ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ಕೊರತೆ

Kanakagiri KPS school
ಕನಕಗಿರಿ ಕರ್ನಾಟಕ ಪಬ್ಲಿಕ್ ಶಾಲೆ
Published on

ಮೂವರು ಮಾತ್ರ ಕಾಯಂ | ಕನಕಗಿರಿಯ ಸ್ಕೂಲ್‌ನಲ್ಲಿ ಎಲ್ಲ ವಿಷಯಕ್ಕೆ ಒಬ್ಬರೇ ಗುರು

ಮಧುಸೂದನ ಎಚ್. ಮಾದಿನಾಳ

ಕನಕಗಿರಿ: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ ವಿಷಯ ಬೋಧನಾ ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ತರಗತಿಗೊಬ್ಬರೇ ಶಿಕ್ಷಕರು ಎಲ್ಲ ವಿಷಯಗಳನ್ನು ಬೋಧಿಸುವಂತಾಗಿದೆ. ಇದು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಆರೋಪಗಳು ಕೇಳಿಬಂದಿವೆ.

ಎಲ್‌ಕೆಜಿಯಿಂದ ಪ್ರಸ್ತುತ 6ನೇ ತರಗತಿವರೆಗೆ ಒಟ್ಟು 370 ವಿದ್ಯಾರ್ಥಿಗಳಿದ್ದಾರೆ. ಎಲ್‌ಕೆಜಿಯಿಂದ ಮೂರನೇ ತರಗತಿವರೆಗೆ ತಲಾ 60, 4ರಿಂದ 6ನೇ ತರಗತಿವರೆಗೆ ತಲಾ 30 ವಿದ್ಯಾರ್ಥಿಗಳಿದ್ದಾರೆ. ಕೇವಲ ಮೂವರು ಶಿಕ್ಷಕಿಯರು ಮಾತ್ರ ಕಾಯಂ ಇದ್ದು, ಇವರಲ್ಲಿ ಓರ್ವರು ಇಂಗ್ಲಿಷ್ ಶಿಕ್ಷಕಿಯಾಗಿದ್ದು, ಇನ್ನಿಬ್ಬರು ಕನ್ನಡ ಶಿಕ್ಷಕರಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ಶಾಲೆಗೆ 5 ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದು, ಅದರಲ್ಲಿಯೂ ವಿಷಯವಾರು ಶಿಕ್ಷಕರಿಲ್ಲ ಎನ್ನಲಾಗಿದೆ.

ಶಾಲೆ ಆರಂಭವಾಗಿ ತಿಂಗಳು ಕಳಿಯುತ್ತಾ ಬಂದರೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ದೊರೆಯದೆ ಇರುವುದು ಶೋಚನೀಯ. ಒಂದರಿಂದ ಮೂರನೇ ತರಗತಿವರೆಗೆ ನಲಿ-ಕಲಿಯಿದೆ. 4 ಹಾಗೂ 5ನೇ ತರಗತಿಗೆ ನಾಲ್ಕು ವಿಷಯಗಳು ಹಾಗೂ 6ನೇ ತರಗತಿಗೆ 6 ವಿಷಯಗಳಿವೆ. ಭಾಷಾ ವಿಷಯಗಳನ್ನು ಹೊರೆತುಪಡಿಸಿ ಉಳಿದ ವಿಷಯಗಳನ್ನು ಆಂಗ್ಲ ಭಾಷೆಯಲ್ಲಿಯೇ ಬೋಧಿಸಬೇಕು. ಆದರೆ, 4, 5 ಹಾಗೂ 6ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭವಾದಾಗಿನಿಂದ ಬಿಡುವವರೆಗೂ ಆ ತರಗತಿಗೆ ಹೋದ ಶಿಕ್ಷಕರೇ ಬೋಧಿಸುತ್ತಿದ್ದಾರೆ. 6ನೇ ತರಗತಿಗೆ ಹಿಂದಿಯ ಜತೆಗೆ ಇತರೇ ವಿಷಯದ ಬುನಾದಿ ಬೀಳಬೇಕಿದೆ. ಆದರೆ, ಇಲ್ಲಿ ಎಲ್ಲ ವಿಷಯಗಳನ್ನು ಒಬ್ಬರೇ ಬೋಧಿಸುತ್ತಿರುವುದು ವಿದ್ಯಾರ್ಥಿಗಳಿಗೆ ಪರಿಣಾಮ ಬೀರುತ್ತದೆಯೇ? ಎನ್ನುವ ಪ್ರಶ್ನೆ ಹುಟ್ಟುಹಾಕುತ್ತಿದೆ. ಜತೆಗೆ ಮಕ್ಕಳು ಆ ಶಿಕ್ಷಕರನ್ನು ಹೊರತುಪಡಿಸಿ ಮತ್ಯಾರು ನಮ್ಮ ಶಿಕ್ಷಕರಲ್ಲ ಎನ್ನುವ ಮನೋಭಾವನೆ ಮೂಡುತ್ತದೆ ಎಂದು ಪಾಲಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಮೀಟಿಂಗ್ ನಡೆಸದ ಮುಖ್ಯಶಿಕ್ಷಕ


