ವಿಜಯವಾಣಿ ಸುದ್ದಿಜಾಲ ಬೆಂಗಳೂರು

“ಎಲ್ಲವೂ ಕ್ಷಣಿಕ. ಕೆಟ್ಟ ದಿನಗಳೂ ಇರುತ್ತವೆ. ಉತ್ತಮ ದಿನಗಳೂ ಇರುತ್ತವೆ. ಅದು ಕಷ್ಟಸಾಧ್ಯ. 15 ವರ್ಷಗಳಲ್ಲಿ ಎಲ್ಲವನ್ನೂ ನೋಡಿದ್ದೇನೆ. ಹಿಟ್- ಫ್ಲಾಪ್, ಸೋಲು-ಗೆಲುವು, ಏರಿಳಿತ ಎಲ್ಲ ಅನುಭವಗಳೂ ಆಗಿವೆ. ಆದರೆ, ನಾವು ಸ್ವಯಂ ಪ್ರೇರಿತರಾಗಿ ನಾವು ಕೆಲಸ ಮಾಡುತ್ತಾ ಸಾಗಬೇಕು’ ಎಂದು ಮಾತಿಗಿಳಿಯುತ್ತಾರೆ ನಟಿ ರಾಗಿಣಿ ದ್ವಿವೇದಿ. ಅಂದಹಾಗೆ, ಅವರು ಮತ್ತೆ ಬಿಜಿಯಾಗಿದ್ದಾರೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಜತೆಗೆ ಸಂಸ್ಕೃತದಲ್ಲೂ ನಟಿಸುತ್ತಿದ್ದಾರೆ.
ವಿಶೇಷ ಅಂದರೆ ಕೇವಲ 10 ದಿನಗಳ ಅಂತರದಲ್ಲಿ ಅವರ ಮೂರು ಕನ್ನಡ ಚಿತ್ರಗಳು ಘೋಷಣೆಯಾಗಿವೆ. ಮೇ 1ರಂದು “ಸಿಂಧೂರಿ’, ಮೇ 4ರಂದು “ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರಗಳ ಮುಹೂರ್ತ ನೆರವೇರಿದ್ದು, ಮೇ 7ರಂದು “ಜಾವಾ’ ಸಿನಿಮಾ ಅನೌನ್ಸ್ ಆಗಿದೆ. “ಕೆಲ ತಿಂಗಳಿನಿಂದ ಕನ್ನಡದಲ್ಲಿ ಸಿನಿಮಾ ಸೈನ್ ಮಾಡಿರಲಿಲ್ಲ. ಸುಮ್ಮನೇ ಅವಕಾಶ ದೊರೆಯಿತು ಅಂತ ಮಾಡುವುದಕ್ಕಿಂತ ಒಳ್ಳೆ ಕಥೆ, ಪಾತ್ರದಲ್ಲಿ ನಟಿಸಬೇಕು ಅಂತ ಕಾಯುತ್ತಿದ್ದೆ. ಇದೀಗ ಸೆಟ್ಟೇರಿರುವ ಮೂರು ಚಿತ್ರಗಳು ವಿಭಿನ್ನ ಕಥೆ, ಪಾತ್ರಗಳಿಂದ ಕೂಡಿವೆ’ ಎಂದು ಹೇಳಿಕೊಳ್ಳುತ್ತಾರೆ ರಾಗಿಣಿ.
