

ಮಂಡಿ: ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದ ಮೂಲಕ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯ ಪಾದಾರ್ಪಣೆ ಮಾಡಿದ ಮೊದಲ ಚುನಾವಣೆಯಲ್ಲೇ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಗೆಲುವಿನ ನಗೆ ಬೀರಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಅವರು ಗೆಲುವಿನ ನಗೆ ಬೀರಿದರು. ಈ ಮೂಲಕ ಹಿಮಾಚಲ ಪ್ರದೇಶದ ಲೋಕಸಭಾ ಚುನಾವಣೆಯಲ್ಲಿ ಮಂಡಿ ಕ್ಷೇತ್ರವನ್ನು ಬಿಜೆಪಿಯ ತೆಕ್ಕೆಗೆ ಹಾಕಿದ್ದಾರೆ.
ಕಂಗನಾ ರಣಾವತ್ 5,16382 ಮತಗಳನ್ನು ಪಡೆಯುವ ಮೂಲಕ 71,663 ಅಂತರದಿಂದ ಮುನ್ನಡೆಯಲ್ಲಿದ್ದಾರೆ. ಐಎನ್‌ಸಿಯ ವಿಕ್ರಮಾದಿತ್ಯ ಸಿಂಗ್ ಅವರು 44,4719 ಮತಗಳೊಂದಿಗೆ ಹಿನ್ನಡೆ ಅನುಭವಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ ರಣಾವತ್, ಮಂಡಿಯು "ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದವರು ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಇಂದು ನಾವು ಮುನ್ನಡೆ ಸಾಧಿಸಿದ ರೀತಿಯಲ್ಲಿ ಅದು ಸ್ಪಷ್ಟವಾಗುತ್ತಿದೆ. ಮಂಡಿಯು ಹೆಣ್ಣುಮಕ್ಕಳ ಅವಮಾನಗಳನ್ನು ಸಹಿಸುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇದು ನನ್ನ ‘ಜನ್ಮಭೂಮಿ’. ನಾನು ಪ್ರಧಾನಿ ನರೇಂದ್ರ ಮೋದಿಯ ಹೆಸರಿನಲ್ಲೇ ಗೆಲುವು ಕಂಡಿದ್ದೇನೆ. ನಾನು ಇಲ್ಲಿ ಜನರ ಸೇವೆಯನ್ನು ಮುಂದುವರಿಸುತ್ತೇನೆ. ಹಾಗಾಗಿ, ನಾನು ಗೆದ್ದ ಬಳಿಕ ಮುಂಬೈಗೆ ಹೋಗುತ್ತಿಲ್ಲ. ನಾನು ಎಲ್ಲಿಯೂ ಹೋಗುವುದಿಲ್ಲ. ನನ್ನ ಪ್ರತಿಸ್ಪರ್ಧಿ ತಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಳ್ಳುವ ಮೂಲಕ ಇಲ್ಲಿಂದ ಹೊರಡಬಹುದು ಎಂದು ಹೇಳುವ ಮೂಲಕ ಬಾಲಿವುಡ್ಗೆ ಗುಡ್ಬೈ ಹೇಳುವ ಸೂಚನೆ ನೀಡಿದ್ದಾರೆ.