ವಿಜಯವಾಣಿ ಸುದ್ದಿಜಾಲ ಕಾರ್ಕಳ
ಕಾರ್ಕಳ ಪುರಸಭೆ ಸಾಮಾನ್ಯ ಸಭೆ ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ಸದಸ್ಯ ಸೋಮನಾಥ್ ನಾಯಕ್ ಮಾತನಾಡಿ, ಒಂದು ವಾರದಿಂದ ಪರಿಶಿಷ್ಟರ ಮನೆಗಳಿಗೆ ನೀರು ಬರುತ್ತಿಲ್ಲ. ಅಮೃತ ಯೋಜನೆ ನೆಪದಲ್ಲಿ ಅಲ್ಲಲ್ಲಿ ಅಗೆದು ಹಾಕಿದ ಪರಿಣಾಮ ನೀರು ವಾರ್ಡ್‌ಗಳ ಮನೆಗಳಿಗೆ ಬರುತ್ತಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದ್ದು ಕೂಡಲೇ ಕಾಮಗಾರಿ ನಡೆಸುವವರ ವಿರುದ್ಧ ಕ್ರಮ ವಹಿಸಬೇಕು ಎಂದರು.
ಬಂಗ್ಲೆಗುಡ್ಡೆ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ನೀರಿನ ಪೂರೈಕೆಯಲ್ಲಿಯೇ ಸಮಸ್ಯೆಯಿದೆ. ಇದನ್ನು ಸರಿಪಡಿಸಿ ಎಂದು ಸದಸ್ಯೆ ಪ್ರತಿಮಾ ಪ್ರಸ್ತಾಪಿಸಿದರು. ರಾಮಸಮುದ್ರದಿಂದ ಬಂಗ್ಲೆಗುಡ್ಡೆ ಟ್ಯಾಂಕ್‌ಗೆ ನೀರು ಪೂರೈಕೆ ವ್ಯವಸ್ಥೆಯಲ್ಲಿ ವ್ಯತ್ಯಯಗಳಾಗುತ್ತಿದೆ. ಇದನ್ನು ಸರಿಪಡಿಸಿ ಎಂದು ಸದಸ್ಯರು ಒತ್ತಾಯಿಸಿದರು.
ಪುರಸಭೆ ನೂತನ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ನಾಮನಿರ್ದೇಶಿತ ಸದಸ್ಯರಾದ ವಿವೇಕಾನಂದ ಶೆಣೈ, ಶಿವಾಜಿ ರಾವ್, ಸುನೀಲ್ ದೇವಾಡಿಗ, ಪ್ರಸನ್ನ ಶೆಟ್ಟಿಗಾರ್, ಅವರನ್ನು ಆಡಳಿತ ಹಾಗೂ ವಿಪಕ್ಷ ಸದಸ್ಯರು ಸ್ವಾಗತಿಸಿ ಶುಭಕೋರಿದರು. ಸದಸ್ಯರಾದ ಸುಮಾ ಕೇಶವ್, ಪ್ರಭಾ ಅಶೋಕ್, ನೀತಾ ಆಚಾರ್ಯ, ಮಮತಾ, ರೆಹಮತ್, ವಿನ್ನಿ ಮೆಂಡೋನ್ಸಾ ತಮ್ಮ ವಾರ್ಡ್, ನಾಮನಿರ್ದೇಶನ ಸದಸ್ಯ ಶಿವಾಜಿ ರಾವ್ ಸಮಸ್ಯೆ ಕುರಿತು ಪ್ರಸ್ತಾಪಿಸಿದರು. ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್, ಸದಸ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.
