

| ಹರ್ಷವರ್ಧನ್ ಬ್ಯಾಡನೂರು
"ದಟ್ ಗರ್ಲ್ ಇನ್ ಯೆಲ್ಲೋ ಬೂಟ್ಸ್', "ಹಂಟರ್', "ರಾಮಲೀಲಾ', "8ಎಎಂ ಮೆಟ್ರೋ', "ಉಲಝ್' ಸೇರಿ 20ಕ್ಕೂ ಹೆಚ್ಚು ಬಾಲಿವುಡ್ ಚಿತ್ರಗಳಲ್ಲಿ, ಐದಾರು ಹಿಂದಿ ವೆಬ್ಸರಣಿಗಳಲ್ಲಿ ನಟಿಸಿರುವ ಖ್ಯಾತಿ ನಟ ಗುಲ್ಶನ್ ದೇವಯ್ಯಗ್ಗೆ ಸಲ್ಲುತ್ತದೆ. ಕೊಡವ ಕುಟುಂಬದ ಗುಲ್ಶನ್, ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಕಾಲೇಜು ದಿನಗಳಲ್ಲಿ ರಂಗಭೂಮಿಯಲ್ಲಿ ಸೆಳೆತಕ್ಕೊಳಗಾದ ಅವರು, ಅಲ್ಲಿಂದ ನೇರ ಮುಂಬೈಗೆ ಹೋಗಿ ಸೆಟಲ್ ಆದರು. ಕಳೆದ 15 ವರ್ಷಗಳಿಂದ ಬಾಲಿವುಡ್ನಲ್ಲಿ ಬಿಜಿಯಿದ್ದ ಗುಲ್ಶನ್ "ಕಾಂತಾರ ಅಧ್ಯಾಯ 1'ರಲ್ಲಿ ಕುಲಶೇಖರನ ಪಾತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದಾರೆ.
"ನಾನು ಕನ್ನಡಿಗ ಕಣ್ರೀ, ಕನ್ನಡದ ಹುಡುಗ' ಎಂದು ನಗುತ್ತಾ ವಿಜಯವಾಣಿ ಜತೆ ಮಾತಿಗಿಳಿದ ಅವರು, "2019ರಲ್ಲಿ ಮೊದಲ ಬಾರಿಗೆ ಪಿ.ಡಿ.ಸತೀಶ್ ಮೂಲಕ ರಿಷಬ್ ಶೆಟ್ಟಿ ಭೇಟಿಯಾಗಿದ್ದೆ. ಆ ಬಳಿಕ ರಿಷಬ್ ಮುಂಬೈಗೆ ಬಂದಾಗ, ಎರಡು, ಮೂರು ಕಥೆಗಳನ್ನು ಡಿಸ್ಕಸ್ ಮಾಡಿದ್ದೆವು. "ಕಾಂತಾರ' ಸಕ್ಸಸ್ ಬಳಿಕ "ಕಾಂತಾರ 1'ರ ಬಗ್ಗೆ ಮಾತನಾಡಲು ಒಮ್ಮೆ ಮಧ್ಯರಾತ್ರಿ ನನಗೆ ಕರೆ ಮಾಡಿದ್ದರು. ನಿಮಗಾಗಿಯೇ ಒಂದು ಪಾತ್ರ ಮಾಡಿದ್ದೇನೆ ಎಂದರು. ನನಗೂ ಖುಷಿಯಾಯಿತು. ಶನೀಲ್ ಗೌತಮ್, ಅನಿರುದ್ಧ್ ಮಹೇಶ್ ಕಥೆ ಹೇಳಿದರು. ಇಷ್ಟವಾಯಿತು. ಅಪ್ಪ, ಅಮ್ಮನಿಗೂ ನಾನು ಕನ್ನಡ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಇತ್ತು. "ಕಾಂತಾರ'ದಿಂದ ಮೊದಲ ಹೆಜ್ಜೆ ಇಟ್ಟಿದ್ದು ಸಂತೋಷ ನೀಡಿದೆ' ಎನ್ನುತ್ತಾರೆ.
