ಬೀದಿ ನಾಯಿಗಳ ರಕ್ಷಣೆಗೆ ತಾರೆಯರ ಧ್ವನಿ: ಸುದೀಪ್​, ರಾಜ್​ ಶೆಟ್ಟಿ, ಸುಧಾರಾಣಿ ಏನಂದ್ರು...

dog 1
Published on

ಬೆಂಗಳೂರು: ರಾಷ್ಟ್ರಾದ್ಯಂತ ಬೀದಿ ನಾಯಿಗಳ ಕುರಿತ ಚರ್ಚೆ ಜೋರಾಗಿದೆ. ಅದಕ್ಕೆ ಕಾರಣ, ರಾಜಧಾನಿ ನವದೆಹಲಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂಬ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಸುಪ್ರೀಂ ಕೋರ್ಟ್ ‘ನವದೆಹಲಿಯಲ್ಲಿರುವ ಎಲ್ಲ ಬೀದಿನಾಯಿಗಳನ್ನು ಎಂಟು ವಾರದೊಳಗೆ ಹಿಡಿದು ಶಾಶ್ವತ ಆಶ್ರಯತಾಣಗಳಿಗೆ ಸ್ಥಳಾಂತರಿಸಬೇಕು’ ಎಂಬ ತೀರ್ಪು ನೀಡಿತ್ತು. ಈ ತೀರ್ಪಿಗೆ ಪರ-ವಿರೋಧ ವ್ಯಕ್ತವಾಗಿದ್ದವು. ಈ ಮಧ್ಯೆ ಹಲವು ಸಿನಿಮಾ ತಾರೆಯರು ಬೀದಿನಾಯಿಗಳ ಸಂರಕ್ಷಣೆಗೆ ಕರೆ ನೀಡಿದ್ದಾರೆ. ಸುದೀಪ್, ರಾಜ್ ಬಿ.ಶೆಟ್ಟಿ, ಶ್ರೀಲೀಲಾ, ಕೃತಿ ಸನನ್, ಶುಭಾ ಪೂಂಜಾ, ಮೇಘಾ ಶೆಟ್ಟಿ, ನಿಶ್ವಿಕಾ ನಾಯ್ಡು, ಸಂಜನಾ ಆನಂದ್, ಅಡಿವಿ ಶೇಷ್, ಅದ್ವಿತಿ ಶೆಟ್ಟಿ, ದೀಪಿಕಾ ದಾಸ್, ರಚನಾ ಇಂದರ್, ಅಮೃತಾ ಪ್ರೇಮ್, ಪ್ರಿಯಾಮಣಿ, ತಪಸ್ವಿನಿ ಪೂಣಚ್ಚ, ಬೃಂದಾ ಆಚಾರ್ಯ, ಶರಣ್ಯಾ ಶೆಟ್ಟಿ ಸೇರಿ ಹಲವರು ಬೀದಿ ನಾಯಿಗಳನ್ನು ರಕ್ಷಿಸುವಂತೆ ಧ್ವನಿಗೂಡಿಸಿದ್ದಾರೆ.

ದತ್ತು ತೆಗೆದುಕೊಳ್ಳಿ

ನಟ ಸುದೀಪ್ ಬೀದಿ ನಾಯಿಗಳನ್ನು ದತ್ತು ಪಡೆಯುವಂತೆ ಕರೆ ನೀಡಿದ್ದಾರೆ. ‘ದೆಹಲಿಯ ಬೀದಿನಾಯಿಗಳಿಗೆ ಶಾಶ್ವತ ಆಶ್ರಯ ನೀಡುವ ಕುರಿತ ಸುಪ್ರೀಂ ಕೋರ್ಟ್ ತೀರ್ಪಿಗೆ ಅದರದ್ದೇ ಆದ ಕಾರಣವಿರಬಹುದು. ಆದರೆ, ಇದು ಬೀದಿ ನಾಯಿಗಳ ಜೀವನದ ಮೇಲೆ ಪರಿಣಾಮ ಬೀರುವ ಕಳವಳವನ್ನು ಹುಟ್ಟುಹಾಕುತ್ತದೆ. ನಮ್ಮ ಕುಟುಂಬದ ಕೆಲವರು ಬೀದಿ ನಾಯಿಗಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಶ್ವಾನಗಳು ನಮಗೆ ನೀಡುವ ಪ್ರೀತಿ ಮತ್ತು ನಿಷ್ಠೆ ಅಪಾರವಾದುದು. ಅವು ಬೀದಿಯಲ್ಲಿ ಬೆಳೆಯುವುದನ್ನು ಬಯಸಿದ್ದಲ್ಲ. ನಾವು ಮನಸ್ಸು ಮಾಡಿದರೆ ಅವುಗಳಿಗೆ ಆಶ್ರಯ ನೀಡಬಹುದು. ಧ್ವನಿ ಇಲ್ಲದ ಜೀವಿಗಳಿಗೆ ಧ್ವನಿಯಾಗೋಣ, ಬೀದಿ ನಾಯಿಗಳನ್ನು ದತ್ತು ಪಡೆದರೆ ತುಂಬಾ ಒಳ್ಳೆಯದು’ ಎಂದು ಪೋಸ್ಟ್ ಮಾಡಿದ್ದಾರೆ.

ಪ್ರತಿ ಜೀವಿಗೂ ಬದುಕುವ ಹಕ್ಕಿದೆ

ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಇನ್ನು ಈ ನಾಯಿಗಳು ನನಗೆ ನೆಮ್ಮದಿ ನೀಡುವ ಜೀವಿಗಳು. ನನಗಷ್ಟೇ ಅಲ್ಲ, ನೋವಿನಲ್ಲಿರುವ ಅಸಂಖ್ಯ ಜನರಿಗೆ ಇವು ನೆರವಾಗಿವೆ. ನಾನು ಏಳು ಬೀದಿನಾಯಿಗಳನ್ನು ಸಾಕುತ್ತಿದ್ದೇನೆ. ಸಮಾಜ ಈಗ ಬೀದಿನಾಯಿಗಳ ನೆರವಿಗೆ ಬಂದರೆ, ಇಂತಹ ಕಠಿಣ ಕ್ರಮಗಳ ಅವಶ್ಯಕತೆ ಬರುವುದಿಲ್ಲ’ ಎಂದು ನಟ, ನಿರ್ದೇಶಕ ರಾಜ್ ಬಿ.ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.

ಈ ರೀತಿಯ ಪರಿಹಾರ ಸಲ್ಲದು

‘ಈ ಭೂಮಿ ಮೇಲೆ ಮನುಷ್ಯನಷ್ಟೇ ಬದುಕುವ ಹಕ್ಕು ಬೇರೆ ಪ್ರಾಣಿಗಳಿಗಿದೆ. ಮನುಷ್ಯ ತನ್ನ ಸ್ವಾರ್ಥ, ದುರಾಸೆಯಿಂದಾಗಿ ಪ್ರಕೃತಿಯ ಸಮತೋಲನವನ್ನು ತಲೆಕೆಳಗಾಗಿಸುತ್ತಿದ್ದಾನೆ. ಬೀದಿನಾಯಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮುಂದಾಗುತ್ತಿದ್ದಾರೆ. ಬೀದಿನಾಯಿಗಳಿಂದ ತೊಂದರೆ ಅನುಭವಿಸದವರ ಬಗ್ಗೆ ನನಗೆ ಕಾಳಜಿ ಇದೆ. ಆದರೆ, ಅದರಿಂದಾಗಿ ಮೂಕಪ್ರಾಣಿಗಳ ಮೇಲಿನ ಸವಾರಿ ಸರಿಯಾದುದಲ್ಲ. ಪ್ರಾಣಿಗಳ ಜೀವನದ ಬಗ್ಗೆ ಸರಿಯಾಗಿ ಅರಿತು ಅವುಗಳ ಸಂರಕ್ಷಣೆಗೆ ಮುಂದಾಗಬೇಕಿದೆ’ ಎಂದು ನಟಿ ಸುಧಾರಾಣಿ ಬೀದಿನಾಯಿಗಳ ಪರ ಧ್ವನಿಯಾಗಿದ್ದಾರೆ.

ಅವು ಎಲ್ಲಿಗೆ ಹೋಗಬೇಕು?

ನಾನು ಮೂರು ಬೀದಿ ನಾಯಿಗಳನ್ನು ಸಾಕುತ್ತಿದ್ದೇನೆ. ಇವುಗಳಿಂದ ಪ್ರೀತಿ ಹಾಗೂ ಭದ್ರತೆ ಸಿಗುತ್ತಿದೆ. ಆದರೆ, ನಾಯಿಗಳನ್ನು ಬೇರೆಡೆ ಸ್ಥಳಾಂತರಿಸಲು ಮುಂದಾದರೆ, ಅವು ಎಲ್ಲಿಗೆ ಹೋಗಬೇಕು? ಬೀದಿ ನಾಯಿಗಳಿಂದ ಯಾವುದೇ ಅಪಾಯವಿಲ್ಲ. ಅವುಗಳು ಸಹ ನಮ್ಮ ನಡುವೆಯೇ ಬದುಕಲು ಯತ್ನಿಸುತ್ತಿವೆ. ಆ ಕಾಲಭೈರವನ ಜತೆಗೂ ಸದಾಕಾಲ ಒಂದು ನಾಯಿ ಇರುತ್ತದೆ. ಹೀಗಿರುವಾಗ ನಾವೇಕೆ ಅವುಗಳ ಪರ ನಿಲ್ಲಬಾರದು?

ಲಿಯೋನಿಲ್ಲ ಶ್ವೇತಾ ಡಿ’ಸೋಜಾ, ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net