

ಬೆಂಗಳೂರು: ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಇಂದಿನ ರಾಜ್ಯಬಂದ್ಗೆ 110ಕ್ಕೂ ಹೆಚ್ಚು ಸಂಘಟನೆಗಳು ಪ್ರತ್ಯಕ್ಷ ಮತ್ತು ನೈತಿಕ ಬೆಂಬಲ ಸೂಚಿಸಿವೆ. ರಾಜಕೀಯ ಪಕ್ಷಗಳೂ ಬೆಂಬಲ ಸೂಚಿಸಿದ್ದು, ಬೆಳಗ್ಗೆ 6 ಗಂಟೆಗೆ ಹಲವೆಡೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದ ವಿವಿಧ ಬಾಗಗಳಲ್ಲಿನ ಪ್ರತಿಭಟನೆಯ ಕಿರು ಚಿತ್ರಣ ಇಲ್ಲಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ಕಾನೂನು ಜಾರಿಗೊಳಿಸಿದೆ. ರೈತ ಸಂಘಟನೆಗಳ ರಾಜ್ಯ ಬಂದ್ ಕರೆಗೆ ಕರವೇ ಬೆಂಬಲ ಇದೆ. ರಾಜ್ಯಾದ್ಯಂತ ನಮ್ಮ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾರಾಯಣ ಗೌಡ, ಕರವೇ ರಾಜ್ಯಾಧ್ಯಕ್ಷ
ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಮತ್ತು ಇತರೆ ಕೆಲವು ಸಂಘಟನೆಗಳ ಕಾರ್ಯಕರ್ತರು ಮೆಜೆಸ್ಟಿಕ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದು, ರಸ್ತೆಯಲ್ಲಿ ಮಲಗಿ ಬಸ್ ತಡೆ ನಡೆಸಿದರು. ಬಸ್ ಚಲಾಯಿಸದಂತೆ ಮನವಿ ಮಾಡಿದ್ರು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರ ಕರವೇ ಕಾರ್ಯಕರ್ತರನ್ನು ಬಂಧಿಸಿ ಆಡುಗೋಡಿಯ ಸಿಎಆರ್ ಗ್ರೌಂಡ್ಗೆ ಕರೆದೊಯ್ದರು.
ಪ್ರತಿಭಟನಾಕಾರರು ರೈಲ್ವೆ ನಿಲ್ದಾಣದೊಳಗೆ ನುಗ್ಗದಂತೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಫುಲ್ ಸೆಕ್ಯೂರಿಟಿ ಏರ್ಪಡಿಸಲಾಗಿದೆ. ರೈಲ್ವೆ ಫ್ಲಾಟ್ಫಾರಂಗಳಿಗೆ ಹೋಗುವ ಎಲ್ಲಾ ದ್ವಾರಗಳಲ್ಲೂ ಬ್ಯಾರಿಕೇಡ್ ಅಳವಡಿಸಲಾಗಿದೆ. ರೈಲ್ವೆ ಪೊಲೀಸ್ ಫೋಸ್೯, ಉಪ್ಪಾರ ಪೇಟೆ ಪೊಲೀಸ್, ಕೆ.ಎಸ್.ಆರ್.ಪಿ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ರೈಲ್ವೆ ನಿಲ್ದಾಣ ಪ್ರವೇಶಿಸುವ ಪ್ರತಿಯೊಬ್ಬ ಪ್ರಯಾಣಿಕರ ತಪಾಸಣೆ ಮಾಡಿಯೇ ಒಳಗೆ ಬಿಡಲಾಗುತ್ತಿದೆ. ಟಿಕೆಟ್ ತೋರಿಸಿದ್ರೆ ಮಾತ್ರ ಪ್ಲಾಟ್ ಫಾರಂ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ರೈಲ್ವೆ ಟಿಕೆಟ್ ಇಲ್ಲದೆ ಹೋದ್ರೆ ಪ್ರವೇಶಕ್ಕಿಲ್ಲ ಅವಕಾಶ. ಪ್ರಯಾಣಿಕರನ್ನ ಕಳುಹಿಸಲು ಬರುತ್ತಿರುವ ಕುಟುಂಬ ಸದಸ್ಯರನ್ನು ಹೊರಗೆ ತಡೆದ ಹಿಂದೆ ಕಳುಹಿಸಲಾಗುತ್ತಿದೆ.
ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಎಂದಿನಂತೆ ಬಸ್ ಸಂಚಾರ ಶುರುವಾಗಿದೆ. ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರದಲ್ಲಿ ಇದುವರೆಗೆ ಯಾವುದೇ ವ್ಯತ್ಯಾಸವಾಗಿಲ್ಲ. ಬಂದ್ ಕಾರಣಕ್ಕೆ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಬಸ್ ನಿಲ್ದಾಣಗಳಲ್ಲಿರುವ ಅಂಗಡಿ ಮುಂಗಟ್ಟುಗಳು ಇನ್ನೂ ತೆರೆದಿಲ್ಲ.