ಕುಲಶೇಖರ ಪಾತ್ರಕ್ಕೆ ಮಾಡಿಕೊಂಡ ಸಿದ್ಧತೆಯ ಬಗ್ಗೆ ಗುಲ್ಶನ್, "ಕುಲಶೇಖರ ಪಾತ್ರ, ಬಾಂಗ್ರ ರಾಜ್ಯ ಕಾಲ್ಪನಿಕ. ಚಿತ್ರತಂಡದವರು ಚರ್ಚಿಸುತ್ತಾ, ವರ್ಕ್ಶಾಪ್ ಮಾಡುತ್ತಾ, ಆ ಕುಲಶೇಖರ ಒಬ್ಬ ಕುಡುಕ, ಅಯೋಗ್ಯ, ಮುಂಗೋಪಿ, ಆತ ಕೂರುವ ಶೈಲಿ, ಮಾತನಾಡುವ ಶೈಲಿ, ಓಡಾಟ, ಹೀಗೆ ಪ್ರತಿ ಅಂಶಗಳನ್ನೂ ಒಂದೊಂದಾಗಿ ಡೆವೆಲಪ್ ಮಾಡಿದೆವು. ಚಿತ್ರಕ್ಕಾಗಿ ಕುದುರೆ ಸವಾರಿ ಕಲಿತೆ. ಯುದ್ಧದ ಸನ್ನಿವೇಶದಲ್ಲಿ, ಬೆಂಕಿ ಹೊತ್ತಿರುವ ಜಾಗದಲ್ಲಿ, ಎದ್ದುಬಿದ್ದು ಓಡುತ್ತಿರುವ ನಡುವೆ ಕುದುರೆ ಸವಾರಿ ಮಾಡುವುದೇ ಕಷ್ಟವಾಗಿತ್ತು. ಇನ್ನು ಪಾರ್ಮ್ರ್ ಮಾಡುವುದು ಇನ್ನೂ ಕಷ್ಟವಾಗಿತ್ತು. ಹೀಗೆ 10, 15 ದಿನಗಳ ಕಾಲ ಕುದುರೆ ಮೇಲೆ ಶೂಟಿಂಗ್ ಮಾಡಿದ್ದೇನೆ. ಕಲ್ಲು, ಮಣ್ಣಿನಿಂದ ಕೂಡಿದ ಉಬ್ಬು&ಹಳ್ಳಗಳ ಜಾಗ. ಕುದುರೆಗಳ ಸ್ವಭಾವವೂ ಆಗಾಗ ಬದಲಾಗುತ್ತಿತ್ತು. ಹೇಳಿದ ಜಾಗದಲ್ಲಿ ನಿಲ್ಲುತ್ತಿರಲಿಲ್ಲ' ಎಂದು ಹೇಳಿಕೊಳ್ಳುತ್ತಾರೆ ಗುಲ್ಶನ್.
"ದಟ್ ಗರ್ಲ್ ಇನ್ ಯೆಲ್ಲೋ ಬೂಟ್ಸ್'ನಲ್ಲಿ ಗುಲ್ಶನ್ "ಚಿಟ್ಟಿಯಪ್ಪ ಸಿದ್ದಣ್ಣ ಗೌಡ' ಎಂಬ ಪಾತ್ರದಲ್ಲಿ ನಟಿಸಿದ್ದು, ಕನ್ನಡ ಡೈಲಾಗ್ಸ್ ಕೂಡ ಹೇಳಿದ್ದಾರೆ. ಹೀಗಾಗಿಯೇ, ""ಕಾಂತಾರ' ಕನ್ನಡ ಚಿತ್ರರಂಗದಲ್ಲಿ ನನಗೆ ಮೊದಲ ಸಿನಿಮಾ. ಆದರೆ, ಕನ್ನಡ ಭಾಷೆಯಲ್ಲಿ ನನ್ನ ಡೆಬ್ಯೂ ಆಗಿದೆ. ನಾನು ಸಿನಿಮಾ ಪ್ರೇಮಿ. ಸಿನಿಮಾ ಎಲ್ಲಿಗೆ ಕರೆದುಕೊಂಡು ಹೋಗುತ್ತೋ ಅಲ್ಲಿಗೆ ಹೋಗುತ್ತೇನೆ. ನಾನು ಭಾರತೀಯ ಚಿತ್ರರಂಗದ ನಟ ಎಂದು ಗುರುತಿಸಿಕೊಳ್ಳಲು ಬಯಸುತ್ತೇನೆ. ಕೇವಲ ಹಣಕ್ಕಾಗಿ ಕೆಲಸ ಮಾಡಲು ನನಗೆ ಇಷ್ಟವಿಲ್ಲ. ಈಗೀಗ ಕನ್ನಡದಲ್ಲಿ ತುಂಬ ಒಳ್ಳೆ ಸಿನಿಮಾಗಳು ಬರುತ್ತಿವೆ. ನನ್ನದೂ ಅಂಗಡಿ ಓಪನ್ ಆಗಿದೆ' ಎನ್ನುತ್ತಾರೆ.
