ನಾವೀನ್ಯತೆಯಿಂದ ಉದ್ಯಮದಲ್ಲಿ ಯಶಸ್ಸು - ಡಾ. ಶಾಂತಾರಾಮ ಶೆಟ್ಟಿ

mng-12sep-nitte v v
Published on


ಮಂಗಳೂರು : ಉದ್ಯಮ ಕ್ಷೇತ್ರದ ಸವಾಲುಗಳನ್ನು ದಿಟ್ಟವಾಗಿ ಎದುರಿಸುವ ಮನೋಭಾವದಿಂದ ಯುವ ಉದ್ಯಮಿಗಳು ತಮ್ಮ ಕನಸನ್ನು ಸಾಕಾರಗೊಳಿಸಬಹುದು. ಇದರ ಜತೆಗೆ ತಮ್ಮ ಉದ್ಯಮದಲ್ಲಿ ನಾವೀನ್ಯತೆಯನ್ನು ಮೈಗೂಡಿಸಿಕೊಂಡರೆ ಯಶಸ್ಸು ಗಳಿಸುವುದು ಸುಲಭ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಸಹ ಕುಲಪತಿ ಡಾ. ಶಾಂತಾರಾಮ್ ಶೆಟ್ಟಿ ಹೇಳಿದರು.
ನಿಟ್ಟೆ ಪರಿಗಣಿತ ವಿ.ವಿ. ವತಿಯಿಂದ ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ನಡೆದ ಕರಾವಳಿ ಸ್ಟಾರ್ಟ್‌ಅಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ 1142 ವಿಶ್ವವಿದ್ಯಾನಿಲಯಗಳು ಈ ರೀತಿ ಉದ್ಯೋಗ ಸೃಷ್ಟಿಗೆ ಪೂರಕವಾದ
ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದರು.
ದೇಶದ ತಲಾ ಆದಾಯವನ್ನು ಮೇಲೆತ್ತುವಲ್ಲಿ ಯುವ ಉದ್ಯಮಿಗಳು ಗಮನ ಹರಿಸಬೇಕು. ಟಾಟಾ, ಬಿರ್ಲಾ, ಅದಾನಿ, ಅಂಬಾನಿ ಸಹಿತ ಬೃಹತ್ ಉದ್ಯಮಿಗಳು ಅತ್ಯಂತ ಸಣ್ಣ ಪ್ರಮಾಣದ ಹೂಡಿಕೆಯೊಂದಿಗೆ ತಮ್ಮ ವ್ಯವಹಾರ ಆರಂಭಿಸಿದವರು. ಸವಾಲುಗಳನ್ನು ಎದುರಿಸುವ ದೃಷ್ಟಿಕೋನ, ಛಲದ ಜತೆಗೆ ನಾವೀನ್ಯತೆಯ ಆಲೋಚನೆಗಳು ಇದ್ದಾಗ ಉದ್ಯಮದಲ್ಲಿ ಅತೀ ಎತ್ತರಕ್ಕೆ ಏರಲು ಸಾಧ್ಯವಾಗುತ್ತದೆ ಎನ್ನುವುದನ್ನು ಯಶಸ್ವಿ ಉದ್ಯಮಿಗಳು ನಿರೂಪಿಸಿದ್ದಾರೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್ ಮಾತನಾಡಿ, ತಂತ್ರಜ್ಞಾನಗಳನ್ನು ಬಳಸಿಕೊಂಡು ಸಾಕಷ್ಟು ಸ್ಥಳೀಯ ಮಟ್ಟದ ಉದ್ಯಮಗಳನ್ನು ಬೆಳೆಸಲು ಅವಕಾಶಗಳಿವೆ. ಈ ಬಗ್ಗೆ ಯುವ ಉದ್ಯಮಿಗಳು ಗಮನ ಹರಿಸಬೇಕು ಎಂದರು.
ಎಂಆರ್‌ಪಿಲ್ ನಿರ್ದೇಶಕ ನಂದಕುಮಾರ್ ವಿ., ಕೆಎಸಿಸಿಐ ಅಧ್ಯಕ್ಷ ಅನಂತೇಶ ವಿ. ಪ್ರಭು, ಸಿಐಐ ಮಂಗಳೂರು ಜಿಲ್ಲಾ ಕೌನ್ಸಿಲ್ ಚೇರ್ಮನ್ ಅಜಿತ್ ಕಾಮತ್, ಉಡುಪಿ ಯುಸಿಸಿಐ ನಿರ್ದೇಶಕ ಡಾ. ವಿಜಯೇಂದ್ರ ವಸಂತ್, ಡಾ. ಗೋಪಾಲ ಮುಗೆರಾಯ ಉಪಸ್ಥಿತರಿದ್ದರು.
ನಿಟ್ಟೆ ಇನ್‌ಕ್ಯುಬೇಶನ್ ಸೆಂಟರ್‌ನ ಸಿಇಒ ಡಾ. ಎ.ಪಿ. ಆಚಾರ್ ಸ್ವಾಗತಿಸಿದರು. ನಿಟ್ಟೆ ಐಐಸಿಯ ಅಧ್ಯಕ್ಷ ಡಾ. ಶ್ರೀನಿಕೇತನ್ ಜಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net