ಜಲ ಪ್ರಾಧಿಕಾರದಿಂದ ರಸ್ತೆಗೆ ಕಂಟಕ

Ksd_Kantaka
Published on

ಪುರುಷೋತ್ತಮ ಪೆರ್ಲ ಜಲ ಪ್ರಾಧಿಕಾರ ಜಿಲ್ಲೆಯ ನಾನಾ ಕಡೆ ನೀರು ವಿತರಣೆಗಾಗಿ ಅಳವಡಿಸುತ್ತಿರುವ ಪೈಪ್‌ಗಳಿಂದ ವ್ಯಾಪಕವಾಗಿ ರಸ್ತೆ ಹಾನಿಗೀಡಾಗುತ್ತಿದೆ. ಧುನಿಕ ತಂತ್ರಜ್ಞಾನ ಬಳಸಿ ಸುಸಜ್ಜಿತವಾಗಿ ನಿರ್ಮಿಸುವ ಡಾಂಬರು ರಸ್ತೆಯನ್ನು ಏಕಾಏಕಿ ಅಗೆದು ನಂತರ ಸೂಕ್ತ ರೀತಿಯಲ್ಲಿ ಮುಚ್ಚದೆ ನಿರ್ಲಕ್ಷೃ ವಹಿಸಲಾಗುತ್ತಿದೆ. ಇದರಿಂದ ಲಕ್ಷಾಂತರ ರೂ.ವೆಚ್ಚದಲ್ಲಿ ನಿರ್ಮಿಸುವ ರಸ್ತೆಗಳು ನಾಶವಾಗುತ್ತಿದೆ. ಒಂದೆಡೆ ಶಿಥಿಲ ಪೈಪ್‌ಗಳಿಂದ ನೀರು ಪೋಲಾಗುತ್ತಿದ್ದರೆ, ಇನ್ನೊಂದೆಡೆ ರಸ್ತೆ ಹಾಳಾಗುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯ ನೂರಾರು ಮನೆಗಳಿಗೆ ನೀರು ಪೂರೈಸುವ ನಿಟ್ಟಿನಲ್ಲಿ ಅಡ್ಕಸ್ಥಳ ಸೀರೆ ಹೊಳೆಗೆ ಅಡ್ಡಕಟ್ಟಿದ ಅಣೆಕಟ್ಟೆಯಿಂದ ನಾನಾ ಪ್ರದೇಶಗಳಿಗೆ ನೀರು ವಿತರಿಸಲಾಗುತ್ತಿದ್ದು, ಇದಕ್ಕಾಗಿ ರಸ್ತೆ ಅಂಚಿಗೆ ಪೈಪ್ ಅಳವಡಿಸುವ ಸಂದರ್ಭ ಉಂಟಾಗುವ ಹೊಂಡ ಸೂಕ್ತ ರೀತಿಯಲ್ಲಿ ಮುಚ್ಚದಿರುವುದರಿಂದ ರಸ್ತೆ ಶಿಥಿಲಾವಸ್ಥೆಗೆ ತಲುಪುತ್ತಿದೆ. ಜಲ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ನಡುವಿನ ಒಪ್ಪಂದ ಪ್ರಕಾರ ಈ ಕೆಲಸ ನಡೆಯುತ್ತಿದ್ದರೂ, ಅಗೆದು ಹಾಕಿದ ಹೊಂಡ ಸಮರ್ಪಕವಾಗಿ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಲೂ ಲೋಕೋಪಯೋಗಿ ಇಲಾಖೆ ಮುಂದಾಗದೆ, ಈ ಬಗ್ಗೆ ನಿರ್ಲಕ್ಷೃ ವಹಿಸುತ್ತಿರುವುದಾಗಿ ವ್ಯಾಪಕ ದೂರು ಕೇಳಿ ಬರುತ್ತಿದೆ. ರೋಡ್ ಶಿಥಿಲ ಲಕ್ಷಾಂತರ ರೂ.ವೆಚ್ಚದಲ್ಲಿ ಹೊಸ ರಸ್ತೆ ನಿರ್ಮಾಣ ಮಾಡುವ ಅಥವಾ ಡಾಂಬರೀಕರಣ ನಡೆಸಿದ ತಕ್ಷಣ ಅಲ್ಲಿ ಜಲ ಪ್ರಾಧಿಕಾರ ಪೈಪ್ ಅಳವಡಿಸಲು ರಸ್ತೆ ಅಗೆದುಹಾಕುವುದು ಸಾಮಾನ್ಯವಾಗುತ್ತಿದೆ. ಬೇಸಿಗೆಯಲ್ಲಿ ಪೈಪ್ ಅಳವಡಿಕೆ ಕಾರ್ಯ ನಡೆಸುತ್ತಿರುವುದರಿಂದ, ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ರಸ್ತೆ ಅಂಚಿಗೆ ಪೈಪ್ ಅಳವಡಿಸಿದ ಜಾಗದಲ್ಲಿ ನೀರು ಹರಿದು ಬೃಹತ್ ಹೊಂಡಗಳುಂಟಾಗುತ್ತಿದೆ. ಇದರಿಂದ ಕ್ರಮೇಣ ರಸ್ತೆಯೂ ಶಿಥಿಲಗೊಳ್ಳುತ್ತಿದೆ. ಹೊಂಡ ತೆಗೆಯಲು ಚೈನ್ ಜೆಸಿಬಿ ಬಳಸಲಾಗುತ್ತಿದ್ದು, ಇದು ರಸ್ತೆಯಲ್ಲಿ ಸಂಚರಿಸುವ ಮಧ್ಯೆ ಡಾಂಬಾರು ಕಿತ್ತು ರಸ್ತೆಗೆ ಹಾನಿಯುಂಟಾಗುತ್ತಿದೆ. ವ್ಯವಸ್ಥೆ ಅಯೋಮಯ ಎಣ್ಮಕಜೆ ಪಂಚಾಯಿತಿ ಸೇರಿದಂತೆ ಕಾಸರಗೋಡು ಜಿಲ್ಲೆಯ ನಾನಾ ಕಡೆ ಜಲ ಪ್ರಾಧಿಕಾರ ಪೈಪ್ ಅಳವಡಿಸುವ ಪ್ರದೇಶದ ರಸ್ತೆ ಅಂಚಿನಲ್ಲಿ ಈ ಸಮಸ್ಯೆ ಇದೆ. ಇದನ್ನು ಪ್ರಶ್ನಿಸಿ ಸಮರ್ಪಕವಾಗಿ ಮುಚ್ಚಬೇಕಾದ ಲೋಕೋಪಯೋಗಿ ಇಲಾಖೆ ತಮಗೂ ಈ ಕೆಲಸಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದೆ. ಈ ಹಿಂದೆ ಲೋಕೋಪಯೋಗಿ ಖಾತೆ ಸಚಿವರಾಗಿದ್ದ ಜಿ.ಸುಧಾಕರನ್ ತಮ್ಮ ಅಧಿಕಾರಾವಧಿಯಲ್ಲಿ ಬೇಕಾಬಿಟ್ಟಿ ರಸ್ತೆ ಅಂಚನ್ನು ಅಗೆಯುವುದಕ್ಕೆ ನಿಯಂತ್ರಣ ಹೇರಿದ್ದರು. ರಸ್ತೆ ಕಾಮಗಾರಿಗೆ ಮುಂಚಿತವಾಗಿ ಪೈಪ್ ಅಳವಡಿಸಬೇಕು. ತುರ್ತು ಕಾಮಗಾರಿಯಿದ್ದಲ್ಲಿ ಮಾತ್ರ ರಸ್ತೆಗೆ ಹಾನಿಯಾಗದ ರೀತಿಯಲ್ಲಿ ಪೈಪ್ ಅಳವಡಿಸಲು ಸೂಚಿಸುತ್ತಿದ್ದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳೂ ಇದನ್ನು ಪಾಲಿಸುತ್ತಿದ್ದರೆ, ಇಂದು ಈ ವ್ಯವಸ್ಥೆ ಸಂಪೂರ್ಣ ಅಯೋಮಯವಾಗಿದೆ. ಸೋರಿಕೆಯಿಂದಲೂ ಹಾನಿ ಜಲ ಪ್ರಾಧಿಕಾರ ಅಳವಡಿಸಿರುವ ಬಹುತೇಕ ಪೈಪ್‌ಗಳು ಕಳಪೆಯಾಗಿದ್ದು, ಅಲ್ಲಲ್ಲಿ ನೀರಿನ ಸೋರಿಕೆಯುಂಟಾಗುತ್ತಿದೆ. ಡಾಂಬರು ಕಿತ್ತು, ನಿರಂತರ ನೀರು ರಸ್ತೆ ಮೇಲಿಂದ ಹರಿಯುತ್ತಿರುವುದರಿಂದ ರಸ್ತೆಗೂ ಹಾನಿಯುಂಟಾಗುತ್ತಿದೆ. ಇನ್ನು ಈ ಪೈಪ್ ದುರಸ್ತಿ ನೆಪದಲ್ಲಿ ಮತ್ತೆ ರಸ್ತೆ ಅಗೆಯಲಾಗುತ್ತದೆ. ಕೆಲವೆಡೆ ನಿರಂತರ ಪೈಪ್ ಒಡೆದು ಹಾಳಾಗುತ್ತಿರುವುದರಿಂದ ಪದೇಪದೆ ದುರಸ್ತಿ ನೆಪದಲ್ಲಿ ಇಂಥ ಪ್ರದೇಶದಲ್ಲಿ ಹೊಂಡ ಮುಚ್ಚದೆ ಹಾಗೇ ಬಿಡಲಾಗುತ್ತಿದೆ. ಹೊಳೆಯಲ್ಲಿ ನೀರಿನ ಪ್ರಮಾಣ ಕುಸಿಯುತ್ತಿರುವ ಮಧ್ಯೆ ಪೈಪ್ ಒಡೆದು ನೀರು ಪೋಲಾಗುತ್ತಿರುವುದರಿಂದ ನೀರಿನ ಕ್ಷಾಮವೂ ಕಾಡಲಾರಂಭಿಸಿದೆ.

ಲೋಕೋಪಯೋಗಿ ಇಲಾಖೆ ಮತ್ತು ಜಲಮಂಡಳಿ ಮಧ್ಯೆ ಒಪ್ಪಂದದ ಪ್ರಕಾರ ರಸ್ತೆ ಅಂಚಿಗೆ ಪೈಪ್ ಅಳವಡಿಸಲು ಅನುಮತಿ ಕಲ್ಪಿಸಲಾಗುತ್ತಿದೆ. ರಸ್ತೆಗೆ ಹಾನಿಯಾಗದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು. ಕಾಮಗಾರಿಲ್ಲಿ ಲೋಪಗಳಿದ್ದಲ್ಲಿ ಸರಿಪಡಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗುವುದು. ಮಗೇಶ್ ಎಂ.ಸಹಾಯಕ ಅಭಿಯಂತ, ಲೋಕೋಪಯೋಗಿ ಇಲಾಖೆ, ಬದಿಯಡ್ಕ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net