"ಶಾದಿ ಕೆ ಡೈರೆಕ್ಟರ್ ಕರಣ್ ಔರ್ ಜೋಹರ್" ನಿರ್ಮಾಪಕರ ವಿರುದ್ಧ ಕರಣ್​​​ ಜೋಹರ್​ ಕೋರ್ಟ್​​ ಮೊರೆ ಹೋಗಿದ್ದೇಕೆ?

Untitled-design-86-1
Published on

ಮುಂಬೈ: ಬಾಲಿವುಡ್​​ನಲ್ಲಿ ರಿಲೀಸ್​ಗೆ ಸಿದ್ಧವಾಗಿರುವ 'ಶಾದಿ ಕೆ ಡೈರೆಕ್ಟರ್ ಕರಣ್ ಔರ್ ಜೋಹರ್' ಸಿನಿಮಾದ ನಿರ್ಮಾಪಕರ ವಿರುದ್ಧ ನಿರ್ದೇಶಕ-ನಿರ್ಮಾಪಕ ಕರಣ್ ಜೋಹರ್ ಮುಂಬೈ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಚಿತ್ರದ ಶೀರ್ಷಿಕೆಯಲ್ಲಿ ತಮ್ಮ ಹೆಸರನ್ನು ಅಕ್ರಮವಾಗಿ ಬಳಸಿಕೊಂಡಿದ್ದಾರೆ. ಶೀರ್ಷಿಕೆಯ ಮೂಲಕ ಗೇಲಿ ಮಾಡುವ ಪ್ರಯತ್ನ ನಡೆದಿದೆ ಎಂದು ಕರಣ್​​​ ಆರೋಪಿಸಿ, ಶೀರ್ಷಿಕೆಯಲ್ಲಿ ತಮ್ಮ ಹೆಸರು ಬಳಸದಂತೆ ತಡೆಯಬೇಕು ಎಂದು ಮನವಿ ಮಾಡಿದ್ದಾರೆ.

ನ್ಯಾಯಮೂರ್ತಿ ಆರ್‌ಐ ಚಾಗ್ಲಾ ಅವರ ಪೀಠದ ಮುಂದೆ ಸಲ್ಲಿಸಲಾದ ಅರ್ಜಿಯಲ್ಲಿ ಕರಣ್​​ ಜೋಹರ್​​ ಚಿತ್ರದ ಬಿಡುಗಡೆಗೆ ತಕ್ಷಣ ತಡೆ ನೀಡಬೇಕೆಂದು ಕೋರಿದ್ದಾರೆ. ಚಿತ್ರವು ಶುಕ್ರವಾರ (ಜೂನ್​ 14)ರಂದು ಬಿಡುಗಡೆಯಾಗಲಿದೆ. ಚಿತ್ರದ ಶೀರ್ಷಿಕೆಯಲ್ಲಿ ತಮ್ಮ ಹೆಸರನ್ನು ಬಳಸದಂತೆ ಚಿತ್ರ ನಿರ್ಮಾಪಕರ ವಿರುದ್ಧ ಶಾಶ್ವತ ನಿಷೇಧ ಮತ್ತು ತಡೆಯಾಜ್ಞೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಶೀರ್ಷಿಕೆಯಲ್ಲಿ ಅಕ್ರಮವಾಗಿ ತಮ್ಮ ಹೆಸರನ್ನು ಬಳಸುತ್ತಿರುವ ಚಿತ್ರ ಅಥವಾ ಅದರ ನಿರ್ಮಾಪಕರೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ ಎಂದು ಕರಣ್ ಜೋಹರ್ ಹೇಳಿದ್ದಾರೆ.

ವಿಚಾರಣೆ ಸಮಯದಲ್ಲಿ, ಚಿತ್ರದ ಶೀರ್ಷಿಕೆ ನೇರವಾಗಿ ತನ್ನ ಹೆಸರನ್ನು ಉಲ್ಲೇಖಿಸುತ್ತದೆ. ಇದು ಅವರ ವೈಯಕ್ತಿಕ ಹಕ್ಕುಗಳು, ಪ್ರಚಾರ ಮತ್ತು ಖಾಸಗಿತನವನ್ನು ಉಲ್ಲಂಘಿಸುತ್ತದೆ ಎಂದು ಕರಣ್ ಹೇಳಿದ್ದಾರೆ. ಅನುಮತಿ ಇಲ್ಲದೇ ತಮ್ಮ ‘ಬ್ರಾಂಡ್ ನೇಮ್’ ಬಳಕೆ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನ ಹಾಗೂ ಖ್ಯಾತಿಯ ಲಾಭ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈಗಾಗಲೇ ಟ್ರೇಲರ್ ಮತ್ತು ಪೋಸ್ಟರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗಿದೆ. ಇದು ತಮ್ಮ ವಿಶ್ವಾಸಾರ್ಹತೆ ಮತ್ತು ಖ್ಯಾತಿಗೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡುತ್ತಿವೆ ಎಂದು ಕರಣ್​​ ಹೇಳಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net