ಈಗ ಹಳ್ಳಿಗಳು ಖಾಲಿ ಇಲ್ಲ ಭರ್ತಿ ಇವೆ. ಕರೋನಾ ಬಂದ ಮೇಲೆ ಹಳ್ಳಿಗಳು ಭರ್ತಿತಾಗಿವೆ ರೈತರ ಜಮೀನು ಮಾರಾಟಕ್ಕಿಲ್ಲ. ಇವರ ಕಾಯ್ದೆಗಳು ರೈತರಿಗೆ ತೊಂದ್ರೆಯಾಗ್ತಿವೆ. ನಿಮ್ಮ ವಿಧೇಯಕದ ಬಗ್ಗೆ ಕರ್ನಾಟಕದ ಜನ ಅವಿಶ್ವಾಸ ವ್ಯಕ್ತಪಡಿಸ್ತಿದ್ದಾರೆ. ಇವತ್ತಿನ ಪ್ರತಿಭಟನೆ ಸಾಂಕೇತಿಕ ಅಷ್ಟೆ. ಇದು ಮುಂದಿನ ದೊಡ್ಡ ಹೋರಾಟಕ್ಕೆ ಮುನ್ನುಡಿ. ಬಂದ್ ಬೆಂಬಲಿಸಿ ಎಂದು ಎಲ್ಲರಲ್ಲೂ ಮನವಿ ಮಾಡ್ತೇವೆ. ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡ
ಹುಬ್ಬಳ್ಳಿಯಲ್ಲಿ ಏನಾಗಿದೆ
ಎಪಿಎಂಸಿ, ಭೂ ಸುಧಾರಣಾ, ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ ಬಂದ್ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್ಗೆ ಹುಬ್ಬಳ್ಳಿಯಲ್ಲಿ ರೈತ ಸಂಘಟನೆ,ಕನ್ನಡಪರ, ಕಾರ್ಮಿಕ ಸಂಘಟನೆ, ಮಹದಾಯಿ ಹೋರಾಟಗಾರರು ಸೇರಿ 20ಕ್ಕೂ ಹೆಚ್ಚು ಸಂಘಟನೆಗಳು ಸಾಥ್ ನೀಡಿವೆ. ಹುಬ್ಬಳ್ಳಿಯಲ್ಲಿ ಇಂದು ಬೆಳಗ್ಗೆ ಎಂದಿನಂತೆ ಜನಜೀವನ ಆರಂಭವಾಗಿದೆ. ಆಟೋ, ಕ್ಯಾಬ್, ಬಸ್ ಸಂಚಾರಗಳು ಸಹಜವಾಗಿಯೆ ಇವೆ.
ನಗರದ ಪ್ರಮುಖ ಸರ್ಕಲ್ ಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಪೊಲೀಸ್ ಟೈಟ್ ಸೆಕ್ಯುರಿಟಿ ಅಳವಡಿಸಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.
ಪ್ರತಿಭಟನಾಕಾರರು 8 ಗಂಟೆಯ ಬಳಿಕ ರಸ್ತೆಗಿಳಿಯುವ ನಿರೀಕ್ಷೆ ಇದೆ. ಬಲವಂತದ ಬಂದ್ ಮಾಡಿಸಿದ್ರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ. ಏತನ್ಮಧ್ಯೆ, ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ರೈತರಿಂದ ರಸ್ತೆ ತಡೆ ನಡೆಸಿದ್ದಾರೆ. ಬಸ್ ತಡೆದು ಚಾಲಕನನ್ನು ತರಾಟೆಗೆ ತೆಗೆದುಕೊಂಡ ರೈತನೊಬ್ಬ ಲಾರಿ ಎದುರು ಮಲಗಿ ಬಸ್ ಸಂಚಾರ ನಿಲ್ಲಿಸುವಂತೆ ಒತ್ತಾಯಿಸಿದ. ಕೂಡಲೇ ಅಲ್ಲಿದ್ದ ಪೊಲೀಸರು ರೈತನನ್ನು ಎತ್ತಿ ಪಕ್ಕಕ್ಕೆ ಕರೆದೊಯ್ದರು.
ಧಾರವಾಡದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಪ್ರತಿಭಟನಕಾರರು ಬಸ್‌ಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ. ಧಾರವಾಡ ಜ್ಯುಬಿಲಿ ಸರ್ಕಲ್‌ನಲ್ಲಿ ಬಸ್‌ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಬಾಗಲಕೋಟೆಯಲ್ಲಿ...
ಬಾಗಲಕೋಟೆ ಜಿಲ್ಲೆ ಇಳಕಲ್ ನಗರದಲ್ಲಿ ಸೊಲ್ಲಾಪುರ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ರಾಜ್ಯ ರೈತಸಂಘ, ಜನಜಾಗೃತಿ ವೇದಿಕೆಯ ಕಾರ್ಯಕರ್ತರು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಸಂಚಾರ ದಟ್ಟಣೆ ಏರ್ಪಟ್ಟಿದ್ದು, ಎರಡು ಕಿ.ಮೀ.ದೂರದ ತನಕ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು.