ಸ್ವಂತ ಟ್ಯಾಂಕರ್ ಖರೀದಿಸಲು ಪ್ರಸ್ತಾವನೆ
ಪುರಸಭಾ ವ್ಯಾಪ್ತಿಯ ಬಹುತೇಕ ವಾರ್ಡ್‌ಗಳಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದೆ. ಅದಕ್ಕಾಗಿ ಖಾಸಗಿಯವರಿಗೆ ಲಕ್ಷಾಂತರ ರೂ. ಕೊಟ್ಟು ಟ್ಯಾಂಕರ್ ನೀರು ಕೊಡುವ ಬದಲು, ನಾವೇ ಒಂದು ಸ್ವಂತ ಟ್ಯಾಂಕರ್ ಖರೀದಿಸಿ, ಪುರಸಭೆ ವ್ಯಾಪ್ತಿಗೆ ನೀರು ಪೂರೈಸಿದರೆ ಅನುಕೂಲವಾಗಲಿದೆ ಎಂದು ವಿಪಕ್ಷ ಸದಸ್ಯ ಶುಭದಾ ರಾವ್ ಸಲಹೆ ನೀಡಿದರು. ಪುರಸಭೆಗೆ ನೀರು ಪೂರೈಸುವ ಮುಂಡ್ಲಿ ಜಲಾಶಯದ ನೀರನ್ನು ಪುರಸಭೆ ಗಮನಕ್ಕೆ ಬಾರದಂತೆ ಪವರ್ ಪ್ರಾಜೆಕ್ಟ್‌ಗೆ ಈಗಲೂ ಬಳಸುತ್ತಿರುವುದು ಕಂಡುಬರುತ್ತಿದೆ. ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದ್ದು, ಈ ಬಗ್ಗೆ ಪುರಸಭೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯರು ವಿನಂತಿಸಿದರು. ಉತ್ತರಿಸಿದ ಅಧ್ಯಕ್ಷ ಯೋಗೀಶ್ ದೇವಾಡಿಗ, ಎಲ್ಲ ವಾರ್ಡ್‌ಗೆ ಅಗತ್ಯವಿದ್ದಾಗ ನೀರು ಪೂರೈಕೆಗೆ ಅನುಕೂಲವಾಗಲು ಪುರಸಭೆಗೆ ಒಂದು ಸ್ವಂತ ಟ್ಯಾಂಕರ್ ಖರೀದಿಸಲು ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸದ್ಯಕ್ಕೆ ಈಗಿನ ಅಗತ್ಯಕ್ಕೆ ತಕ್ಕಂತೆ ಟ್ಯಾಂಕರ್ ನೀರಿಗೆ ಟೆಂಡರ್ ಕರೆಯಲು ಸೂಚನೆ ನೀಡಲಾಗುವುದು. ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಕೊರತೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ರಸ್ತೆಯೆಲ್ಲ ಹೊಂಡಗುಂಡಿ
ಪುರಸಭಾ ವ್ಯಾಪ್ತಿ ರಸ್ತೆಗಳು ಅಲ್ಲಲ್ಲಿ ಹೊಂಡಗುಂಡಿಗಳಿಂದ ಕೂಡಿದ್ದು, ಈಗಾಗಲೇ ಮೀಸಲಿಟ್ಟ ಅನುದಾನದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ರಸ್ತೆಗೆ ತೇಪೆ ಹಾಕುವ ಕಾಮಗಾರಿ ನಡೆದಿದೆ. ಪರಿಪೂರ್ಣವಾಗಿ ಎಲ್ಲೂ ಕಾಮಗಾರಿ ನಡೆದಿಲ್ಲ. ಹೀಗಾಗಿ ತೇಪೆ ಹಾಕುವ ಕಾಮಗಾರಿ ಪೂರ್ಣವಾಗದೆ ಗುತ್ತಿಗೆದಾರರಿಗೆ ಯಾವುದೇ ಬಿಲ್ ಪಾವತಿ ಮಾಡದೆ ತಡೆ ಹಿಡಿಯುವಂತೆ ಸದಸ್ಯ ಅಶ್ಪಾಕ್ ಅಹಮ್ಮದ್ ವಿನಂತಿಸಿದರು.