಬ್ಧವಾಗಲಿದೆ. ರಾಜ್ಯಾದ್ಯಂತ ಬಂದ್​ ಬಿಸಿ ಆರಂಭವಾಗಿದ್ದು, ಬೆಳಗ್ಗೆಯಿಂದಲೇ ಅಂಗಡಿ-ಮಂಗಟ್ಟುಗಳನ್ನು ಮುಚ್ಚಲಾಗಿದೆ. ಈಗಾಗಲೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇಂದು ಪ್ರತಿಭಟನೆಯ ಕಾವು ತಟ್ಟಲಿದೆ. ಸಾವಿರಾರು ಸಂಘಟನೆಗಳು ಬಂದ್​ಗೆ ಸಂಪೂರ್ಣ ಬೆಂಬಲ ನೀಡರುವುದರಿಂದ ಇಡೀ ಕರ್ನಾಟಕ ಇಂದು ಸ್ತಬ್ಧವಾಗಲಿದೆ.

ಕಳೆದ ಮಂಗಳವಾರವಷ್ಟೇ ಬೆಂಗಳೂರು ಬಂದ್​ ಆಚರಿಸಲಾಯಿತು. ಯಶಸ್ವಿಯೂ ಆಯಿತು. ಇಂದು ಅಖಂಡ ಕರ್ನಾಟಕ ಬಂದ್​ ಆಚರಣೆ ಆರಂಭವಾಗಿದೆ. ಸಂಚಾರ ಸಹ ವಿರಳವಾಗಿದೆ. ಇಂದಿನ ಬಂದ್​ ಪರಿಣಾಮ ಹೆಚ್ಚಾಗಿರಲಿದೆ. ಬಂದ್​ ಹಿನ್ನೆಲೆಯ್ಲಲಿ ಇಂದು ರಾಜ್ಯದಲ್ಲಿ ಏನೆಲ್ಲ ಸೇವೆಗಳು ಇರುತ್ತವೆ ಮತ್ತು ಏನೆಲ್ಲ ಬಂದ್​ ಆಗಲಿವೆ ಎಂಬುದನ್ನು ನಾವೀಗ ತಿಳಿಯೋಣ.

ಏನೇನಿರುತ್ತೆ..? 

* ಆಸ್ಪತ್ರೆ
* ಮೆಡಿಕಲ್ ಸ್ಟೋರ್‌
* ಹಾಲಿನ ಬೂತ್‌
* ಅಗತ್ಯ ವಸ್ತುಗಳು
* ಮೆಟ್ರೋ
* ಆಂಬ್ಯುಲೆನ್ಸ್
*ಬಿಎಂಟಿಸಿ
*ಕೆಎಸ್​ಆರ್​ಟಿಸಿ

ಏನಿರಲ್ಲ..?
* ಆಟೋ, ಕ್ಯಾಬ್
* ಗೂಡ್ಸ್ ವಾಹನಗಳು
* ಖಾಸಗಿ ಬಸ್‌ಗಳು
* ಥಿಯೇಟರ್‌
* ಸೂಪರ್ ಮಾರ್ಕೆಟ್‌
* ಪೆಟ್ರೋಲ್ ಬಂಕ್‌
* ಶಾಲಾ -ಕಾಲೇಜ್‌
* ಅಂಗಡಿಗಳು
* ಬೀದಿ ಬದಿ ಅಂಗಡಿಗಳು
* ಜ್ಯುವೆಲ್ಲರಿ ಶಾಪ್‌ಗಳು
* ಕೈಗಾರಿಕೆಗಳು
* ಹೋಟೆಲ್‌ಗಳು
* ಮಾಲ್‌ಗಳು

ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್​​ ನೀರನ್ನು ಹರಿಸಬೇಕೆಂದು ಸೆ.12ರಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು ಪಾಲಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸೆ.18ರಂದು ಆದೇಶ ಹೊರಡಿಸಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್​ಗೆ ಕರ್ನಾಟಕ ಮೇಲ್ಮನವಿ ಸಲ್ಲಿಸಿತ್ತು. ಸೆ.21ರಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ CWMA ಆದೇಶವನ್ನು ಎತ್ತಿಹಿಡಿದಿತ್ತು. ಅದರಂತೆ ರಾಜ್ಯ ಸರ್ಕಾರ ನೀರು ಬಿಡುಗಡೆ ಸಹ ಮಾಡಿತು. ಅತ್ತ ಸಂಘಟನೆಗಳು ಬಂದ್​ ಸಹ ಆಚರಿಸಿದವು. ಇದರ ನಡುವೆ ಮತ್ತೆ 3000 ಸಾವಿರ ಕ್ಯೂಸೆಕ್​ ನೀರು ಹರಿಸಲು ಕಾವೇರಿ ನದಿ ನೀರು ಸಮಿತಿ ಶಿಫಾರಸು ಮಾಡಿರುವುದರಿಂದ ಇಂದಿನ ಕರ್ನಾಟಕ ಬಂದ್​ ತೀವ್ರತೆ ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ರಸ್ತೆಗಿಳಿಯೂ ಮುನ್ನ ಎಚ್ಚರ

ಇಂದು ರಾಜ್ಯದೆಲ್ಲೆಡೆ ಭಾರೀ ಪ್ರತಿಭಟನೆಗಳು ನಡೆಯಲಿದೆ. ಅದರಲ್ಲಿ ರಸ್ತೆ ತಡೆಯೇ ಪ್ರಮುಖವಾಗಿರಲಿದ್ದು, ಎಲ್ಲ ಹೆದ್ದಾರಿಗಳನ್ನು ಬಂದ್​ ಮಾಡಲು ಕನ್ನಡ ಪರ ಸಂಘಟನೆಗಳು ಪ್ಲಾನ್​ ಮಾಡಿವೆ. ಹೀಗಾಗಿ ರಸ್ತೆಗಿಳಿಯುವ ಮುನ್ನ ವಾಹನ ಸವಾರರು ತುಂಬಾ ಎಚ್ಚರಿಕೆ ವಹಿಸುವುದು ಸೂಕ್ತ. ಇಲ್ಲವಾದಲ್ಲಿ ಪ್ರತಿಭಟನೆಯ ನಡುವೆ ಸಿಲುಕಿ ಪರದಾಡಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net