More

    ಕಿರುತೆರೆಯ ಸುಂದರಿಯರು ಕ್ವಾರಂಟೈನ್​ ಹೊತ್ತಲ್ಲಿ ಏನೆಲ್ಲ ಮಾಡುತ್ತಿದ್ದಾರೆ? ಅವರೇ ನೀಡಿದ ಉತ್ತರ ಹೀಗಿದೆ ನೋಡಿ..

    ಅಡುಗೆ ಮತ್ತು ಪೇಂಟಿಂಗ್​ನಲ್ಲಿ ಗಟ್ಟಿಮೇಳ ನಿಶಾ ನಿರತ

    ಕ್ವಾರಂಟೈನ್​ ಹಿನ್ನೆಲೆಯಲ್ಲಿ ಸದ್ಯ ಮನೆಯಲ್ಲಿಯೇ ಇರುವ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಿಶಾ ಸದ್ಯ ಕಲಿಕೆ ಮೂಡ್​ನಲ್ಲಿದ್ದಾರೆ. ಇಷ್ಟು ದಿನ ಬರೀ ಆ್ಯಕ್ಷನ್ ಕಟ್​ ಕೇಳಿ ಸಾಕಾಗಿದ್ದ ಅವರು, ಈಗ ಅಡುಗೆ ಮನೆ ಸೇರಿದ್ದಾರೆ. ಬಗೆಬಗೆ ಅಡುಗೆ ಮಾಡುವುದರಲ್ಲಿ ಬಿಜಿಯಾಗಿದ್ದಾರೆ. ಜತೆಗೆ ಚಿತ್ರಕಲೆಯಲ್ಲಿಯೂ ಆಸಕ್ತಿ ಹೊಂದಿರುವ ನಿಶಾ, ಬಿಡುವಿನ ಸಮಯವನ್ನು ಪೇಂಟಿಂಗ್​ ಮಾಡುವ ಮೂಲಕ ಕಳೆಯುತ್ತಾರಂತೆ. ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡುವುದರಲ್ಲಿಯೂ ನಿರತರಾಗಿದ್ದಾರೆ. ಮನೆಯಲ್ಲಿ ಮುದ್ದು ಶ್ವಾನದ ಜತೆಗೆ ಒಂದಷ್ಟು ಹೊತ್ತು ಆಟ ಆಡುವುದು ನಿಶಾ ಇಷ್ಟದ ಕೆಲಸ. ಕಳೆದ ಹಲವು ದಿನಗಳಿಂದ ಮನೆಯಲ್ಲಿ ಇರುವುದರಿಂದ ಧಾರಾವಾಹಿ ದಿನಗಳು ನೆನಪಾಗುತ್ತಿವೆಯಂತೆ.

    ಕ್ವಿಜ್​ ಸ್ಪರ್ಧೆ ಆಯೋಜಿಸಿದ್ದಾರೆ ಸುಬ್ಬಲಕ್ಷ್ಮೀ ದೀಪಾ ಭಾಸ್ಕರ್​..

