ಕಟ್ಟಡ ಗೋಡೆ ಕುಸಿತ, ಭೂಕಂಪ ವದಂತಿ!

PTR_16 JUN_11
Published on

ವಿಟ್ಲ: ಕನ್ಯಾನ ಮಂಡ್ಯೂರು ಭಾಗದಲ್ಲಿ ಭೂಮಿ ಕಂಪಿಸಿ ವಿಚಿತ್ರ ಶಬ್ದ ಕೇಳಿ ಬಂದ ಬಗ್ಗೆ ತಾಲೂಕು ಆಡಳಿತಕ್ಕೆ ದೂರು ಕರೆ ಹೋಗಿದ್ದು, ಸ್ಥಳದಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ ಅಧಿಕಾರಿಗಳ ದಂಡು ಹರಿದು ಬರುತ್ತಿದ್ದಂತೆ ಹಳೇ ಕಟ್ಟಡವೊಂದರ ಗೋಡೆ ಕುಸಿದು ಬಿದ್ದಿದ್ದನ್ನೇ ಈ ರೀತಿಯಲ್ಲಿ ಬಿಂಬಿಸಿ, ಎಲ್ಲರನ್ನೂ ಬೇಸ್ತು ಬೀಳುವಂತೆ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಕನ್ಯಾನ- ಬಾಯಾರು ರಸ್ತೆಯ ಮಂಡ್ಯೂರು ಭಾಗದ ರಸ್ತೆ ಬದಿಯ ಎರಡು ಮೂರು ಮನೆಗಳಿಗೆ ಮಧ್ಯಾಹ್ನ ಭೂಮಿ ಕಂಪಿಸುವ ಜತೆಗೆ ಭೀಕರವಾದ ಶಬ್ದ ಕೇಳಿಸಿದೆ ಎಂದು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಇದರ ಜತೆಗೆ ತಾಲೂಕು ಆಡಳಿತಕ್ಕೆ ಕರೆ ಮಾಡಿ ದೂರು ನೀಡಿದ್ದರು. ಕಂದಾಯ ಇಲಾಖೆಯ ಗ್ರಾಮಕರಣಿಕ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಜಿಲ್ಲಾಽಕಾರಿ ಮುಲ್ಲೈ ಮುಗಿಲನ್ ಗ್ರಾಮಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಭೂಕಂಪನದ ಬಗ್ಗೆ ಮಾಹಿತಿ ಸಂಗ್ರಹಿಸಲು ಭೂವಿಜ್ಞಾನ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಸ್ಥಳ ಪರಿಶೀಲನೆ ಸಂದರ್ಭ ಕರೋಪಾಡಿ ಗ್ರಾಪಂ ವ್ಯಾಪ್ತಿಯಲ್ಲಿರುವ ಮನೆಯೊಂದರ ಹಳೇ ಕಟ್ಟಡದ ಗೋಡೆ ಕುಸಿದು ಬಿದ್ದಿರುವುದು ಪತ್ತೆಯಾಗಿದೆ. ಇದು ಬೀಳುವ ಸಂದರ್ಭ ಶಬ್ದ ಹಾಗೂ ಕಂಪಿಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂ ವಿಜ್ಞಾನ ಇಲಾಖೆಯ ದಾವೂದ್, ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್, ಕಂದಾಯ ನಿರೀಕ್ಷಕ ರವಿ ಎಂ.ಎನ್., ಗ್ರಾಮ ಆಡಳಿತಾಧಿಕಾರಿ ಅನಿಲ್ ಕುಮಾರ್, ಕನ್ಯಾನ ಗ್ರಾಪಂ ಕಾರ್ಯದರ್ಶಿ ಅಬ್ದುಲ್ ಕರೀಮ್, ವಿಟ್ಲ ಠಾಣಾ ಉಪನಿರೀಕ್ಷಕ ರತನ್ ಕುಮಾರ್ ಮತ್ತಿತರರು ಭೇಟಿ ನೀಡಿದ್ದಾರೆ.

ಆತಂಕಕ್ಕೆ ಪಕ್ಕ ಮಣ್ಣು ಗಣಿ ಪುಷ್ಟಿ!

ಶಬ್ದ ಕೇಳಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬರುತ್ತಿದ್ದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕನ್ಯಾನದ ಮಾಹಿತಿ ಕೇಳಿದ್ದಾರೆ. ಈ ಹಿಂದೆ ಪಶ್ಚಿಮಘಟ್ಟಪ್ರದೇಶದಲ್ಲಿ ನಡೆದ ಭೀಕರ ಕುಸಿತಗಳಿಗೂ ಮೊದಲು ಇದೇ ರೀತಿಯ ಶಬ್ದ ಕೇಳಿ ಬಂದಿತ್ತು. ಮಂಡ್ಯೂರು ಭಾಗದಲ್ಲಿ ಶಬ್ದ ಕೇಳಿದ ಸ್ಥಳದಿಂದ ಬಾಕ್ಸಟ್ ಮಣ್ಣು ಗಣಿಗಾರಿಕೆ ನಡೆಯುವ ಸ್ಥಳಕ್ಕೆ ವಾಯು ವಾರ್ಗದಲ್ಲಿ ಕೇವಲ ೧ ಕಿ. ಮೀ ಇದೆ. ಅದರ ಕಾರಣದಿಂದ ಈ ಪರಿಸರದಲ್ಲಿ ಶಬ್ದ ಆತಂಕ ಮೂಡಿಸುವಂತೆ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net