ನೀರ್ಚಾಲಲ್ಲಿ ಕಂಡೊಕೋರಿ ಉತ್ಸವ

New Project (15)
Published on

ಬದಿಯಡ್ಕ: ಜೀವಸತ್ವ ಒದಗಿಸುವ ಅನ್ನ- ಅಕ್ಕಿಗೆ ಮೂಲವಾದ ಭತ್ತದ ಬೆಳೆ ನಾಟಿಯ ಬಗ್ಗೆ ಅರಿವು ಒದಗಿಸುವ ನಿಟ್ಟಿನಲ್ಲಿ ನೀರ್ಚಾಲು ಬನವಾಸಿಯ ಗದ್ದೆಯಲ್ಲಿ ಭಾನುವಾರ ಕಂಡೊಕೋರಿ ಉತ್ಸವ ನಡೆಯಿತು.

ಭತ್ತದ ಬೆಳೆಯ ಬಗ್ಗೆ ಸಿದ್ಧಾಂತ ವಾದಕ್ಕಿಂತ ಪ್ರಾಯೋಗಿಕ ನೆಲೆಯಲ್ಲಿ ಕಾರ್ಯೋನ್ಮುಖರಾದಾಗಷ್ಟೇ ನೈಜ ಗುರಿ ತಲುಪಲು ಸಾಧ್ಯ ಎಂದು ಉತ್ಸವ ಉದ್ಘಾಟಿಸಿದ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ತಿಳಿಸಿದರು.

ಜಿಲ್ಲೆಯ 13 ಶಾಲೆಗಳ ಆಸಕ್ತ ನೂರಾರು ವಿದ್ಯಾರ್ಥಿಗಳು, ಸ್ಥಳೀಯರು, ಜನಪ್ರತಿನಿಧಿಗಳು, ಹೆತ್ತವರು, ಕೃಷಿಕರು, ಕೃಷಿ ತಜ್ಞರು, ವೈದ್ಯರು ಮೊದಲಾದವರು ಸಮಾರಂಭಕ್ಕೆ ಸಾಕ್ಷಿಯಾದರು. ಗದ್ದೆಯಲ್ಲಿ ಮಕ್ಕಳಿಗೆ ವಿವಿಧ ಗ್ರಾಮೀಣ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಜನಪದ ಕೃಷಿ ಕಲಾವಿದೆ ಲಕ್ಷ್ಮೀ ಕುಂಬ್ಡಾಜೆ, ರಾಧಾ ಮಣ್ಣಾಪು ನಾಟಿ ಕಾರ್ಯಕ್ಕೆ ಮೆರುಗು ನೀಡಿದರು.

ಕೃಷ್ಣ ಮಣಿಯಾಣಿ ಮಲ್ಲಮೂಲೆ, ಶ್ರೀನಿವಾಸ ಆಳ್ವ ಕಳತ್ತೂರು ಗೊರಗೆ, ಮುಟ್ಟಾಳೆ, ನೊಗ, ನೇಗಿಲು ಮೊದಲಾದ ಪಾರಂಪರಿಕ ಕೃಷಿ ಉಪಕರಣಗಳ ಮಹತ್ವ ವಿವರಿಸಿದರು. ಬದಿಯಡ್ಕ ಗ್ರಾಪಂ ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಪ್ರಾಧ್ಯಾಪಕ ಡಾ.ರಾಜೇಶ್ ಬೆಜ್ಜಂಗಳ, ಶಿಕ್ಷಕ ದಿವಾಕರ ಬಲ್ಲಾಳ್, ರಾಜೇಶ್ ಅಗಲ್ಪಾಡಿ, ಅನಿಲ್ ಕುಮಾರ್, ಸುಜಿತ್ ಉಪ್ಪಳ, ಜಲಜಾಕ್ಷಿ ಮೊದಲಾದವರು ಆಟೋಟ ಸ್ಪರ್ಧೆಗೆ ನೇತೃತ್ವ ನೀಡಿದರು. ನಾಲ್ಕಕ್ಕಿಂತ ಹೆಚ್ಚು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಪೆರಡಾಲ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿ ಸಂದೇಶ ಅವರಿಗೆ ಬನವಾಸಿ ಕಂಡೊಕೋರಿ ಬಿರ್ಸೆ ಎಂದು ಅಭಿನಂದಿಸಲಾಯಿತು. ಕಾರ್ಯಕ್ರಮ ಆಯೋಜಕ ಡಾ.ರತ್ನಾಕರ ಮಲ್ಲಮೂಲೆ ದಂಪತಿ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net