ಸಾಲು ಸಾಲು ಸಿನಿಮಾಗಳು
“ಶಂಭೋ ಶಿವಶಂಕರ’ ಚಿತ್ರದ ನಿರ್ದೇಶಕ ಶಂಕರ್ ಕೋನಮಾನಹಳ್ಳಿ ಆ್ಯಕ್ಷನ್-ಕಟ್ ಹೇಳುತ್ತಿರುವ ಆ್ಯಕ್ಷನ್ ಪ್ರಧಾನ ಸಿನಿಮಾ “ಸಿಂಧೂರಿ’ಯಲ್ಲಿ ರಾಗಿಣಿ, ಧರ್ಮ ಕೀರ್ತಿರಾಜ್ಗೆ ನಾಯಕಿಯಾಗಿದ್ದಾರೆ. ಇನ್ನು ಸಾಮಾಜಿಕ ಸಂದೇಶವಿರುವ “ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದಲ್ಲಿ ಅವರು ಕುಮಾರ್ ಬಂಗಾರಪ್ಪಗೆ ಜತೆ ಕಾಣಿಸಿಕೊಳ್ಳಲಿದ್ದಾರೆ. ದೇವ ಚಕ್ರವರ್ತಿ ನಿರ್ದೇಶಿಸುತ್ತಿರುವ ಕಮರ್ಷಿಯಲ್ ಮಾಸ್ ಸಿನಿಮಾ “ಜಾವ’ದಲ್ಲಿ ರಾಜವರ್ಧನ್ಗೆ ಜೋಡಿಯಾಗಿದ್ದಾರೆ. ಅದಲ್ಲದೇ ನಂದಕಿಶೋರ್ ನಿರ್ದೇಶಿಸುತ್ತಿರುವ, ಮಲಯಾಳಂ ಸ್ಟಾರ್ ಮೋಹನ್ ಲಾಲ್ ಜತೆ ಪೀರಿಯಾಡಿಕ್ ಸಿನಿಮಾ “ವೃಷಭ’ದಲ್ಲಿ ರಾಣಿಯ ಪಾತ್ರದಲ್ಲಿ ನಟಿಸುತ್ತಿರುವ ಅವರು ತೆಲುಗು, ಹಿಂದಿ, ತಮಿಳು ಜತೆಗೆ ಒಂದು ಸಂಸತ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.
ನಾವೂ ಬದಲಾಗಬೇಕು!
“ಚಿತ್ರರಂಗ ಬದಲಾಗುತ್ತಿದೆ, ಪ್ರೇಕ್ಷಕರು ಬದಲಾಗುತ್ತಿದ್ದಾರೆ. ನಾವೂ ಬದಲಾಗಬೇಕು’ ಎನ್ನುವ ರಾಗಿಣಿ, “ಐದು ಸಾಂಗ್, ಐದು ಆ್ಯಕ್ಷನ್, ಹೀರೋ, ಹೀರೋಯಿನ್ ಇದ್ದರೆ ಮಾಸ್ ಸಿನಿಮಾ ಅನ್ನೋ ಕಾಲ ಈಗಿಲ್ಲ. ಎಲ್ಲರೂ ಬುದ್ಧಿವಂತರಾಗಿದ್ದಾರೆ. ಸಿನಿಮಾ ಚೆನ್ನಾಗಿಲ್ಲ ಅಂದರೆ ಪ್ರೇಕ್ಷಕರು ಥಿಯೇಟರ್ಗೆ ಬರುವುದಿಲ್ಲ. ಉತ್ತಮ ಗುಣಮಟ್ಟದ ಕಂಟೆಂಟ್ ನೀಡಲು, ತಂಡಗಳು ವಿಭಿನ್ನವಾಗಿ ಏನಾದರೂ ಮಾಡಬೇಕು. ಕಲಾವಿದರಾಗಿ ನಾವೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರಬೇಕು’ ಎನ್ನುತ್ತಾರೆ.
ಏಳು ರೆಡಿ, ನಾಲ್ಕು ಓಕೆ
ಕನ್ನಡದಲ್ಲಿ “ಜಾವ’, “ಸಿಂಧೂರಿ’, “ಸರ್ಕಾರಿ ನ್ಯಾಯಬೆಲೆ ಅಂಗಡಿ’, ಹಿಂದಿಯಲ್ಲಿ “ವೃಷಭ’, ಸಂಸ್ಕೃತದಲ್ಲಿ “ಶ್ಲೋಕ’, ಜತೆಗೆ ತೆಲುಗಿನಲ್ಲಿ ಸಸ್ಪೆನ್ಸ್ ಸಿನಿಮಾ ಹಾಗೂ ತಮಿಳಿನಲ್ಲೂ ಒಂದು ಸಿನಿಮಾ ಮಾಡುತ್ತಿರುವ ರಾಗಿಣಿ, ಅದರ ಜತೆಗೆ ನಾಲ್ಕು ಕಥೆ ಓಕೆ ಮಾಡಿದ್ದಾರಂತೆ. ವಿಶೇಷ ಅಂದರೆ “ಶ್ಲೋಕ’ ಚಿತ್ರಕ್ಕೆ ತಾವೇ ಸಂಸತದಲ್ಲಿ ಡಬ್ ಮಾಡಿದ್ದು, ಬಹುತೇಕ ಸ್ಮಶಾನದಲ್ಲೇ ಚಿತ್ರೀಕರಣ ನಡೆಸಿದ್ದೇವೆ ಎಂದು ಮಾಹಿತಿ ನೀಡುತ್ತಾರೆ.