ಕಾಪು ಶ್ರೀ ಮಾರಿಯಮ್ಮ ದೇವರ ಶ್ರದ್ಧಾಭಕ್ತಿಯ ಸೇವೆಯಿಂದ ಶ್ರೇಷ್ಠ ಫಲ ಪ್ರಾಪ್ತಿ

13sgr1
ಸಾಗರದ ಶೃಂಗೇರಿ ಶಂಕರ ಮಠದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಪ್ರಮುಖರನ್ನು ಸನ್ಮಾನಿಸಲಾಯಿತು. ಗೋಪಾಲಕೃಷ್ಣ ಬೇಳೂರು, ವಾಸುದೇವ ಶೆಟ್ಟಿ, ಉದಯಕುಮಾರ್ ಶೆಟ್ಟಿ ಇತರರಿದ್ದರು.
Published on

ಸಾಗರ: ಉಡುಪಿ ಜಿಲ್ಲೆಯ ಕಾಪು ಶ್ರೀ ಮಾರಿಯಮ್ಮನ ಸೇವೆಯನ್ನು ಶ್ರದ್ಧಾಭಕ್ತಿಯಿಂದ ಮಾಡಿದರೆ ಶ್ರೇಷ್ಠ ಫಲಗಳು ಸಿಗುತ್ತವೆ ಎಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಹೇಳಿದರು.

ಸಾಗರದ ಶೃಂಗೇರಿ ಶಂಕರ ಮಠದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ, ನವದುರ್ಗಾ ಲೇಖನ ಯಜ್ಞ ಸಮಿತಿಯಿಂದ 2025ರ ಫೆಬ್ರವರಿ-ಮಾರ್ಚ್‌ನಲ್ಲಿ ಆಯೋಜಿಸಿರುವ ಕಾಪು ಶ್ರೀ ಮಾರಿಯಮ್ಮ ದೇವಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ನವದುರ್ಗಾ ಲೇಖನ ಯಜ್ಞ ಮತ್ತು ನವಚಂಡಿಯಾಗ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕಾಪು ಶ್ರೀ ಮಾರಿಯಮ್ಮನ ಐತಿಹ್ಯ ನೂರಾರು ವರ್ಷಗಳಿಂದ ಪ್ರಚಲಿತದಲ್ಲಿದೆ. ಪ್ರತಿ ಮಂಗಳವಾರ ಅಮ್ಮನ ದರ್ಶನ ಸೇವೆ ಇರಲಿದೆ. ಅಮ್ಮನ ಭಕ್ತರು ವಿಶ್ವದಾದ್ಯಂತ ಇದ್ದು, ಕೋಟ್ಯಂತರ ರೂ. ವೆಚ್ಚದಲ್ಲಿ ಶಿಲಾಮಯ ದೇವಸ್ಥಾನದ ಜೀರ್ಣೋದ್ಧಾರ ನಡೆಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ನವದುರ್ಗಾ ಲೇಖನ ಯಜ್ಞ ಸಮಿತಿ 18 ದೇಶಗಳಲ್ಲಿ 9 ಜನರ ಸಮಿತಿ ರಚಿಸಿದ್ದು, ಜೀರ್ಣೋದ್ಧಾರ ಕಾರ್ಯ ಪವಾಡ ಸದೃಶ ರೀತಿಯಲ್ಲಿ ಸಾಗುತ್ತಿದೆ. ಇತಿಹಾಸಕ್ಕೆ ಸೇರುವ ದೇವಸ್ಥಾನವಾಗಿ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಕಾಪು ಶ್ರೀ ಮಾರಿಯಮ್ಮನ ದೇವಸ್ಥಾನದ ನಿರ್ಮಾಣ ಕಾರ್ಯ ಶೇ. 80ರಷ್ಟು ಪೂರ್ಣಗೊಂಡಿದೆ. ನಮಗೆ ಪ್ರತಿಯೊಬ್ಬ ಭಕ್ತರೂ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಉದ್ದೇಶವಿದೆ. ಅಮ್ಮನ ತಂಗಿ ಉಚ್ಚಂಗಿ ದೇವಿ ಕೂಡ ಇಲ್ಲಿದೆ. ತಂಗಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾಳೆ. ನವದುರ್ಗಾ ಲೇಖನ ಯಜ್ಞದ ಮೂಲಕ ಬರೆವ ಲೇಖನ ಅಮ್ಮನ ಪಾದ ಸೇರುತ್ತದೆ. ಭಕ್ತರ ಹರಕೆಯನ್ನು ಅಮ್ಮ ಈಡೇರಿಸುತ್ತಾಳೆ ಎಂಬ ನಂಬಿಕೆ ಬಲವಾಗಿದೆ. ಇದಕ್ಕೆ ಸಾಕಷ್ಟು ಪುರಾವೆಗಳಿವೆ. ವಾಸುದೇವ ಶೆಟ್ಟಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ

ಸಮಿತಿ ಕಾರ್ಯಾಧ್ಯಕ್ಷ ಮುನಿಯಾಲ ಉದಯಕುಮಾರ್ ಶೆಟ್ಟಿ ಮಾತನಾಡಿ, ನವದುರ್ಗಾ ಲೇಖನ ಯಜ್ಞದಲ್ಲಿ ದೇವಿ ಹೆಸರನ್ನು ಶ್ರದ್ಧೆ, ಭಕ್ತಿಯಿಂದ 9ದಿನ 9ಬಾರಿ ಬರೆಯಬೇಕು. 6 ರಿಂದ 26 ವರ್ಷದವರಿಗೆ ಆದ್ಯತೆ ಇದೆ. ಮಕ್ಕಳಿಗೆ ಇಂತಹ ಕೆಲಸದ ಬಗ್ಗೆ ಅರಿವು ಮೂಡಿಸುವ ಸಂಸ್ಕಾರ ಕೊಡಬೇಕು. ನಮ್ಮ ಸೇವೆಯ ಪ್ರತಿಫಲ ಸಿಗುವುದರಲ್ಲಿ ಅನುಮಾನವಿಲ್ಲ ಎಂದರು.

ಶಾಸಕ ಗೋಪಾಲಕೃಷ್ಣ ಬೇಳೂರು ಸಮಿತಿ ಪದಾಧಿಕಾರಿಗಳನ್ನು ಗೌರವಿಸಿ ಮಾತನಾಡಿ, ಕಾಪುವಿನ ಶ್ರೀ ಮಾರಿಯಮ್ಮ ದೇವಿ ಬಹಳ ಶಕ್ತಿ ದೇವತೆ. ದೇವಸ್ಥಾನದ ಜೀರ್ಣೋದ್ಧಾರಕ್ಕೆ ನಮ್ಮ ಭಾಗದಿಂದಲೂ ದೇಣಿಗೆ ಕೊಡುತ್ತೇವೆ ಎಂದು ತಿಳಿಸಿದರು.

ಪೂರ್ವಭಾವಿ ಸಭೆಗೂ ಮುನ್ನ ಶಶಾಂಕ ದೇವಾಡಿಗ ಅವರಿಂದ ಸ್ಯಾಕ್ಸೋಫೋನ್ ವಾದನ, ಚಿಂತನಾ ಹೆಗಡೆ ಮಾಳ್ಕೋಡ್ ಅವರಿಂದ ಯಕ್ಷಗಾಯನ ವೈಭವ ಕಾರ್ಯಕ್ರಮ ನಡೆಯಿತು. ಪುರಂದರ ದೇವಾಡಿಗ, ನಾಗರಾಜ ಭಂಡಾರಿ, ಸುಬ್ರಹ್ಮಣ್ಯ ಭಂಡಾರಿ ಹಿಮ್ಮೇಳದಲ್ಲಿ ಸಹಕರಿಸಿದರು. ತಾಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿ, ಸಮಿತಿ ಸಂಚಾಲಕ ದಾಮೋದರ ಶರ್ಮ, ಮಹಿಳಾ ವಿಭಾಗದ ಸಂಚಾಲಕಿ ಗೀತಾಂಜಲಿ, ರಘುರಾಮ ಶೆಟ್ಟಿ, ಬೆಳವೆ ವಸಂತಕುಮಾರ್ ಶೆಟ್ಟಿ, ಪ್ರಮೋದ್ ಸುವರ್ಣ, ವೀರೇಶ್ ಪೂಜಾರಿ, ಮ.ಸ.ನಂಜುಂಡಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net