ಶಾಲೆ ಆರಂಭವಾಗಿ ತಿಂಗಳಾದರೂ ಮುಖ್ಯ ಶಿಕ್ಷಕರು ಒಮ್ಮೆಯೂ ಶಿಕ್ಷಕರ ಸಭೆ ನಡೆಸಿಲ್ಲ. ಇದರಿಂದ ಬೇರೆ ಬೇರೆ ಶಿಕ್ಷಕರಿಂದ ವಿಷಯದ ಬೋಧನೆ ಮಾಡುವಸಲು ವಾಗಿ ವೇಳಾ ಪಟ್ಟಿ ತಯಾರಾಗಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ. ಶಿಕ್ಷಕಿಯರು ಅನಿವಾರ್ಯವಾಗಿ ಒಂದೇ ತರಗತಿಗೆ ಅಂಟಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಚನೆಯಾಗದ ಎಸ್‌ಡಿಎಂಸಿ

ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜು ಸೇರಿ ಕೆಪಿಎಸ್ ಆಗಿದ್ದು, ನಾಲ್ಕೈದು ವರ್ಷಗಳಿಂದಲೂ ಎಸ್‌ಡಿಎಂಸಿ ರಚನೆಯಾಗಿಲ್ಲ. ಇದರಿಂದ ಶಾಲೆ, ಮಕ್ಕಳ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ.

ಬೇಡಿಕೆಗನುಸಾರ ಜಿಲ್ಲೆಯಲ್ಲಿ ಖಾಲಿಯಿದ್ದ 1757 ಶಿಕ್ಷಕರ ಹುದ್ದೆಗಳನ್ನು ಅತಿಥಿ ಶಿಕ್ಷಕರಿಂದ ತುಂಬಿಕೊಳ್ಳಲಾಗಿದೆ. ಒಬ್ಬರೇ ಬೋಧನೆ ಮಾಡಲು ಅವಕಾಶವಿಲ್ಲ. ಈಗಾಗಲೇ ಮೀಟಿಂಗ್ ಮಾಡಿ ವೇಳಾಪಟ್ಟಿ ತಯಾರಿಸಿ ವಿಷಯವಾರು ಶಿಕ್ಷಕರು ಬೋಧನೆ ಮಾಡುವಂತೆ ಸೂಚಿಸಲಾಗಿದೆ. ಆದೇಶವನ್ನು ಪಾಲಿಸದಿದ್ದರೆ, ಬಿಇಒ, ಮುಖ್ಯಶಿಕ್ಷಕರೇ ಹೊಣೆಯಾಗಲಿದ್ದಾರೆ.| ಶ್ರೀಶೈಲ ಬಿರಾದಾರ ಡಿಡಿಪಿಐ ಕೊಪ್ಪಳ

ಈ ಸಮಸ್ಯೆ ಕಳೆದ ವರ್ಷದಿಂದಲೂ ಇದೆ. ಇದರಿಂದ ಹಲವು ಪಾಲಕರು ಮಕ್ಕಳನ್ನು ಬೇರೆ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಬಡವರು, ಮಧ್ಯಮ ವರ್ಗದವರು ಮಾತ್ರ ಅನಿವಾರ್ಯವಾಗಿ ಉಳಿದಿದ್ದು, ಸಮಸ್ಯೆ ಮುಂದುವರೆದರೆ ನಾವುಗಳು ಬೇರೆ ಶಾಲೆಗಳತ್ತ ಮುಖ ಮಾಡಬೇಕಾಗುತ್ತೆ.| ಮಹ್ಮದ ರಫೀ ವಿದ್ಯಾರ್ಥಿ ಪಾಲಕ

12 ಅತಿಥಿ ಶಿಕ್ಷಕರ ಬೇಡಿಕೆಯಿಡಲಾಗಿತ್ತು. ಆದರೆ, 9 ಅತಿಥಿ ಶಿಕ್ಷಕರರನ್ನು ಮಾತ್ರ ಇಲಾಖೆ ಮಂಜೂರು ಮಾಡಲಾಗಿದೆ. ಅದರಲ್ಲಿ ಆಂಗ್ಲ ವಿಭಾಗಕ್ಕೆ ಐವರನ್ನು ನೀಡಲಾಗಿದೆ. ವಿಷಯ ಶಿಕ್ಷಕರ ಕೊರತೆಯಿದೆ. ಶೀಘ್ರವೇ ಮೀಟಿಂಗ್ ಕರೆದು ವೇಳಾಪಟ್ಟಿ ತಯಾರಿಸಲಾಗುವುದು. ವಿಷಯವಾರು ಬೋಧನೆಗೆ ಅವಕಾಶ ಕಲ್ಪಿಸಲಾಗುವುದು.| ತುಳಜಾ ನಾಯ್ಕ ಮುಖ್ಯ ಶಿಕ್ಷಕ ಕೆಪಿಎಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net