

ಉಪ್ಪಿನಂಗಡಿ: ಸಂತಕವಿ ಕನಕದಾಸ, ತತ್ತ್ವ ಪದಕಾರ ಅಧ್ಯಯನ ಕೇಂದ್ರ ಕೊಡಮಾಡುವ ‘ಕನಕ ಗೌರವ ಪ್ರಶಸ್ತಿ’ಯನ್ನು ಹಿರಿಯ ಸಾಹಿತಿ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಪಂಜಳದ ಡಾ.ತಾಳ್ತಜೆ ವಸಂತ ಕುಮಾರ ಅವರಿಗೆ ಸೋಮವಾರ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು.
ಕನಕ ಗೌರವ ಪ್ರಶಸ್ತಿ 75 ಸಾವಿರ ನಗದು, ಪುರಸ್ಕಾರವನ್ನು ಒಳಗೊಂಡಿದೆ. ನಾನಾ ಕಾರಣಗಳಿಂದ ನಾಲ್ಕು ವರ್ಷದಿಂದ ‘ಕನಕ ಗೌರವ ಪ್ರಶಸ್ತಿ’ ಹಾಗೂ ‘ಕನಕ ಯುವ ಪುರಸ್ಕಾರ’ ಘೋಷಣೆ ಮಾಡದೆ ಇದ್ದ ಅಧ್ಯಯನ ಕೇಂದ್ರ ಈ ಬಾರಿ ಎರಡೂ ಪ್ರಶಸ್ತಿಗೆ ಸಾಹಿತಿಗಳನ್ನು ಆಯ್ಕೆ ಮಾಡಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.