

ವಿಜಯಪುರ: ಸರ್ವಾಧ್ಯಕ್ಷರ ಭವ್ಯ ಮೆರವಣಿಗೆ, ವಿವಿಧ ಕಲಾ ತಂಡಗಲು, ನೃತ್ಯ, ವಾದ್ಯಗಳ ಸದ್ದು, ಕೆಂಪು-ಹಳದಿ ಬಾವುಟಗಳ ಪ್ರದರ್ಶನ, ಕವಿಗೋಷ್ಠಿ, ವಿಚಾರಗೋಷ್ಠಿ ಹಾಗೂ ತಾಯಿ ಕನ್ನಡ ಭುವನೇಶ್ವರಿಯ ಉದ್ಘೋಷ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ಜಿಲ್ಲಾ ಮಟ್ಟದ 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ಚಾಲನೆ ಪಡೆದುಕೊಂಡಿತು.
ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಿರ್ಮಾಣಗೊಂಡ ಪರಮಪೂಜ್ಯ ಸಿದ್ಧೇಶ್ವರ ಸ್ವಾಮೀಜಿಗಳ ವೇದಿಕೆಯಲ್ಲಿ ಸೋಮವಾರದಿಂದ ನಡೆಯಲಿರುವ ಎರಡು ದಿನದ ಮೇಳಕ್ಕೆ ಸೋಮವಾರ ಭರ್ಜರಿ ಚಾಲನೆ ನೀಡಲಾಯಿತು. ಸಮ್ಮೇಳನದ ಸರ್ವಾಧ್ಯಕ್ಷ ಶ್ರೀ ಮನಿಪ್ರ ಚನ್ನಬಸವ ಮಹಾಸ್ವಾಮಿಗಳನ್ನು ಅಲಂಕೃತ ಸಾರೋಟದಲ್ಲಿ ಭವ್ಯ ಮೆರವಣಿಗೆ ಮೂಲಕ ಸಮ್ಮೇಳನಕ್ಕೆ ಕರೆತಂದ ರೀತಿ ಜನಮನಸೂರೆಗೊಂಡಿತು.
ನಗರದ ಮಹಾತ್ಮ ಗಾಂಧಿ, ಜಗಜ್ಯೋತಿ ಬಸವೇಶ್ವರ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್, ಸಂತ ಶ್ರೇಷ್ಠ ಕನಕದಾಸ ಹಾಗೂ ಮಹರ್ಷಿ ವಾಲ್ಮೀಕಿ ವೃತ್ತದ ಮಾರ್ಗವಾಗಿ ಕಂದಗಲ್ಲ ಹನುಂತರಾಯ ರಂಗಮಂದಿರ ತಲುಪಿದ ಮೆರವಣಿಗೆಗೆ ಭರ್ಜರಿ ಸ್ಪಂದನೆ ಸಿಕ್ಕಿತು. ಮಾರ್ಗದುದ್ದಕ್ಕೂ ಕನ್ನಡ ಬಾವುಟಗಳು ರಾರಾಜಿಸಿದವು. ಕನ್ನಡ ಪ್ರೇಮಿಗಳು ಕೆಂಪು-ಹಳದಿ ಶಲ್ಯ ಹಾಕಿ ಕಂಗೊಳಿಸಿದರು. ಡೊಳ್ಳು ಕುಣಿತ, ಹಲಗೆ ಮೇಳ, ಚಿಕ್ಕ ಹಲಗೆ ಮೇಳ, ಜಗ್ಗಲಿಗೆ ಮೇಳ ಹೀಗೆ ನಾನಾ ಕಲಾಪ್ರಕರಗಳು ಗಮನ ಮೈ-ಮನ ತಣಿಸಿದವು.
ಉದ್ಘಾಟನೆ ಕಾರ್ಯಕ್ರಮದ ಬಳಿಕ ನಡೆದ ವಿವಿಧ ಗೋಷ್ಠಿಗಳು ಜನರ ಜ್ಞಾನ ದಾಹ ತಣಿಸಿದವಲ್ಲದೇ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಕರೆದೊಯ್ಯುವಲ್ಲಿ ಸಫಲವಾದವು. ಕವಿಗೋಷ್ಠಿ, ರಸಮಂಜರಿ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು. ಇಡೀ ದಿನ ರಂಗಮಂದಿರ ಕನ್ನಡಾಸಕ್ತರಿಂದ, ಕನ್ನಡ ಪ್ರೇಮಿಗಳಿಂದ, ಸಾಹಿತಿಗಳು ಹಾಗೂ ಚಿಂತಕರಿಂದ ತುಂಬಿ ತುಳುಕಿತು.
ಪುಸ್ತಕ ಮಳಿಗೆಗಳು, ಖಾದಿ ಬಟ್ಟೆಗಳ ಮಾರಾಟ ಮತ್ತು ಪ್ರದರ್ಶನ, ಗೊಂಬೆಗಳ ಮಾರಾಟ ಮಳಿಗೆ, ಸ್ವದೇಶಿ ಉತ್ಪನ್ನಗಳು ಹೀಗೆ ವಿವಿಧ ಮಳಿಗೆಗಳು ಜನರಿಂದ ಕಿಕ್ಕಿರಿದು ತುಂಬಿದ್ದವು. ಉಪಹಾರ ಹಾಗೂ ಊಟದ ವ್ಯವಸ್ಥೆ ಭರ್ಜರಿಯಾಗಿತ್ತು. ಉತ್ತರ ಕರ್ನಾಟಕದ ಆಹಾರ ಶೈಲಿಗೆ ಜನ ಮಾರುಹೋದರು. ಜಿಲ್ಲೆ ಸೇರಿದಂತೆ ನೆರೆಯ ಬಾಗಲಕೋಟೆ, ಬೆಳಗಾವಿ ಹಾಗೂ ಕಲಬುರಗಿ ಜಿಲ್ಲೆಯ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.