

ಧರ್ಮಶಾಲಾ: ಕನ್ನಡಿಗ ದೇವದತ್ ಪಡಿಕ್ಕಲ್ (65 ರನ್, 103 ಎಸೆತ, 10 ಬೌಂಡರಿ, 1 ಸಿಕ್ಸರ್) ಕಳೆದ 37 ವರ್ಷಗಳಲ್ಲಿ ಭಾರತ ಪರ ಪದಾರ್ಪಣೆಯ ಟೆಸ್ಟ್ನಲ್ಲೇ 4ನೇ ಕ್ರಮಾಂಕದಲ್ಲಿ ಆಡಿದ ಮೊದಲ ಬ್ಯಾಟರ್ ಎನಿಸಿದರು. ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಅವರಂಥ ಬ್ಯಾಟರ್ಗಳು ಟೆಸ್ಟ್ ಕ್ರಿಕೆಟ್ನಲ್ಲಿ ಈ ಕ್ರಮಾಂಕದಲ್ಲೇ ಹೆಚ್ಚಿನ ರನ್ ಸಿಡಿಸಿದ್ದಾರೆ. ಆದರೆ, ಪಡಿಕ್ಕಲ್ಗೆ ಮುನ್ನ 1988ರಲ್ಲಿ ಕೊನೆಯದಾಗಿ ಡಬ್ಲ್ಯುವಿ ರಾಮನ್ ಕೊನೆಯದಾಗಿ ಪದಾರ್ಪಣೆಯ ಟೆಸ್ಟ್ನಲ್ಲೇ 4ನೇ ಕ್ರಮಾಂಕದಲ್ಲಿ ಆಡಿದ್ದರು. ಸಚಿನ್, ಕೊಹ್ಲಿಗೂ ಪದಾರ್ಪಣೆಯ ಟೆಸ್ಟ್ನಲ್ಲಿ 4ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.
ಇದಕ್ಕೆ ಮುನ್ನ ಸಿಕೆ ನಾಯ್ಡು, ವಿಜಯ್ ಹಜಾರೆ, ಹೇಮು ಅಧಿಕಾರಿ, ಮನ್ಸೂರ್ ಅಲಿ ಖಾನ್ ಪಟೌಡಿ, ಜಿಆರ್ ವಿಶ್ವನಾಥ್ರಂಥ ದಿಗ್ಗಜರು ಚೊಚ್ಚಲ ಟೆಸ್ಟ್ನಲ್ಲೇ 4ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದಿದ್ದರು. ಈ ಪೈಕಿ ಪಡಿಕ್ಕಲ್ (65) ಪದಾರ್ಪಣೆ ಟೆಸ್ಟ್ನಲ್ಲಿ 4ನೇ ಕ್ರಮಾಂಕದಲ್ಲಿ 2ನೇ ಗರಿಷ್ಠ ರನ್ ಗಳಿಸಿದ ಭಾರತೀಯರಾಗಿದ್ದಾರೆ. ಮತ್ತೋರ್ವ ಕನ್ನಡಿಗ ಜಿಆರ್ ವಿಶ್ವನಾಥ್ 1969ರಲ್ಲಿ ಕಾನ್ಪುರದಲ್ಲಿ ಆಸೀಸ್ ವಿರುದ್ಧ ಪದಾರ್ಪಣೆಯ ಪಂದ್ಯದಲ್ಲೇ 137 ರನ್ ಗಳಿಸಿದ್ದು ಸರ್ವಾಧಿಕವೆನಿಸಿದೆ.
ಪಂದ್ಯಕ್ಕೆ ಮುನ್ನಾದಿನ ಅಭ್ಯಾಸದ ವೇಳೆ ರಜತ್ ಪಾಟೀದಾರ್ ಗಾಯಗೊಂಡಿದ್ದರಿಂದ ನನಗೆ ರಾತ್ರಿಯೇ, ನಾನು ಆಡಲೂಬಹುದು ಎಂಬ ಸಂದೇಶ ಬಂದಿತ್ತು. ನಾನಾಗ ನರ್ವಸ್ ಆಗಿದ್ದೆ. ರಾತ್ರಿ ನಿದ್ರಿಸುವುದೇ ಕಷ್ಟವಾಗಿತ್ತು. ಆದರೆ ಅದನ್ನು ನಾನು ಆನಂದಿಸಿದೆ. ನನ್ನ ಮೊದಲ ಬೌಂಡರಿ ಹೆಚ್ಚು ಖುಷಿ ನೀಡಿತು ಎಂದು ದೇವದತ್ ಪಡಿಕ್ಕಲ್ ಹೇಳಿದ್ದಾರೆ.