

ಉತ್ತರಪ್ರದೇಶ: ಯುವತಿಯೊಬ್ಬಳು ಪ್ರಿಯಕರನ ತಂದೆಯೊಂದಿಗೆ ಓಡಿ ಹೋಗಿರುವ ವಿಚಿತ್ರ ಪ್ರೇಮ ಪ್ರಕರಣವೊಂದು ವರದಿಯಾಗಿದೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಕಾನ್ಪುರದಲ್ಲಿ.
20 ವರ್ಷದ ಯುವತಿ ಕಳೆದ ವರ್ಷ ತನ್ನ ಪ್ರಿಯಕರ ಅಮಿತ್ ಮನೆಗೆ ಬಂದಿದ್ದಾಳೆ. ಈ ವೇಳೆ ಪ್ರಿಯಕರನ ತಂದೆ ಕಮಲೇಶ್ ಎಂಬುವರ ಪರಿಚಯವಾಗಿದ್ದು, ಇಬ್ಬರೂ ಮಾತನಾಡಲು ಪ್ರಾರಂಭಿಸಿದ್ದಾರೆ. ಬಳಿಕ ಯಾರಿಗೂ ಗೊತ್ತಾಗದಂತೆ ಕಳೆದ ವರ್ಷ ಮನೆಯಿಂದ ಓಡಿ ಹೋಗಿ ತಲೆ ಮರೆಸಿಕೊಂಡಿದ್ದರು ಎಂದು ವರದಿಯಾಗಿದೆ.
ಕಾಣೆಯಾಗಿರುವ ಬಗ್ಗೆ ಯುವತಿಯ ಮನೆಯವರು ಚಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ಕೈಗೆತ್ತಿಕೊಂಡ ಪೊಲೀಸರು ಇದೀಗ ಕಳೆದ ಮಾರ್ಚ್ 20 ರಂದು ಓಡಿ ಹೋಗಿದ್ದ ಜೋಡಿಯನ್ನು ದೆಹಲಿಯಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿರುವುದು ವರದಿಯಾಗಿದೆ.
ಕಾನ್ಪುರದಿಂದ ಓಡಿ ಬಂದ ಈ ಜೋಡಿ ಸುಮಾರು ಒಂದು ವರ್ಷಗಳಷ್ಟು ಕಾಲ ದೆಹಲಿಯಲ್ಲಿ ವಾಸವಾಗಿದ್ದರು. ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದು, ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)