"ನಾನು "ಕಾಂತಾರ' ಫ್ಯಾನ್' ಎನ್ನುವ ಗುಲ್ಶನ್, "ರಿಷಬ್ ಜತೆ ಮಾತನಾಡಿದಾಗ ಅವರಿಗಿರುವ ಸಿನಿಮಾ ಹುಚ್ಚು. ನಮ್ಮ ನಾಡಿನ, ಮಣ್ಣಿನ ಕಥೆ ಹೇಳುವ ಉತ್ಸಾಹ ಎಂಥದ್ದು ಅಂತ ಗೊತ್ತಾಗುತ್ತದೆ. ಮೊದಲ ಸಿನಿಮಾ ಯಶಸ್ಸು ಗಳಿಸಿ, ದೊಡ್ಡ ನಿರೀಕ್ಷೆ ಸೃಷ್ಟಿಸಿತ್ತು. ಆ ಒತ್ತಡದಲ್ಲಿ ಎರಡನೇ ಚಿತ್ರವನ್ನು ಮೊದಲಿಗಿಂತ ಅದ್ಭುತವಾಗಿ ಮಾಡುವುದು ಕಷ್ಟ. ಅಷ್ಟು ದೊಡ್ಡ ಬಜೆಟ್, ತಂಡದ ಜವಾಬ್ದಾರಿ ಹೊತ್ತು ಮುನ್ನಡೆಸುವ ಅವರ ಶಕ್ತಿ ನಿಜಕ್ಕೂ ಶ್ಲಾಘನೀಯ. ನನಗೆ ಒತ್ತಡ ಆಗುವುದಿಲ್ಲ. ರಿಷಬ್ನ ನೋಡಿದಾಗಲೆಲ್ಲ ಒತ್ತಡ ನಿಭಾಯಿಸುವುದನ್ನು ಇವರಿಂದ ಕಲಿಯಬೇಕು ಅಂತ ಹಲವು ಬಾರಿ ಅಂದುಕೊಂಡಿದ್ದೇನೆ' ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಗುಲ್ಶನ್.
ಬೆಂಗಳೂರಿನಲ್ಲಿದ್ದಾಗ ಗುಲ್ಶನ್ಗೆ, ರಂಗಭೂಮಿ ಮೂಲಕ ನಿರ್ದೇಶಕ ಪವನ್ ಕುಮಾರ್ ಹಳೆಯ ಪರಿಚಯ. ಯಾವಾಗ ಇವರು ಬಾಲಿವುಡ್ನಲ್ಲಿ ಒಂದೆರಡು ಹಿಂದಿ ಸಿನಿಮಾ ಮಾಡಿದರೋ, ಅದೇ ಸಮಯದಲ್ಲಿ ಪವನ್ ಕರೆ ಮಾಡಿ "ಲೂಸಿಯಾ' ಕಥೆ ಹೇಳಿದರಂತೆ. "ಚಿತ್ರಕ್ಕೆ ಒಂದು ವರ್ಷ ಸಮಯ ಕೊಡಬೇಕು ಎಂದರು. ಆದರೆ, ನಾನು ಆಗಷ್ಟೇ ಬಾಲಿವುಡ್ನಲ್ಲಿ ಸಣ್ಣ ಸಣ್ಣ ಹೆಜ್ಜೆ ಇಡುತ್ತಿದ್ದೆ. ಹೀಗಾಗಿ ಮಾಡಿರಲಿಲ್ಲ' ಎನ್ನುತ್ತಾರೆ.