

ಕಂಪ್ಲಿ; ರೈತರಿಗೆ ಸಮರ್ಪಕ, ಸಕಾಲ ಹಾಗೂ ನಿಗದಿತ ದರದಲ್ಲಿ ರಸಗೊಬ್ಬರ ಪೂರೈಸುವಂತೆ ಜಿಲ್ಲಾಡಳಿತ ನಿಗಾವಹಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘ, ರಾಜ್ಯ ರೈತರ ಸಂಘ(ಜೆ.ಕಾರ್ತಿಕ್ ಬಣ), ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ಪದಾಧಿಕಾರಿಗಳು ತಹಸೀಲ್ದಾರ್ ಜೂಗಲ ಮಂಜುನಾಯಕ ಹಾಗೂ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ರಾಜ್ಯ ಕಿಸಾನ್ ಜಾಗೃತಿ ಸಂಘದ ಜಿಲ್ಲಾಧ್ಯಕ್ಷ ಬಿ.ಗಂಗಾಧರ ಮಾತನಾಡಿ, ತಾಲೂಕಿನಲ್ಲಿ ರಸಗೊಬ್ಬರವನ್ನು ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಮಾರಾಟ ಮಾಡಲು ಆದ್ಯತೆ ನೀಡಬೇಕು. ರಸಗೊಬ್ಬರ ಮಾರಾಟ ಮಳಿಗೆಯವರು ಯೂರಿಯಾವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದು ಗೊತ್ತಿದ್ದರೂ ಸಹ ಕೃಷಿ ಅಧಿಕಾರಿಗಳು ನಿರ್ಲಕ್ಷೃ ತೋರಿದ್ದಾರೆ ಎಂದು ದೂರಿದರು.
ನಾಟಿ ಸಮಯದಲ್ಲಿಯೇ ಯೂರಿಯಾ ರೈತರಿಗೆ ಸಿಗುತ್ತಿಲ್ಲ. ಒಂದು ವಾರದೊಳಗಾಗಿ ರೈತರಿಗೆ ಸಮರ್ಪಕವಾಗಿ ಯೂರಿಯಾ ಸೇರಿದಂತೆ ರಸಗೊಬ್ಬರ ದೊರಕಿಸುವ ಕ್ರಮವನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಎಸ್.ಎ.ಖಾದ್ರಿ, ಬಿ.ವಿ.ಗೌಡ, ಕೊಟ್ಟೂರು ರಮೇಶ, ಸಿ.ಎ.ಚನ್ನಪ್ಪ, ಎಂ.ರತ್ನಮ್ಮ, ವಿ.ಉಷಾ, ಗುಬಾಜಿ ರಾಮಾಂಜಿನಿ, ವಿ.ನಾಗರಾಜ ಯಾದವ್, ಹರ್ಷಿತ್, ರೈತರಿದ್ದರು.