

ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್(Kangana Ranaut) ಅವರ ಬಹು ನಿರೀಕ್ಷಿತ ಸಿನಿಮಾ 'ಎಮರ್ಜೆನ್ಸಿ'ಯ ಎರಡನೇ ಟ್ರೇಲರ್ ಬಿಡುಗಡೆಯಾಗಿದೆ. ಎರಡನೇ ಟ್ರೇಲರ್ನಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಸಮಯದ ವಿವಾದಾತ್ಮಕ ಅಂಶವನ್ನು ತೋರಿಸಿದ್ದಾರೆ. ಇಂದಿರಾಗಾಂಧಿ ಅವರ ಪಾತ್ರದಲ್ಲಿ ನಟಿ ಕಂಗನಾ ರಣಾವತ್ ನಟಿಸಿದ್ದಾರೆ. ಚಿತ್ರದ ಮೊದಲ ಟ್ರೇಲರ್ ಅನ್ನು ಆಗಸ್ಟ್ 14, 2024 ರಂದು ಬಿಡುಗಡೆ ಮಾಡಲಾಗಿದೆ.
ಟ್ರೇಲರ್ 'ಜಯಪ್ರಕಾಶ್ ನಾರಾಯಣ' ಪಾತ್ರವನ್ನು ನಿರ್ವಹಿಸುವ ಅನುಪಮ್ ಖೇರ್ ಅವರಿಂದ ಪ್ರಾರಂಭವಾಗುತ್ತದೆ. ಜೈಲಿನಲ್ಲಿ ಕೂತು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಪತ್ರ ಬರೆದು, ಈಗ ನೀವು ಕುರ್ಚಿಯ ಮೇಲೆ ಸವಾರಿ ಮಾಡುತ್ತಿಲ್ಲ, ಆದರೆ ಸಿಂಹದ ಮೇಲೆ ಸವಾರಿ ಮಾಡುತ್ತಿದ್ದೀರಿ. ಅವರ ಗರ್ಜನೆ ಇಡೀ ಪ್ರಪಂಚದಲ್ಲಿ ಪ್ರತಿಧ್ವನಿಸುತ್ತದೆ ಎಂದು ಹೇಳುತ್ತಾರೆ. ಇದರ ನಂತರ ಕಂಗನಾ ಪ್ರವೇಶಿಸುತ್ತಾರೆ. ರಾಷ್ಟ್ರಪತಿ ಅವರೊಂದಿಗೆ ನಾನು ಕ್ಯಾಬಿನೆಟ್ ಎಂದು ಹೇಳುತ್ತಾರೆ. ನಂತರ ಟ್ರೇಲರ್ ಮುಂದೆ ಹೇಗೆ ದೇಶದಲ್ಲಿ ಯುದ್ಧ ಘೋಷಣೆಯಾಗುತ್ತದೆ ಎಂಬುದನ್ನು ತೋರಿಸುತ್ತದೆ.