ಕಲಬುರಗಿಯಲ್ಲಿ
ಚಾಮರಾಜನಗರದಲ್ಲಿ ಪ್ರಯಾಣಿಕರು ಪರದಾಟ..
ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ ಹಿನ್ನಲೆ ಕೆಎಸ್ಸಾರ್ಟಿಸಿ ಬಸ್ ಗಳು ರಸ್ತೆಗಿಳಿಯಲು ಹಿಂದೇಟು ಹಾಕಿವೆ. ಪರಿಣಾಮ ವಿವಿಧ ಕಡೆಗಳಿಗೆ ತೆರಳಲು ಆಗಮಿಸಿದ್ದ ಪ್ರಯಾಣಿಕರು ಸಾರಿಗೆ ಸೌಲಭ್ಯವಿಲ್ಲದೆ ಪರದಾಟ ನಡೆಸಿದ್ದಾರೆ. ಬಸ್ ಸಂಚಾರದಲ್ಲಿ ವ್ಯತ್ಯಾಸ ಉಂಟಾಗದು ಎಂದು ತಿಳಿದು ಮೈಸೂರಿಗೆ ಕೆಲಸಕ್ಕೆ ತೆರಳಲು ಬಂದೆ. ಪ್ರತಿಭಟನಾಕಾರರು ನಿಲ್ದಾಣಕ್ಕೆ ಬಂದು ಎಚ್ಚರಿಕೆ ನೀಡುವ ಮೊದಲು ಎರಡು ಬಸ್ ಗಳು ತೆರಳಿದವು. ಈಗ ಬಸ್ ಗಳು ರಸ್ತೆಗಿಳಿಯಲು ಹಿಂದೇಟು ಹಾಕುತ್ತಿವೆ ಎಂದು ಉಪನ್ಯಾಸಕ ಅರ್ಜುನ್ ಹೇಳಿದರು.
ಮಂಡ್ಯದಲ್ಲಿ
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಳಗ್ಗೆ 7.20ರಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರೈತರು ಪ್ರತಿಭಟನೆ ಮಾಡಿದ್ದಾರೆ. ಮದ್ದೂರು ತಾಲೂಕು ಗೆಜ್ಜಲಗೆರೆಯಲ್ಲಿ ರೈತರ ಪ್ರತಿಭಟನೆ ನಡೆದಿದೆ.
ತುಮಕೂರು
ಉಡುಪಿಯಲ್ಲಿ ಪ್ರತಿಭಟನಾಕಾರರ ಬಂಧನ
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿವಿಧ ಪಕ್ಷ ಮತ್ತು ಪ್ರಮುಖ ಸಂಘಟನೆಗಳ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಬಂದ್ ಇದ್ದರೂ ನಗರದ ಸಿಟಿ ಬಸ್ ಸಂಚಾರ ಎಂದಿನಂತೆ ಇದ್ದು, ಪ್ರತಿಭಟನಾಕಾರರು ಬಸ್ ಚಾಲಕರು, ನಿರ್ವಾಹಕರನ್ನು ಬಸ್ ಓಡಿಸದಂತೆ ಮನವಿ ಮಾಡಿಕೊಳ್ಳುತ್ತಿದ್ದರು. ಪೊಲೀಸರು ಮದ್ಯ ಪ್ರವೇಶಿಸಿ ಬಸ್ ಸಂಚಾರಕ್ಕೆ ಅಡ್ಡಿಪಡಿಸಬೇಡಿ ಎಂದು ನಿರ್ದೇಶನ ನೀಡಿದರು. ಇದರಿಂದ ಕೆಲಕಾಲ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಸಹ ನಡೆಯಿತು. ಬಸ್ ನಿಲ್ದಾಣ ಒಳಗೆ ಬಸ್ ಪ್ರವೇಶಿಸಬಾರದು ಎಂದು ಪ್ರತಿಭಟನಾಕಾರರು ಬಸ್ ನಿಲ್ದಾಣ ಮುಖ್ಯ ರಸ್ತೆಯ ಬಳಿ ಧರಣಿಗೆ ಕುಳಿತರು. ಕೂಡಲೆ ಆಗಮಿಸಿದ ಪೊಲೀಸರು ಧರಣಿ ಕುಳಿತವರನ್ನು ವಶಕ್ಕೆ ತೆಗೆದುಕೊಂಡು ಬಂಧಿಸಿದರು. ಕಾಂಗ್ರೆಸ್ ನ ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಯತೀಶ್ ಕರ್ಕೇರ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಅನ್ಸರ್ ಅಹ್ಮದ್, ಸಿಪಿಎಂ ನಾಯಕ ಬಾಲಕೃಷ್ಣ ಶೆಟ್ಟಿ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.
ದಾವಣಗೆರೆ