

ಕೋಲಾರ: ಕಾರ್ಗಿಲ್ ಅಂದಾಕ್ಷಣ ನಮ್ಮ ದೇಶದ ವೀರ ಯೋಧರು ಕಣ್ಮುಂದೆ ಬರ್ತಾರೆ. ಮೈ-ಮನಕ್ಕೆ ರಾಷ್ಟ್ರಪ್ರೇಮದ ಸಿಂಚನ ಬಡಿದೆಬ್ಬಿಸುತ್ತೆ, ಮನದಲ್ಲೇ ಒಮ್ಮೆ ಜೈಹಿಂದ್ ಅಂದುಬಿಡ್ತೀವಿ... ಅಷ್ಟರಮಟ್ಟಿಗೆ ಅಚ್ಚೊತ್ತಿದೆ ಕಾರ್ಗಿಲ್ ಹೆಸರು.
ಹೌದು, 21 ವರ್ಷದ ಹಿಂದೆ ಅಂದರೆ 1999ರ ಜುಲೈ 26ರಂದು ಭಾರತೀಯರು ಕಾರ್ಗಿಲ್ ಯುದ್ಧವನ್ನು ಗೆದ್ದು ಬೀಗಿದ ದಿನ. ಕಾರ್ಗಿಲ್ ಜಿಲ್ಲೆಯಲ್ಲಿ ಎಲ್ಒಸಿ(ಲೈನ್ ಆಫ್ ಕಂಟ್ರೋಲ್) ಮೂಲಕ ಒಳ ನುಸುಳಿದ್ದ ಪಾಕಿಸ್ತಾನದ ಸೈನಿಕರು ಮತ್ತು ಉಗ್ರರನ್ನು ಸದೆಬಡಿದ ಭಾರತೀಯ ಸೈನ್ಯ ವಿಜಯದ ಪತಾಕೆ ಹಾರಿಸಿತ್ತು. ಈ ಹೋರಾಟದಲ್ಲಿ ಹುತಾತ್ಮರಾದ ಭಾರತೀಯ ವೀರಯೋಧರ ಸ್ಮಾರಕವೂ ಕಾರ್ಗಿಲ್ನಲ್ಲಿಯೇ ಇದೆ. ಇಂತಹ ಭೂಮಿಯ ಮಣ್ಣನ್ನು ಲೆಫ್ಟಿನೆಂಟ್ ಕರ್ನಲ್ ಅಮರನಾಥ್ ಅವರು ಕರ್ನಾಟಕಕ್ಕೆ ತರುತ್ತಿದ್ದಾರೆ. ಯಾಕೆ ಗೊತ್ತಾ?
ಕೋಲಾರದಲ್ಲಿ ಯೋಧರ ಸ್ಮಾರಕ ನಿರ್ಮಾಣ ಆಗುತ್ತಿದೆ. ಈ ಜಿಲ್ಲೆಯ ಮಾಜಿ ಯೋಧರ ಬಹುದಿನಗಳ ಕನಸು ಇಲ್ಲೊಂದು ಯೋಧರ ಸ್ಮಾರಕ ಕಟ್ಟಬೇಕು. ಈ ಕಾರ್ಯಕ್ಕೆ ಕಾರ್ಗಿಲ್ ಯುದ್ಧಭೂಮಿಯ ಮಣ್ಣು ಬೇಕು ಎಂಬುದು. ಅದರಂತೆ ನಗರದ ಪಿ.ಸಿ. ಬಡಾವಣೆಯ ಮಕ್ಕಳ ಉದ್ಯಾನವನದ ಬಳಿ ಸ್ಮಾರಕ ನಿರ್ಮಾಣವಾಗುತ್ತಿದೆ. ಈ ಕಾರ್ಯಕ್ಕೆ ಆ.15ರಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ಚಾಲನೆ ನೀಡಿದ್ದರು.
ಇನ್ನು ಕೋಲಾರದ ಮಾಜಿ ಸೈನಿಕರ ಆಸೆಯಂತೆ ಕಾರ್ಗಿಲ್ ಯುದ್ಧ ಭೂಮಿಯ ಮಣ್ಣನ್ನು ಲೆಫ್ಟಿನೆಂಟ್ ಕರ್ನಲ್ ಅಮರನಾಥ್ ತರುತ್ತಿದ್ದಾರೆ. ಅಲ್ಲಿನ ಮಣ್ಣನ್ನು ಒಂದು ಕವರ್ನಲ್ಲಿ ತುಂಬಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.