

ಮಂಗಳೂರು: ಬಡವರ ಕಣ್ಣೀರು ಒರೆಸಿದರೆ, ಅಶಕ್ತರಿಗೆ ಕೊಡುವ ಸಹಾಯ ದೇವರಿಗೆ ಸೇರುತ್ತದೆ. ಹೀಗಾಗಿ ಬಡವರಲ್ಲಿ ದೇವರನ್ನು ಕಾಣಬೇಕು ಎಂದು ಕೇಮಾರು ಸಾಂದೀಪನಿ ಆಶ್ರಮದ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರ ವತಿಯಿಂದ ತೆಂಕು- ಬಡಗು ತಿಟ್ಟಿನ ಕಲಾ ಸವ್ಯಸಾಚಿ ರಕ್ಷಿತ್ ಪಡ್ರೆಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.
ಕದ್ರಿ ನವನೀತ ಶೆಟ್ಟಿ ಮಾತನಾಡಿ, ಸಮರ್ಥ ಯಕ್ಷಗುರು ರಕ್ಷಿತ್ ಪಡ್ರೆ ಅವರಿಗೆ ಅರ್ಹತೆಗೆ ಅನುಗುಣವಾಗಿಯೇ ಈ ಪ್ರಶಸ್ತಿ ಲಭಿಸಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ರಕ್ಷಿತ್ ಶೆಟ್ಟಿ ಪಡ್ರೆ ಮಾತನಾಡಿ, ಯುವ ಕಲಾವಿದರು ಶಿಸ್ತಿನಿಂದ ತಮ್ಮ ಪಾತ್ರ ನಿರ್ವಹಿಸಿ, ಹಂತ ಹಂತವಾಗಿ ಮೇಲೆ ಬನ್ನಿ, ಯಾವತ್ತೂ ಅಹಂಕಾರ ತೋರಬೇಡಿ ಎಂದರು. ಇತ್ತೀಚೆಗೆ ಮಾನ, ಸನ್ಮಾನ ಪ್ರಶಸ್ತಿಗಳು ಬಹುತೇಕ ಇನ್‌ಫ್ಲುಯೆನ್ಸ್ ಮೇಲೆ, ಆದರೆ ಯಾವುದೇ ಭೇಟಿ, ಸಂಪರ್ಕ ಇಲ್ಲದೇ ಇದ್ದರೂ ಕುಂದೇಶ್ವರದವರು, ಯುವ ಕಲಾವಿದನನ್ನು ಗುರುತಿಸಿ ಈ ಶ್ರೇಷ್ಠ ಪ್ರಶಸ್ತಿ ನೀಡಿದ್ದು ಖುಷಿ ತಂದಿದೆ ಎಂದರು.
ಕಾರ್ಯಕ್ರಮ ಸಂಯೋಜಿಸಿದ ಕುಂದೇಶ್ವರ ಪ್ರತಿಷ್ಠಾನ ಅಧ್ಯಕ್ಷ ಜಿತೇಂದ್ರ ಕುಂದೇಶ್ವರ ಮಾತನಾಡಿ, ಕುಂದೇಶ್ವರ ಕ್ಷೇತ್ರದ ಧರ್ಮದರ್ಶಿ ದಿ. ರಾಘವೇಂದ್ರ ಭಟ್ ಅರ್ಥಧಾರಿಗಳಾಗಿದ್ದು, ಶೃಂಗೇರಿ ಮೇಳದ ಸಂಚಾಲಕರೂ ಆಗಿದ್ದರು. ಅವರ ನೆನಪಲ್ಲಿ ಕ್ಷೇತ್ರದ ವತಿಯಿಂದ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಕ್ಷೇತ್ರ ಆಡಳಿತ ವರ್ಗದ ಗಂಗಾ ಆರ್.ಭಟ್, ವೇ.ಮೂ. ಕೃಷ್ಣ ರಾಜೇಂದ್ರ ಭಟ್, ವೇ.ಮೂ. ರವೀಂದ್ರ ಭಟ್, ಅಜೆಕಾರ್ ಬಾಲಕೃಷ್ಣ ಶೆಟ್ಟಿ, ರಂಜಿನಿ ಲಕ್ಷ್ಮೀನಾರಾಯಣ, ರಂಗಿಣಿ ಉಪೇಂದ್ರ ರಾವ್, ಸುಮನಾ ಸುಧೀಂದ್ರ ಭಟ್ ಇದ್ದರು.
ಕಲಾಭೂಷಣ: ಇದೇ ಸಂದರ್ಭ ಛಾಯಾಗ್ರಹಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಶ್ರೀಗುರು ಸ್ಟುಡಿಯೋದ ಶರತ್ ಕಾನಂಗಿ ಅವರಿಗೆ ಕುಂದೇಶ್ವರ ಕಲಾಭೂಷಣ ಗೌರವ ಅರ್ಪಿಸಲಾಯಿತು.
ಉದ್ಘಾಟನೆ: ಶಾಸಕ ವಿ. ಸುನಿಲ್ ಕುಮಾರ್ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ, ಧಾರ್ಮಿಕ ಕಾರ್ಯಕ್ರಮಗಳ ಜತೆಯಲ್ಲಿ ನಾಟಕ, ಯಕ್ಷಗಾನದ ಮೂಲಕ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಕುಂದೇಶ್ವರದಿಂದ ಕಲೆಗೆ ಪ್ರೋತ್ಸಾಹ ನೀಡುವ ಕೆಲಸ ಆಗುತ್ತಿದೆ ಎಂದರು. ಈ ಸಂದರ್ಭ ಹಿರ್ಗಾನ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹಾವೀರ ಕಟ್ಟಡ, ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕಲಾವಿದ ಕದ್ರಿ ನವನೀತ ಶೆಟ್ಟಿ, ಅಜೆಕಾರ್ ಬಾಲಕೃಷ್ಣ ಶೆಟ್ಟಿ ಇದ್ದರು.
ಬಳಿಕ ರಕ್ಷಿತ್ ಪಡ್ರೆ ನೇತೃತ್ವದಲ್ಲಿ ನಡೆದ ಶ್ವೇತಕುಮಾರ ಚರಿತ್ರೆ ಯಕ್ಷ-ನಾಟಕ ಜನ ಮೆಚ್ಚುಗೆ ಗಳಿಸಿತು.