    ಆನ್​ ಸ್ಕ್ರೀನ್​ನಲ್ಲಿ ಭರ್ಜರಿ ಅಡುಗೆ ಮಾಡುವ ಸುಬ್ಬಲಕ್ಷ್ಮೀ ಸಂಸಾರ ಧಾರಾವಾಹ ಖ್ಯಾತಿಯ ದೀಪಾ ಭಾಸ್ಕರ್​, ಈಗ ಆಫ್​ ಸ್ಕ್ರೀನ್​ನಲ್ಲಿ ಅವೆಲ್ಲವನ್ನು ಕಲಿಯುವುದರಲ್ಲಿ ಬಿಜಿಯಾಗಿದ್ದಾರೆ. ಅಂದರೆ, ಕ್ವಾರಂಟೈನ್​ ಹಿನ್ನೆಲೆಯಲ್ಲಿ ಮನೆಯಲ್ಲಿ ವಿವಿಧ ಬಗೆಯ ಅಡುಗೆ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ ಇನ್ಸ್ಟಾಗ್ರಾಂನಲ್ಲಿ ಕ್ವಿಜ್​ ಶುರುಮಾಡಿದ್ದಾರೆ. 21 ದಿನಗಳ ಕಾಲ ತಮ್ಮ ಅಧಿಕೃತ ಇನ್ಸ್ಟಾದಲ್ಲಿ ನಿತ್ಯ ಒಂದೊಂದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸರಿಯಾದ ಉತ್ತರ ಕೊಟ್ಟವರಿಗೆ ಸಕಲೇಶಪುರದ ಬಳಿ ಇರುವ ಹಾನ್​ಬಾಲ್​ ಚಿಕ್ಕಿ ಬಾಕ್ಸ್ ನೀಡುವುದಾಗಿ ಹೇಳಿದ್ದಾರೆ.

    ಸ್ಕ್ರಿಪ್ಟ್​ ಬರವಣಿಗೆಯಲ್ಲಿ ಕನ್ನಡತಿ ರಂಜನಿ ಬಿಜಿ

    ಸಿನಿಮಾಕ್ಕೂ ಸೈ ಸೀರಿಯಲ್​ಗೂ ಜೈ ಎನ್ನುತ್ತಿರುವ ನಟಿ ರಂಜನಿ ರಾಘವನ್​ ಕ್ವಾರಂಟೈನ್ ಸಮಯವನ್ನು ಸರಿಯಾಗಿಯೇ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಸಿಕೊಂಡು ಒಂದಷ್ಟು ಕಥೆಯ ಸಿದ್ಧಪಡಿಸುವಲ್ಲಿಯೂ ಬಿಜಿಯಾಗಿದ್ದಾರೆ. ನಾನು ಮನೆ ಕೆಲಸ ಮಾಡುವುದು ತುಂಬ ಕಡಿಮೆ. ಈಗ ಆ ಅವಕಾಶ ಸಿಕ್ಕಿದೆ ಅಮ್ಮನ ಜತೆ ಒಂದಷ್ಟು ಹೊತ್ತು ಸಹಾಯಕ್ಕೆ ನಿಲ್ಲುತ್ತೇನೆ. ಮಾ. 29ಕ್ಕೆ ನನ್ನ ಜನ್ಮದಿನವಿತ್ತು. ಮೊದಲ ಬಾರಿ ಹೊರಗೆ ಹೋಗದೆ ಆಚರಣೆ ಮಾಡಿಕೊಂಡಿದ್ದೇನೆ. ಈ ರೀತಿಯ ಲಾಕ್​ಡೌನ್​ನಿಂದ ಕೇವಲ ಜನರಿಗಷ್ಟೇ ಅಲ್ಲ ಪರಿಸರಕ್ಕೂ ಅನುಕೂಲವಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ಬಂದಿದೆ. ಕ್ರೈಂ ಕಡಿಮೆ ಆಗಿದೆ. ಸೋ ಒಟ್ಟಿನಲ್ಲಿ ಆಗೋದೆಲ್ಲ ಒಳ್ಳೆಯದಕ್ಕೆ ಎನ್ನುತ್ತ ಸಾಗಬೇಕು ಎಂಬುದು ರಂಜಿನಿ ಮಾತು. ಎಲ್ಲ  ಅಂದುಕೊಂಡಂತೆ ಆಗಿದ್ದರೆ ಮಾ. 27ಕ್ಕೆ ರಂಜನಿ ನಟನೆಯ ಟಕ್ಕರ್​ ಸಿನಿಮಾ ಬಿಡುಗಡೆ ಆಗಬೇಕಿತ್ತು. ಕರೊನಾ ಹಿನ್ನೆಲೆಯಲ್ಲಿ ಬಿಡುಗಡೆ ಮುಂದಕ್ಕೆ ಹೋಗಿದೆ.

