ನಾಡು ನುಡಿಯ ಅಸ್ಮಿತೆ ಕನ್ನಡ ಸಾಹಿತ್ಯ ಪರಿಷತ್ತು

Untitled design (2)
Published on

ಕನ್ನಡ ಭಾಷೆ, ಸಾಹಿತ್ಯ, ಕಲೆ, ಜಾನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ 1915ರಲ್ಲಿ ಹುಟ್ಟಿಕೊಂಡದ್ದು ಕನ್ನಡ ಸಾಹಿತ್ಯ ಪರಿಷತ್ತು ಇಂದು (ಮೇ 5) 111ನೆಯ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಏಳು ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎನ್ನಿಸಿಕೊಂಡಿರುವ ಇದು ಕನ್ನಡಿಗರೆಲ್ಲರ ಮಾತೃಸಂಸ್ಥೆ ಕೂಡ ಹೌದು. ಕನ್ನಡಕ್ಕಾಗಿ ಕೆಲಸ ಮಾಡಲು ಇರುವ ಏಕೈಕ ಸ್ವಾಯತ್ತ ಸಂಸ್ಥೆ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ಇದರ ಅಧ್ಯಕ್ಷರು ನೇರವಾಗಿ ಕನ್ನಡದ ಮತದಾರರಿಂದ ಆಯ್ಕೆಯಾಗಿರುತ್ತಾರೆ. ಹೀಗಾಗಿ ಕನ್ನಡಿಗರೆಲ್ಲರೂ ತಮ್ಮ ಬದುಕು-ಭವಿಷ್ಯದ ಪ್ರಶ್ನೆ ಬಂದಾಗ ಕನ್ನಡ ಸಾಹಿತ್ಯ ಪರಿಷತ್ತಿನ ಕಡೆ ಭರವಸೆಯಿಂದ ನೋಡುತ್ತಾರೆ.

ಆರಂಭದಲ್ಲಿ ಇದಕ್ಕೆ ‘ಕರ್ಣಾಟಕ ಸಾಹಿತ್ಯ ಪರಿಷತ್ತು’ ಎಂಬ ಹೆಸರಿತ್ತು. 1915ರ ಮೇ 5ರಂದು ಬೆಂಗಳೂರಿನಲ್ಲಿ ಇದು ಅಸ್ತಿತ್ವಕ್ಕೆ ಬಂದಾಗ ಎಚ್.ವಿ ನಂಜುಂಡಯ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷರಾದರು. 1920ರಿಂದ 1946ರವರೆಗೆ ಮೈಸೂರು ರಾಜಮನೆತನದ ಎಂ.ಕಾಂತರಾಜೇ ಅರಸ್ ಅಧ್ಯಕ್ಷರಾಗಿದ್ದರು. ತದನಂತರದಲ್ಲಿ ಕಂಠೀರವ ನರಸರಾಜ ಒಡೆಯರ್, ಜಯಚಾಮರಾಜ ಒಡೆಯರ್, ಬಸವಪ್ರಭು, ರಾಜಾ ಲಕ್ಷ್ಮಣ ಗೌಡ ಅಧ್ಯಕ್ಷರಾಗಿದ್ದು, ಕರ್ಪರ ಶ್ರೀನಿವಾಸರಾವ್, ಡಿ ವಿ ಗುಂಡಪ್ಪ, ಬಿ ಎಂ ಶ್ರೀ, ಮಾಸ್ತಿ ಉಪಾಧ್ಯಕ್ಷರಾಗಿ ಪರಿಷತ್ತನ್ನು ಕಟ್ಟಿ ಬೆಳೆಸಿದ್ದಾರೆ. ದಿವಾನ್ ಮಿರ್ಜಾ ಇಸ್ಮಾಯಿಲ್ ಅವರ ಸತತ ಪ್ರಯತ್ನದಿಂದಾಗಿ ಈಗಿರುವ ಕಟ್ಟಡದ ನಿವೇಶನ ಉಚಿತವಾಗಿ ದೊರೆಯಿತು. 1933ರಲ್ಲಿ ಅದೇ ಸ್ಥಳದಲ್ಲಿ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದ ನಿರ್ವಣವಾಯಿತು. ಇಂತಹ ಪರಿಷತ್ತಿಗೆ ಮೈಸೂರು ಸರ್ಕಾರ ಆಗಿನ ಕಾಲದಲ್ಲೇ 1800 ರೂಪಾಯಿಗಳ ಅನುದಾನವನ್ನು ನೀಡುತ್ತಿತ್ತು. ಪರಿಷತ್ತಿಗೆ ಲಾಂಛನವನ್ನು ನೀಡಿದವರು ಬಿ. ಎಂ. ಶ್ರೀ.

1938ರಲ್ಲಿ ಬಳ್ಳಾರಿಯಲ್ಲಿ ನಡೆದ ಸಮ್ಮೇಳನದಲ್ಲಿ ಕರ್ನಾಟಕ ಮತ್ತು ಕರ್ಣಾಟಕ ಎಂಬ ಪ್ರಯೋಗದ ಕುರಿತು ಎರಡೂ ಗುಂಪಿನ ನಡುವೆ ಸಹಮತ ಮೂಡದೆ (ಇದು ನೋಣದ ಗಲಾಟೆ ಎಂದೇ ಪ್ರಸಿದ್ಧ) ‘ಕರ್ಣಾಟಕ ಸಾಹಿತ್ಯ ಪರಿಷತ್ತು’ ‘ಕನ್ನಡ ಸಾಹಿತ್ಯ ಪರಿಷತ್ತು’ ಎಂದು ಹೆಸರನ್ನು ಬದಲಾಯಿಸಿಕೊಂಡಿತು. ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಪೈಕಿ ಮುಖ್ಯವಾದುದು ಅದರ ಪುಸ್ತಕ ಪ್ರಕಟಣೆ. ಪರಿಷತ್ತಿನ ಆರಂಭದ ವರ್ಷದಲ್ಲಿ ಯಾವುದೇ ಪ್ರಕಟಣೆಯನ್ನೂ ಹೊರತರಲು ಆಗಿರಲಿಲ್ಲ. ಕಾರಣ ಅದು ಸ್ಥಿರಗೊಳ್ಳಬೇಕಾಗಿತ್ತು. 1916ರಲ್ಲಿ ಪುಸ್ತಕ ಪ್ರಕಟಣೆಯನ್ನು ಆರಂಭಿಸಿತು. ಪರಿಷತ್ತು ಹೊರತಂದ ಮೊದಲ ಕೃತಿ: ವೈ.ಕೆ. ರಾಮಚಂದ್ರ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ ‘ಜೇಮ್ಸ್ ಏಬ್ರಾಮ್ ಗಾರ್ಫೀಲ್ಡ್ ಚರಿತೆ’. ನಂತರ ಅದರ ಪ್ರಕಟಣೆಗಳು ಒಂದೊಂದಾಗಿ ಹೊರಬಂದವು. ಪರಿಷತ್ತು ಇದುವರೆಗೆ ಸುಮಾರು 1750 ಕೃತಿಗಳನ್ನು ಪ್ರಕಟಿಸಿದೆ. ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಸಂಬಧಿಸಿದ ಕೆಲವು ಇಂಗ್ಲಿಷ್ ಕೃತಿಗಳೂ ಇದರಲ್ಲಿ ಸೇರಿವೆ. ಇವುಗಳಲ್ಲಿ ಹಲವು ಮರುಮುದ್ರಣಗಳನ್ನು ಕಂಡು ದಾಖಲೆ ಸ್ಥಾಪಿಸಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳ ಪೈಕಿ ಪರಿಷತ್ತನ್ನು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿಸಿದ್ದು ಅದು ಹೊರತಂದಿರುವ ಬಹೂಪಯೋಗಿ ನಿಘಂಟುಗಳು. ಇದರಲ್ಲಿ ಕನ್ನಡ-ಕನ್ನಡ ನಿಘಂಟಿನ ಪ್ರಕಟಣೆ ಮಹತ್ತ ್ವವಾದುದು. 45 ವರ್ಷಗಳ ಕಾಲ ಹತ್ತಿರ ಹತ್ತಿರ ನೂರು ಘನ ವಿದ್ವಾಂಸರ ಅಹರ್ನಿಶಿ ಬೌದ್ಧಿಕ ಶ್ರಮದ ಫಲವಾಗಿ ಒಟ್ಟು ಎಂಟು ಸಂಪುಟಗಳ 9200 ಪುಟಗಳ ಬೃಹತ್ ಸ್ವರೂಪದ ಕನ್ನಡ-ಕನ್ನಡ ನಿಘಂಟು ರೂಪಗೊಂಡಿದೆ. ಪರಿಷತ್ತಿನ ಮತ್ತೊಂದು ಮಹತ್ವದ ಪ್ರಕಟಣೆ ಸುಮಾರು 1450 ಪುಟಗಳಷ್ಟಿರುವ ಸಂಕ್ಷಿಪ್ತ ಕನ್ನಡ ನಿಘಂಟು. ವಿದ್ಯಾರ್ಥಿಗಳಿಗೆ ನೆರವಾಗುವಂತಹ ಸಣ್ಣ ಆಕಾರದ ‘ಕನ್ನಡ ರತ್ನಕೋಶ’ ಎಂಬ ನಿಘಂಟು ಪರಿಷತ್ತಿನ ಖ್ಯಾತಿಯನ್ನು ಮನೆಮನೆಗೂ ಹರಡಿತು.

ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿದ್ದೇ ಮೊದಲನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ. ಅಲ್ಲಿಂದ ಮುಂದೆ ನಿರಂತರವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸುತ್ತ ಬಂದಿದ್ದು, ಅವುಗಳು ಕನ್ನಡ ನಾಡು-ನುಡಿಗಳ ಕುರಿತು ಚಿಂತನೆ ನಡೆಸುವ ಮಹತ್ವದ ಕೊಡುಗೆ ಜೊತೆಗೆ ಕನ್ನಡಿಗರು ಒಂದಾಗಿ ಸೇರುವ ತಾಣಗಳಾಗಿವೆ. ಕರ್ನಾಟಕ ರಾಜ್ಯದ ಏಕೀಕರಣ ಮತ್ತು ನಾಮಕರಣಕ್ಕೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನೀಡಿದ ಕೊಡುಗೆ ಅಪಾರ. ಹೀಗೆ ಹಲವು ಮಹತ್ವದ ಕೊಡುಗೆಗಳನ್ನು ನೀಡಿದ ಕನ್ನಡ ಸಾಹಿತ್ಯ ಪರಿಷತ್ತು, 110 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬಂದಿರುವುದೇ ದೊಡ್ಡ ಹೆಗ್ಗಳಿಕೆ.

ದಶಕಗಳ ಹಿಂದೆ ಖ್ಯಾತನಾಮರೊಬ್ಬರ ಅಧಿಕಾರಾವಧಿಯಲ್ಲಿ ನಡೆದ ಅನ್ಯಾಯ, ಅಕ್ರಮ, ಅವ್ಯವಹಾರ ಮತ್ತು ಆರ್ಥಿಕ ಅಶಿಸ್ತಿನ ಹಿನ್ನೆಲೆಯಲ್ಲಿ ತನಿಖೆಗೆ ಶ್ಯಾಮಸುಂದರ ಆಯೋಗ ರಚಿತವಾಗಿ ಅದರ ವರದಿ ಫಲವಾಗಿ ಆಡಳಿತಾಧಿಕಾರಿ ನೇಮಕವಾದ ಏಕೈಕ ಪ್ರಸಂಗ ಬಿಟ್ಟರೆ ಕನ್ನಡ ಸಾಹಿತ್ಯ ಪರಿಷತ್ತಿನ ಚರಿತ್ರೆ ಎಂದರೆ ಶುಭ್ರ ಶ್ವೇತಪತ್ರ. ನಾಡಿನ ಯಾವ ಸಂಸ್ಥೆಯ ಕುರಿತೂ ಇಂತಹ ಮಾತನ್ನು ಆಡುವುದು ಕಷ್ಟ ಎನ್ನುವುದೇ ಪರಿಷತ್ತಿನ ಮಹತ್ವವನ್ನು ಹೇಳುತ್ತದೆ.

(ಲೇಖಕರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net