ಸಿನಿಮಾದಲ್ಲಿ ಅನುಪಮ್ ಖೇರ್ ಹೊರತಾಗಿ ಶ್ರೇಯಸ್ ತಲ್ಪಾಡೆ 'ಅಟಲ್ ಬಿಹಾರಿ ವಾಜಪೇಯಿ' ಪಾತ್ರದಲ್ಲಿ ಮತ್ತು ಮಿಲಿಂದ್ ಸೋಮನ್ 'ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷಾ' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಫಸ್ಟ್ ಲುಕ್ ರಿವೀಲ್ ಆದಾಗಿನಿಂದ ಅಭಿಮಾನಿಗಳು ಈ ಸಿನಿಮಾ ನೋಡಲು ಉತ್ಸುಕರಾಗಿದ್ದರು. ಇದೀಗ ಟ್ರೇಲರ್ ಬಿಡುಗಡೆಯಾಗಿದ್ದು ಅವರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಟ್ರೇಲರ್ ನೋಡಿದ ಅಭಿಮಾನಿಗಳು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಂಗನಾ ಅವರನ್ನು ಸಿಂಹಿಣಿ ಎಂದು ಟ್ಯಾಗ್ ಮಾಡುತ್ತಿದ್ದಾರೆ. ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ, ಅವರ ಡೈಲಾಗ್ ಡೆಲಿವರಿಯಿಂದ ಎಕ್ಸ್‌ಪ್ರೆಶನ್‌ವರೆಗೆ ಎಲ್ಲವೂ ಮನಸ್ಸಿಗೆ ಮುದ ನೀಡುತ್ತದೆ, ಕಂಗನಾ ಅವರ ಈ ಚಿತ್ರವು ಮುಂದಿನ ರಾಷ್ಟ್ರೀಯ ಪ್ರಶಸ್ತಿ ಪಡೆಯಲಿದೆ, ಈ ಚಿತ್ರದಲ್ಲಿ ಕಂಗನಾ ಅವರನ್ನು ನೋಡಲು ನಾನು ಎಷ್ಟು ಉತ್ಸುಕನಾಗಿದ್ದೇನೆ, ಕಂಗನಾರಿಂದ ಮಾತ್ರ ನಾನು ಈ ಚಿತ್ರವನ್ನು ನೋಡುತ್ತೇನೆ ಎಂದು ಹೇಳುತ್ತಿದ್ದಾರೆ.
ಕಂಗನಾ ನಿರ್ದೇಶನದ ಎಮರ್ಜೆನ್ಸಿ ಸಿನಿಮಾ ಆರಂಭದಿಂದಲೂ ವಿವಾದಗಳಿಂದ ಸುತ್ತುವರಿದಿದೆ. ಸೆನ್ಸಾರ್ ಪ್ರಮಾಣಪತ್ರದ ಬಗ್ಗೆ ಸಾಕಷ್ಟು ವಿವಾದಗಳು ಉಂಟಾಗಿದ್ದವು. ಈ ಮೊದಲು ಚಿತ್ರವು 2024 ಜೂನ್ 14ರಂದು ಬಿಡುಗಡೆಯಾಗಬೇಕಿತ್ತು. ನಂತರ ಅದರ ಬಿಡುಗಡೆಯನ್ನು ಸೆಪ್ಟೆಂಬರ್ 6ಕ್ಕೆ ಬದಲಾಯಿಸಲಾಯಿತು.
ಚಿತ್ರದಲ್ಲಿ ತಮ್ಮ ಸಮುದಾಯವನ್ನು ತಪ್ಪು ಚಿತ್ರಣದಲ್ಲಿ ತೋರಿಸಲಾಗಿದೆ ಎಂದು ಸಿಖ್ ಸಮುದಾಯ ಆರೋಪಿಸಿದೆ. ಇದನ್ನು ನಿಷೇಧಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಬಳಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಿಲ್ಲ. CBFC ಪರಿಷ್ಕರಣೆ ಸಮಿತಿಯನ್ನು ರಚಿಸಿತು ಮತ್ತು ಬದಲಾವಣೆಗಳಿಗೆ ತಯಾರಕರಿಗೆ ಕೆಲವು ಸಲಹೆಗಳನ್ನು ನೀಡಿತು. ಅನೇಕ ದೃಶ್ಯಗಳನ್ನು ತೆಗೆದುಹಾಕಲು ಕೇಳಲಾಯಿತು. ಐತಿಹಾಸಿಕ ವಿಷಯಗಳ ಮೇಲೆ ಹಕ್ಕು ನಿರಾಕರಣೆಗಳನ್ನು ಹಾಕಲು ಆದೇಶಿಸಲಾಗಿದೆ. ಈ ಎಲ್ಲಾ ಬದಲಾವಣೆಗಳನ್ನು ಖಾತ್ರಿಪಡಿಸಿಕೊಂಡ ನಂತರ ಚಿತ್ರವು 2025 ಜನವರಿ 17 ರಂದು ಬಿಡುಗಡೆ ದಿನಾಂಕವನ್ನು ಪಡೆದುಕೊಂಡಿದೆ. (ಏಜೆನ್ಸೀಸ್)