    ಸಿನಿಮಾ ನೋಡುವುದೇ ಪಾರು ಪೈ ಕೆಲಸ…

    ಪಾರು ಧಾರಾವಾಹಿ ಮೂಲಕ ಮನೆಮನಕ್ಕೂ ಹತ್ತಿರವಾದ ನಟಿ ಮೋಕ್ಷಿತಾ ಪೈ, ಸದ್ಯ ಸಿನಿಮಾ ನೋಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಇಷ್ಟು ದಿನ ಶೂಟಿಂಗ್​ನಲ್ಲಿಯೇ ಬಿಜಿಯಾಗಿರುತ್ತಿದ್ದ ಅವರು ಮೊದಲ ಬಾರಿ ಇಷ್ಟೊಂದು ರಜೆ ಸಿಕ್ಕಿದ್ದರಿಂದ ಹಲವು ಆ್ಯಕ್ಟಿವಿಟಿಗಳಲ್ಲೂ ನಿರತರಾಗಿದ್ದಾರೆ. ಯೋಗ, ಅಡುಗೆ ಕಲಿಕೆ, ಮನೆಮಂದಿ ಜತೆಗೆ ಚೌಕಾಬಾರ ಆಟವನ್ನೂ ಮಿಸ್​ ಮಾಡುತ್ತಿಲ್ಲವಂತೆ. ಇಲ್ಲಿಯವರೆಗೂ ಒಂದು ವಾರ ಕಳೆದಿದ್ದೇವೆ. ಇದೇ ಮುಂದುವರಿದರೆ, ಬೇಸರ ಆಗಲಿದೆ. ಆದಷ್ಟು ಬೇಗ ಇದೆಲ್ಲ ಮುಗಿಯಲಿ. ಶೂಟಿಂಗ್​ನಲ್ಲಿ ಭಾಗವಹಿಸಬೇಕು ಎನ್ನುವ ದಾವಂತದಲ್ಲಿದ್ದಾರೆ ಮೋಕ್ಷಿತಾ.

    ಶ್ವಾನಗಳಿಗೆ ಆಹಾರ ವಿತರಿಸಿದ ಜೊತೆ ಜೊತೆಯಲಿ ಮೇಘಶ್ರೀ

    ಇತ್ತೀಚೆಗಷ್ಟೇ ಬೀದಿ ಬದಿಯ ನಾಯಿಗಳಿಗೆ ಆಹಾರ ನೀಡುವ ಮೂಲಕ ಸ್ಯಾಂಡಲ್​ವುಡ್ ನಟಿಯರಾದ ಸಂಯುಕ್ತಾ ಹೊರನಾಡು ಮತ್ತು ಐಂದ್ರಿತಾ ರೈ ಪ್ರಾಣಿ ಪ್ರೀತಿ ಮೆರೆದಿದ್ದರು. ಈಗ ಅದೇ ರೀತಿ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಶ್ರೀ ಶೆಟ್ಟಿ ಶ್ವಾನಗಳಿಗೆ ಆಹಾರ ಒದಗಿಸುತ್ತಿದ್ದಾರೆ. ಮನೆ ಅಕ್ಕಪಕ್ಕದಲ್ಲಿ ಕಾಣಿಸುವ ಶ್ವಾನಗಳನ್ನು ಕರೆದು ಆಹಾರ ಹಾಕುತ್ತಿದ್ದಾರೆ. ಇದರ ಜತೆಗೆ ಮನೆಯಲ್ಲಿಯೂ ಫ್ಯಾಮಿಲಿ ಜತೆಯಲ್ಲಿ ಕ್ವಾಲಿಟಿ ಸಮಯ ಕಳೆಯುತ್ತಿದ್ದಾರೆ.

    https://www.vijayavani.net/sharikh-and-his-wife-gouri-khan-donates-huge-amount-to-several-charity/

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts