ಪುಷ್ಪ ಯಾಗದೊಂದಿಗೆ ಕನಕಾಚಲಪತಿ ಜಾತ್ರೆಗೆ ತೆರೆ

Sridevi-Bhudevi
ಪುಷ್ಪಯಾಗದ ಮೂಲಕ ಶ್ರೀ ಕನಕಾಚಲಪತಿ ಜಾತ್ರೆ ಸಂಪನ್ನಗೊಂಡಿತು.
Published on

ಕನಕಗಿರಿ: ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹ ಸ್ವಾಮಿಗೆ ಸೋಮವಾರ ತಡರಾತ್ರಿ ಪುಷ್ಪಯಾಗ ನಡೆಸುವುದರೊಂದಿಗೆ 13 ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.

ಪುಷ್ಪಯಾಗದ ಹಿನ್ನೆಲೆಯಲ್ಲಿ ಕನಕಾಚಲ, ಶ್ರೀದೇವಿ, ಭೂದೇವಿಯರಿಗೆ ನಾನಾ ಪುಷ್ಪಗಳ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆ, ಮಂಗಳಾರತಿ ಕಾರ್ಯಕ್ರಮಗಳು ಮೈಸೂರಿನ ಯಾಜ್ಞಿಕರಿಂದ ಶ್ರದ್ಧಾಭಕ್ತಿಯಿಂದ ನಡೆದವು.

ಇದಕ್ಕೂ ಮೊದಲು ಕನಕಾಚಲಪತಿ ದೇವಸ್ಥಾನದಿಂದ ಆರಂಭಗೊಂಡ ಉತ್ಸವ ಮೆರವಣಿಗೆ, ರಾಜಬೀದಿ ಮೂಲಕ ತೇರಿನ ಹನುಮಪ್ಪ ದೇವಸ್ಥಾನದವರೆಗೆ ಸಾಗಿ ವಿಶೇಷ ಪೂಜೆಯೊಂದಿಗೆ ದೇವಸ್ಥಾನಕ್ಕೆ ಮರಳಿತು. ಭಕ್ತರು ಉತ್ಸವ ಹೊತ್ತು ಸಂಭ್ರಮಿಸಿದರು.

ಜಾತ್ರೆಯಲ್ಲಿ ಸೇವೆ ಸಲ್ಲಿಸಿದ ರಥ, ಉತ್ಸವ ಕಟ್ಟುವ ಕೆಲಸಗಾರರು, ಚಿತ್ರಗಾರರು, ಭಾಜಾ ಭಜಂತ್ರಿ, ಕಮ್ಮಾರರು ಹಾಗೂ ದಿವಟಗಿ, ಛತ್ರಿ ಹಿಡಿಯುವ ಸೇವಕರನ್ನು ದೇವಸ್ಥಾನ ಆಡಳಿತ ಮಂಡಳಿಯಿಂದ ಗೌರವಿಸಲಾಯಿತು.

ದೇವಸ್ಥಾನ ಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ, ಕಾಮಾಟಿಗರಾದ ಕನಕರೆಡ್ಡಿ ಮಹಲಿನಮನಿ, ಶರಣಬಸವರೆಡ್ಡಿ ಹುಲಿಹೈದರ, ಗುಂಡಪ್ಪ ಚಿತ್ರಗಾರ, ರಾಮಾಂಜನೇಯರೆಡ್ಡಿ ಚಿತ್ರಿಕಿ, ರಂಗಪ್ಪ ನಾಯಕ, ಅಯ್ಯನಗೌಡರೆಡ್ಡಿ, ಹನುಮೇಶ ಡಿಶ್, ಮುದುಕರೆಡ್ಡಿ, ಬಸವರಾಜ ಬಳಿಗಾರ, ಹುಚ್ಚಾರೆಡ್ಡಿ ಹುಲಿಹೈದರ, ವಿನಯ ಮರಾಠಿ, ರಾಜಶೇಖರರೆಡ್ಡಿ ಓಣಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net